Advertisement

ಉಗ್ರ ಮಸೂದ್‌ ನಿಷೇಧಕ್ಕೆ ಚೀನಾ ಅಡ್ಡಗೋಡೆ

10:30 AM Feb 08, 2017 | Karthik A |

ಹೊಸದಿಲ್ಲಿ: ಪಠಾಣ್‌ಕೋಟ್‌ ಭಯೋತ್ಪಾದಕ ದಾಳಿಯ ಪಾತಕಿ, ಜೈಶ್‌- ಎ- ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆ ಕಪ್ಪು ಪಟ್ಟಿಗೆ ಸೇರಿಸಲು ಭಾರತ ಶತಾಯಗತಾಯ ಯತ್ನಿಸುತ್ತಿರುವಂತೆಯೇ, ಈಗ ಅದೇ ಕೆಲಸವನ್ನು ಅಮೆರಿಕ ಕೂಡ ಮಾಡಿದೆ. 

Advertisement

ಮಸೂದ್‌ನನ್ನು ಅಂತಾರಾಷ್ಟ್ರೀಯ ಉಗ್ರನೆಂದು ಘೋಷಿಸುವ ಶಿಫಾರಸನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ಅಮೆರಿಕ ಮಂಗಳವಾರ ಮಂಡಿಸಿದೆ. ಇದಕ್ಕೆ ಬ್ರಿಟನ್‌, ಫ್ರಾನ್ಸ್‌ ದೇಶಗಳು ಬೆಂಬಲ ಸೂಚಿಸಿದ್ದವು. ಆದರೆ ಯಾವತ್ತಿನಂತೆ ಈ ಬಾರಿಯೂ ಪಾಕಿಸ್ಥಾನದ ಪರಮಾಪ್ತ ಚೀನ ಇದಕ್ಕೆ ಅಡ್ಡಗಾಲು ಹಾಕಿದೆ. ಇದಕ್ಕೂ ಮೊದಲು ಭಾರತ ಡಿಸೆಂಬರ್‌ನಲ್ಲಿ ಕೂಡ ಮಸೂದ್‌ನನ್ನು ಅಂತಾರಾಷ್ಟ್ರೀಯ ಉಗ್ರನೆಂದು ಘೋಷಿಸುವ ಶಿಫಾರಸನ್ನು ಮಂಡಿಸಿದ್ದು, ಇದರ ವಿರುದ್ಧ ಚೀನ ತನ್ನ ಹಕ್ಕನ್ನು ಚಲಾಯಿಸಿತ್ತು. ಈ  ಬಾರಿ ಭದ್ರತಾ ಸಮಿತಿಯ ಇತರ 2 ಸದಸ್ಯ ರಾಷ್ಟ್ರಗಳಾದ ಬ್ರಿಟನ್‌, ಫ್ರಾನ್ಸ್‌ ಬೆಂಬಲದೊಂದಿಗೆ ಅಮೆರಿಕ ಶಿಫಾರಸು ಮಂಡನೆಗೆ ಮುಂದಾಗಿದ್ದು, ಚೀನ ಮತ್ತೆ ಇದನ್ನು ವಿರೋಧಿಸಿದೆ. ಮಸೂದ್‌ನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸುವ ಬಗ್ಗೆ ಹೊಸದಿಲ್ಲಿ – ವಾಷಿಂಗ್ಟನ್‌ ನಡುವೆ ನಡೆದಿದ್ದ ಮಾತುಕತೆಗಳು ಫ‌ಲಪ್ರದವಾಗಿವೆ ಎನ್ನಲಾಗಿದೆ.

ಜೈಶ್‌ಗೆ ನಿಷೇಧ, ಮಸೂದ್‌ಗೆ ಇಲ್ಲ!: ಈ ಮೊದಲೇ ಭದ್ರತಾ ಸಮಿತಿಯ 15 ರಾಷ್ಟ್ರಗಳು ಜೈಶ್‌ – ಎ-ಮೊಹಮ್ಮದ್‌ ಉಗ್ರ ಸಂಘಟನೆಯನ್ನು ಕಪ್ಪು ಪಟ್ಟಿಗೆ ಸೇರಿಸಿವೆ. ಆದರೆ ಅದರ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಸೇರಿಸಲಾಗಿಲ್ಲ. ಇದಕ್ಕೆ ಚೀನ ತನ್ನ ಖಾಯಂ ಸದಸ್ಯತನದ ಅಧಿಕಾರದಿಂದ ತಡೆಯೊಡ್ಡುತ್ತಲೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next