Advertisement

ಚಳಿಯಲ್ಲೂ ಹೊಳೆವ ಮುಖ…ಮನೆಯಲ್ಲೇ ಮಾಯಿಶ್ಚರೈಸರ್‌

06:00 AM Nov 23, 2018 | |

ಚಳಿಗಾಲ ಬಂತೆಂದರೆ ಮೊಗದ ಚರ್ಮ ಒಣಗಿ, ಒರಟಾಗುವುದು, ಒಡೆದು ಕಳಾಹೀನವಾಗುವುದು ಸಾಮಾನ್ಯ. ಮನೆಯಲ್ಲೇ ಮಾಯಿಶ್ಚರೈಸರ್‌ (ತೇವಾಂಶಕಾರಕ) ಲೇಪಗಳನ್ನು ತಯಾರಿಸಿ ಉಪಯೋಗಿಸಿದರೆ ಮೈಮನಗಳಿಗೂ ಹಿತಕರ, ಮೊಗವೂ ಫ‌ಳಫ‌ಳ!

Advertisement

ಆಲಿವ್‌ ತೈಲದ ಮಾಯಿಶ್ಚರೈಸರ್‌
1/2 ಕಪ್‌ ಆಲಿವ್‌ ತೈಲ, 8 ಚಮಚ ಕೊಬ್ಬರಿ ಎಣ್ಣೆ , 20 ಹನಿ ವಿಟಮಿನ್‌ “ಈ’ ತೈಲ, 8 ಚಮಚ ಜೇನುಮೇಣ- ಈ ಸಾಮಗ್ರಿಗಳನ್ನು ತೆಗೆದುಕೊಂಡು ಮೊದಲು ಒಂದು ಪಾತ್ರೆಯಲ್ಲಿ ಆಲಿವ್‌ತೈಲ ಹಾಗೂ ಕೊಬ್ಬರಿ ಎಣ್ಣೆ ಬೆರೆಸಿ ಕಲಕಬೇಕು. ತದನಂತರ ಅದನ್ನು ಒಲೆಯ ಮೇಲಿರಿಸಿ ಸಣ್ಣ ಉರಿಯಲ್ಲಿ ಜೇನುಮೇಣ ಬೆರೆಸಿ ಬಿಸಿ ಮಾಡಬೇಕು. ಕೊನೆಯಲ್ಲಿ 20 ಹನಿ ವಿಟಮಿನ್‌ “ಈ’ ತೈಲ ಬೆರೆಸಿ, ಆರಲು ಬಿಡಬೇಕು. ಈಗ ಆಲಿವ್‌ ತೈಲದ ಮಾಯಿಶ್ಚರೈಸರ್‌ ತಯಾರು!

ಆಲಿವ್‌ ತೈಲ ಹಾಗೂ ಕೊಬ್ಬರಿ ಎಣ್ಣೆಯ ಮಿಶ್ರಣ ಚರ್ಮದ ಒಣಗುವಿಕೆ ಮತ್ತು ಒರಟುತನ ನಿವಾರಣೆ ಮಾಡಿ, ಚರ್ಮಕ್ಕೆ ಮೃದುತ್ವ ಹಾಗೂ ಕಾಂತಿ ನೀಡುತ್ತದೆ. ವಿಟಮಿನ್‌ “ಈ’ ಚರ್ಮಕ್ಕೆ ಉತ್ತಮ ಟಾನಿಕ್‌.

ಬೆಣ್ಣೆ ಹಣ್ಣಿನ ಮಾಯಿಶ್ಚರೈಸರ್‌
ಅವಾಕಾಡೋ ಅಥವಾ ಬೆಣ್ಣೆ ಹಣ್ಣಿನ ತಿರುಳು 4 ಚಮಚ, ತಾಜಾ ಹಾಲಿನ ಕೆನೆ 2 ಚಮಚ, ಜೇನುತುಪ್ಪ 2 ಚಮಚ ಇವೆಲ್ಲವನ್ನೂ ಒಂದು ಬೌಲ್‌ನಲ್ಲಿ ಚೆನ್ನಾಗಿ ಮಿಶ್ರ ಮಾಡಬೇಕು. ಮುಖಕ್ಕೆ ವರ್ತುಲಾಕಾರವಾಗಿ ಮಾಲೀಶು ಮಾಡಿ ಲೇಪಿಸಬೇಕು. ಕುತ್ತಿಗೆಗೆ ಕೆಳಗಿನಿಂದ ಮೇಲಕ್ಕೆ ಮಾಲೀಶು ಮಾಡಿ ಹಚ್ಚಬೇಕು. ಕೈಗಳಿಗೆ ಹಾಗೂ ಕಾಲುಗಳಿಗೆ ಮೇಲಿನಿಂದ ಕೆಳಗೆ ಲೇಪಿಸಿ ಮಾಲೀಶು ಮಾಡಬೇಕು. 15 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದರೆ ಚರ್ಮ ಮೃದು ಹಾಗೂ ಸ್ನಿಗ್ಧವಾಗುತ್ತದೆ. ಚರ್ಮ ಒಡೆಯುವುದು, ನೆರಿಗೆ, ತುರಿಕೆ ಇತ್ಯಾದಿಗಳು ನಿವಾರಣೆಯಾಗುತ್ತವೆ.

ಸೇಬುಹಣ್ಣಿನ ಮಾಯಿಶ್ಚರೈಸರ್‌
2 ಸೇಬು ಹಣ್ಣುಗಳ ಬೀಜಗಳನ್ನು ತೆಗೆದು, ಕತ್ತರಿಸಿ ಬ್ಲೆಂಡರ್‌ನಲ್ಲಿ 2 ಚಮಚ ಕೊಬ್ಬರಿ ಎಣ್ಣೆ , 1 ಚಮಚ ಬಾದಾಮಿ ಎಣ್ಣೆಯೊಂದಿಗೆ ಬ್ಲೆಂಡ್‌ ಮಾಡಬೇಕು. ನಯವಾದ ಪೇಸ್ಟ್‌ ತಯಾರಿಸಿದ ಬಳಿಕ ಇದನ್ನು ಪಾತ್ರೆಯಲ್ಲಿ ತೆಗೆದುಕೊಂಡು ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಒಲೆಯಿಂದ ಕೆಳಗಿಳಿಸಿ, 20 ಚಮಚ ಶುದ್ಧ ಗುಲಾಬಿ ಜಲ ಬೆರೆಸಬೇಕು. ಆರಿದ ಬಳಿಕ ಇದನ್ನು ಮೊಗ, ಕೈಕಾಲುಗಳಿಗೆ ಲೇಪಿಸಿದರೆ ಉತ್ತಮ ತೇವಾಂಶವರ್ಧಕವಾಗಿದ್ದು, ಚಳಿಗಾಲದ ಚರ್ಮದ ಒಣಗುವಿಕೆ, ಒಡೆಯುವಿಕೆಯನ್ನು ನಿವಾರಣೆ ಮಾಡುತ್ತದೆ.

Advertisement

ಗ್ರೀನ್‌ ಟೀ ಡೀಟಾಕ್ಸ್‌ ಮಾಯಿಶ್ಚರೈಸರ್‌
ಸಾಮಗ್ರಿಗಳು: 10 ಚಮಚ ಗ್ರೀನ್‌ಟೀ, 10 ಚಮಚ ಬಾದಾಮಿ ತೈಲ, 10 ಚಮಚ ಗುಲಾಬಿ ಜಲ, 10 ಚಮಚ ಜೇನುಮೇಣ, 5 ಚಮಚ ಎಲೋವೆರಾ ರಸ.

ಮೊದಲು ಒಂದು ಪಾತ್ರೆಯಲ್ಲಿ ಜೇನುಮೇಣ ಹಾಗೂ ಬಾದಾಮಿ ತೈಲವನ್ನು ಸಣ್ಣ ಉರಿಯಲ್ಲಿ ಕರಗಿಸಿ, ಬಿಸಿ ಮಾಡಬೇಕು. ತದನಂತರ ಉಳಿದ ಸಾಮಗ್ರಿಗಳನ್ನು ಬೆರೆಸಿ ಚೆನ್ನಾಗಿ ಕಲಕಬೇಕು. ಈ ಮಾಯಿಶ್ಚರೈಸರ್‌ ತೇವಾಂಶ ವರ್ಧಿಸುವ ಜೊತೆಗೆ ಚರ್ಮದಲ್ಲಿರುವ ಟಾಕ್ಸಿನ್‌ಗಳನ್ನೂ ನಿವಾರಣೆ ಮಾಡುತ್ತದೆ.

ತುಟಿಗಳ ತೇವಾಂಶವರ್ಧಕ ಸ್ಕ್ರಬ್‌
1 ಚಮಚ ಶುದ್ಧ ಜೇನು, 1/2 ಚಮಚ ಸಕ್ಕರೆ ಬೆರೆಸಿ ಚೆನ್ನಾಗಿ ಮಿಶ್ರ ಮಾಡಬೇಕು. ಇದನ್ನು ತುಟಿಗಳಿಗೆ ಲೇಪಿಸಿ ಮೃದುವಾಗಿ ಮಾಲೀಶು ಮಾಡಿ 10 ನಿಮಿಷಗಳ ಬಳಿಕ ತೊಳೆದು, ಬಾದಾಮಿ ತೈಲ (1/4 ಚಮಚ) ಹಾಗೂ ಬೀಟ್‌ರೂಟ್‌ ರಸ (1/4 ಚಮಚ) ಬೆರೆಸಿ ಲೇಪಿಸಬೇಕು. ಇದು ಒಡೆದ ಹಾಗೂ ಒಣಗಿದ ತುಟಿಗಳ ಒಣ ಚರ್ಮವನ್ನು ಎಕ್ಸ್‌ಪೊಲಿಯೇಟ್‌ ಮಾಡಿ, ತುಟಿಗಳ ತೇವಾಂಶ ಹಾಗೂ ಗುಲಾಬಿಯನ್ನು ವರ್ಧಿಸುತ್ತದೆ.

ಮನೆಯಲ್ಲೇ ತಯಾರಿಸುವ ವೆನಿಲ್ಲಾ ಬಾಡಿಲೋಶನ್‌
1/4 ಕಪ್‌ ಜೇನುಮೇಣ, 1/4 ಕಪ್‌ ಕೊಬ್ಬರಿಎಣ್ಣೆ , 1/2 ಕಪ್‌ ಆಲಿವ್‌ತೈಲ, 20 ಹನಿ ವೆನಿಲ್ಲಾ ತೈಲ.
ಮೊದಲು ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆ , ಆಲಿವ್‌ ತೈಲ ಬೆರೆಸಿ ಮಿಶ್ರಮಾಡಿ ತದನಂತರ ಜೇನುಮೇಣ ಬೆರೆಸಿ ಸಣ್ಣ ಉರಿಯಲ್ಲಿ ಕರಗುವವರೆಗೆ ಬಿಸಿ ಮಾಡಬೇಕು. ಆರಿದ ಬಳಿಕ ವೆನಿಲ್ಲಾ ತೈಲ ಬೆರೆಸಿದರೆ ಪರಿಮಳಯುಕ್ತ, ತೇವಾಂಶವರ್ಧಕ ಬಾಡಿಲೋಶನ್‌ ತಯಾರು. ಚಳಿಗಾಲದಲ್ಲಿ ಇದನ್ನು ನಿತ್ಯ ದೇಹಕ್ಕೆ ಲೇಪಿಸಿದರೆ, ತ್ವಚೆ ಒಣಗುವುದಿಲ್ಲ. ಕಾಂತಿಯೂ ವರ್ಧಿಸುತ್ತದೆ.

ಪರಿಮಳಯುಕ್ತ ಬಾಡಿಬಟರ್‌
ಬಾಡಿ ಬಟರ್‌ ಲೇಪಿಸುವುದರಿಂದ ಚಳಿಗಾಲದಲ್ಲಿ ತ್ವಚೆಯ ತೇವಾಂಶ ವರ್ಧಿಸಿ ಒಣ ತ್ವಚೆಯ ತೊಂದರೆಗಳು ಕಾಡುವುದಿಲ್ಲ. 

ಈ ಕೆಳಗೆ ಮನೆಯಲ್ಲೇ ತಯಾರಿಸಬಹುದಾದ ಪರಿಮಳಯುಕ್ತ ಬಾಡಿಬಟರ್‌ ಕುರಿತಾಗಿ ವಿವರಿಸಲಾಗಿದೆ.

ಸಾಮಗ್ರಿಗಳು: ಕೋಕಾಬಟರ್‌ 1 ಕಪ್‌, 1/2 ಕಪ್‌ ಕೊಬ್ಬರಿ ಎಣ್ಣೆ , 1/2 ಕಪ್‌ ಆಲಿವ್‌ತೈಲ ಅಥವಾ ಬಾದಾಮಿ ತೈಲ, ಲ್ಯಾವೆಂಡರ್‌ ತೈಲ 25 ಹನಿಗಳಷ್ಟು.

ಮೊದಲು ಒಂದು ಪಾತ್ರೆಯಲ್ಲಿ ಕೋಕಾಬಟರ್‌ ಹಾಗೂ ಕೊಬ್ಬರಿ ಎಣ್ಣೆಯನ್ನು ಸಣ್ಣ ಉರಿಯಲ್ಲಿ ಬಿಸಿಮಾಡಿ, 30 ನಿಮಿಷಗಳ ಕಾಲ ಆರಲು ಬಿಡಬೇಕು. ಇನ್ನೊಂದು ಸಣ್ಣ ಪಾತ್ರೆಯಲ್ಲಿ ಆಲಿವ್‌ತೈಲ ಅಥವಾ ಬಾದಾಮಿ ತೈಲ ತೆಗೆದುಕೊಂಡು ಅದಕ್ಕೆ ಲ್ಯಾವೆಂಡರ್‌ ತೈಲ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಆರಿದ ಕೋಕಾಬಟರ್‌ ಹಾಗೂ ಕೊಬ್ಬರಿ ಎಣ್ಣೆಯ ಮಿಶ್ರಣಕ್ಕೆ ಸೇರಿಸಬೇಕು. ತದನಂತರ ಅದನ್ನು ಬೆಣ್ಣೆಯಂತಾಗುವವರೆಗೆ ವ್ಹಿಪ್‌ ಮಾಡಬೇಕು. ಹೀಗೆ ಕೆಲವೇ ಕ್ಷಣ ಮಿಶ್ರಮಾಡಿದ ಬಳಿಕ ಬಾಡಿಬಟರ್‌ ತಯಾರು. ಇದನ್ನು ಗಾಜಿನ ಬಾಟಲಲ್ಲಿ ಸಂಗ್ರಹಿಸಿ ನಿತ್ಯ ಬಳಸಿದರೆ ಪರಿಮಳ ಮನಸ್ಸಿಗೆ ಆಹ್ಲಾದ ನೀಡಿದರೆ, ಸಾಮಗ್ರಿಗಳ ಮಿಶ್ರಣದ ಲೇಪ, ಚರ್ಮದ ಸ್ನಿಗ್ಧತೆ ವರ್ಧಿಸುತ್ತದೆ.

ಕೋಕಾಬಟರ್‌ ಬದಲಾಗಿ ಶೀ ಬಟರ್‌ ಅಥವಾ ಮ್ಯಾಂಗೋ ಬಟರ್‌ ಅಥವಾ ಕೋಕಮ್‌ ಬಟರ್‌ ಸಹ ಬಳಸಬಹುದು. ಸಾವಯವ ಅಂಗಡಿ (ಆಗ್ಯಾìನಿಕ್‌ ಶಾಪ್‌)ಗಳಲ್ಲಿ ದೊರೆವ ಈ ಸಾಮಗ್ರಿಗಳಿಂದ ಮನೆಯಲ್ಲಿ ಸುಲಭವಾಗಿ, ತೇವಾಂಶಕಾರಕಗಳನ್ನು ತಯಾರಿಸಬಹುದು.

ಹಾಂ! ಕೊತ್ತಂಬರಿ ಹುಡಿ ಮಿಶ್ರ ಮಾಡಿದ ನೀರು, ಎಳನೀರು, ವಿವಿಧ ಹಣ್ಣುಗಳ ಜ್ಯೂಸ್‌, ಅಧಿಕ ನೀರು ಸೇವನೆ, ಆಹಾರದಲ್ಲಿ ಒಣಹಣ್ಣು , ತುಪ್ಪ , ಎಣ್ಣೆಗಳ ಬಳಕೆ ಚಳಿಗಾಲದಲ್ಲಿ ತ್ವಚೆಯ ತೇವಾಂಶ, ಸೌಂದರ್ಯವರ್ಧಕ.

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next