Advertisement
ಬರಹಗಾರನಾದ ಮೇಲೂ ನಾನು ಬರವಣಿಗೆಯಲ್ಲಿ ಕೂಡ ಮತ್ತೆ ಯಾರನ್ನೂ ವಿಶೇಷವಾಗಿ ಅನುಕರಿಸಲು ಹೋಗಲಿಲ್ಲ. ಏಕೆಂದರೆ, ಮಹಾನ್ ಲೇಖಕರನ್ನು ಅನುಕರಿಸಲು ಕೂಡ ಒಂದು ಮಟ್ಟದ, ಪ್ರತಿಭೆ, ಸ್ಥೈರ್ಯ ಬೇಕು. ಹಾಗಾಗಿ ಸಾಹಿತ್ಯದ ಕ್ಷೇತ್ರದಲ್ಲಿ ಕೂಡ ನಾನು ಸಾಹಿತಿಗಳ ವರ್ತನೆ, ವಕ್ರತೆಗಳನ್ನೇ ಅನುಕರಿಸಲು ಪ್ರಯತ್ನಿಸುತಿದ್ದೆ. ಅಂತಹ ಅವಕಾಶಗಳಿಗಾಗಿ ಯಾವಾಗಲೂ ಹಂಬಲಿಸುತ್ತಿದ್ದೆ. ನನ್ನ ವರ್ತನೆ, ಮಾತುಕತೆಗಳನ್ನು, ನನ್ನಂತರಂಗದ ತೀರಾ ಖಾಸಗಿ ವ್ಯಾಪಾರಗಳನ್ನು ಕೂಡ ಅವೆಲ್ಲದರ ಜೊತೆ ಹೋಲಿಸಿಕೊಳ್ಳುತ್ತಿದ್ದೆ.
Related Articles
Advertisement
ಮಾಕ್ವೆೆìಜ್‌ನ ಬರವಣಿಗೆ ಓದುತ್ತಿದ್ದಂತೆ ನನ್ನ ಬಗ್ಗೆ ನನಗೆ ಭಲೇ ಭಲೇ ಎನ್ನಿಸಿತು. ಒಳ್ಳೆಯ ನೆರೂಡಾ, ಎಲಾ ಇವನಾ, ಈತ ನನ್ನನ್ನೇ ಅನುಕರಿಸುತ್ತಿರುವಂತಿದೆಯಲ್ಲ ಎಂದೆನಿಸಿತು. ನಾನು ಕೂಡ ಅವನಂತೆಯೇ ನಿದ್ದೆಗೆ ಜಾರಲು ಬಹಳ ಬಹಳ ಕಷ್ಟ ಪಡುತ್ತೇನೆ, ಪಡುತ್ತಿದ್ದೇನೆ. ಬಹುಪಾಲು ಸಂದರ್ಭಗಳಲ್ಲಿ ನಾನು ಮಲಗಿದ್ದೇನೋ, ಅರೆನಿದ್ರೆಯಲ್ಲಿ ಇದ್ದೇನೋ, ಕನಸಿನಲ್ಲಿ ಇದ್ದೇನೋ, ಭ್ರಮಾಧೀನ ಸ್ಥಿತಿಯಲ್ಲಿ ಇದ್ದೇನೋ, ಇಲ್ಲ ರಾತ್ರಿ ಹೊತ್ತು ಕೂಡ ನಿರಂತರವಾಗಿ ಬೀಳುವ ಹಗಲುಗನಸುಗಳ ನಡುವೆ ತೇಲಾಡುತ್ತಿದ್ದೇನೋ ಎಂಬುದೇ ಗೊತ್ತಾಗುವುದಿಲ್ಲ. ಇದ್ದಕ್ಕಿದ್ದಂತೆ ಎಚ್ಚರವಾಗುತ್ತದೆ, ಇಲ್ಲ ಯಾರೋ ಒಳಗಿನಿಂದ ತಿವಿದು ಎಬ್ಬಿಸಿಬಿಡುತ್ತಾರೆ. ಆಯ್ತು ಒಂದು ಹತ್ತು ನಿಮಿಷ ಹೊರಳಾಡಿ ಮತ್ತೆ ಮಲಗಿದರೆ ನಿದ್ರೆ ಬರಬಹುದು ಎಂದುಕೊಳ್ಳುತ್ತೇನೆ. ಹತ್ತು ನಿಮಿಷವಾದ ತಕ್ಷಣ ಎದ್ದು ನೋಡಿದರೆ ಗಡಿಯಾರದಲ್ಲಿ ಮೂರು-ನಾಲ್ಕು ಗಂಟೆಗಳೇ ಕಳೆದು ಹೋಗಿರುತ್ತವೆ. ಆ ಮೂರು-ನಾಲ್ಕು ಗಂಟೆ ನಾನು ಎದ್ದಿದ್ದೆನೇ, ಇಲ್ಲ. ಮಲಗಿದ್ದೆನೇ? ಎದ್ದಿದ್ದರೆ ಏನೇನು ಮಾಡಿದೆ ಎಂಬುದು ಕೂಡ ನನ್ನ ಅರಿವಿಗೆ ಬರುವುದಿಲ್ಲ. ದೇಹಕ್ಕೆಲ್ಲ ಸುಸ್ತಾದರೂ ನಿದ್ರೆ ಬರುವುದಿಲ್ಲ. ಮನಸ್ಸು, ದೇಹ, ಆತ್ಮವೆಲ್ಲ ಸಕಲ ಉಲ್ಲಾಸ-ಲಾಸ್ಯಗಳಲ್ಲಿದ್ದರೂ ನಿದ್ದೆ ಬರುವುದಿಲ್ಲ. ನಾನಾ ರೀತಿಯ ಪುಸ್ತಕಗಳನ್ನು ಓದಿ, ಹತ್ತಾರು ರೀತಿಯ ವೈದ್ಯರನ್ನು ಸಂಪರ್ಕಿಸಿ, ಮಲಗುವುದಕ್ಕೆ ಮುಂಚೆ ನಾನೇನು ಮಾಡಬೇಕು ಎಂಬುದರ ಬಗ್ಗೆ ಒಂದು ಸೂತ್ರಗಳ ಪಟ್ಟಿಯನ್ನೇ ತಯಾರಿಸಿಕೊಂಡಿದ್ದೇನೆ. ಈ ಪಟ್ಟಿಯಲ್ಲಿರುವ ಸೂತ್ರದ ವಿವರಗಳೆಲ್ಲ ನೆರೂಡಾನಿಗೆ ಹೇಗೆ ತಲುಪಿತೋ ನನಗೆ ಗೊತ್ತಿಲ್ಲ. ಕವಿಗಳು ಪ್ರತಿಮೆಗಳನ್ನೂ ಸಂಕೇತಗಳನ್ನೂ ಮಾತ್ರ ಲಪಟಾಯಿಸುತ್ತಾರೆಂದು ನಾನು ತಪ್ಪು ತಿಳಿದಿದ್ದೆ.
ಹಾಸಿಗೆಯ ಎಡ ತುದಿಯಲ್ಲಿ ಮಾತ್ರ ಮಲಗುತ್ತೇನೆ. ಬರೆಯಲಿ, ಬರಿಯದೆ ಇರಲಿ ಹಾಸಿಗೆಯ ಒಂದು ಬದಿಯಲ್ಲಿ ನಾಲ್ಕಾರು ರೀತಿಯ ದಿನಚರಿಗಳು – ನನ್ನಲ್ಲಿರುವ ಬೇರೆ ಬೇರೆ ವ್ಯಕ್ತಿತ್ವಗಳಿಗೆ ಬೇರೆ ಬೇರೆ ರೀತಿಯ ದಿನಚರಿಯಂತೆ – ನಿಘಂಟು, ಪುಸ್ತಕಗಳು. ಮೈ ಮೇಲೆ ಬಟ್ಟೆ ತೆಳುವಾಗಿರುತ್ತದೆ. ಒಂದು ಪಾದಕ್ಕೆ ಮಾತ್ರ ಕೊಬ್ಬರಿ ಎಣ್ಣೆಯನ್ನು ಸವರಿಕೊಳ್ಳುತ್ತೇನೆ. ಕುಡಿಯದೇ ಹೋದರೂ ಚೊಂಬಿನ ತುಂಬಾ ನೀರಿರಬೇಕು. ಹಾಸಿಗೆ ಹತ್ತಿಯದಾಗಿರಬೇಕು ಮಾತ್ರವಲ್ಲ ಸಾಕಷ್ಟು ಅನುಭವ ಪಡೆದು ಪ್ರೌಢವಾಗಿರಬೇಕು, ಮೆತ್ತಗಿರಬೇಕು. ಆದರೆ ಸಡಿಲವಾಗಿರಬಾರದು. ಕೋಣೆಯಲ್ಲಿ ತೀರಾ ಕತ್ತಲೂ ಇರಬಾರದು, ತೀರಾ ಬೆಳಕೂ ಇರಬಾರದು. ನನಗೆ ತುಂಬಾ ಕತ್ತಲನ್ನು ಕಂಡರೆ ಭಯ, ತುಂಬಾ ಬೆಳಕು ಕಂಡರೂ ಬೇಸರ. ಕಿಟಕಿಗೆ ಒತ್ತಕೊಂಡ ಹಾಗೆಯೇ ಮುಖ್ಯ ರಸ್ತೆ ಇರುವುದರಿಂದ ಬೀದಿ ದೀಪದ ಬೆಳಕಿನ ಹಾವಳಿ. ಇದು ರೂಮಿನ ತುಂಬಾ ಹರಡಬಾರದೆಂದು ಕರ್ಟನ್ ಮೇಲೆ ಕಪ್ಪು ಬಣ್ಣದ ಬೆಡ್‌ಶೀಟು ಹಾಕುತ್ತೇನೆ.
ನೆರೂಡಾಗೋ ಮಾಕ್ವೆೆìಜ್ ನಂತಹ ಗೆಳೆಯನಿದ್ದ. ನನಗೂ ನಿಮಗೂ ಎಲ್ಲಿ ಅಂತಹ ಸಂವೇದನಾಶೀಲ ಗೆಳೆಯರು ಸಿಗಬೇಕು? ನಾನು ಹೀಗೆ ಮಲಗುವ ರೀತಿಯಲ್ಲಿ ಸುಖವಿದೆ, ನೆಮ್ಮದಿಯಿದೆ ಎಂದು ಯಾರಲ್ಲೂ ಹೇಳಿಕೊಳ್ಳಲು ನನಗೆ ಇದುವರೆಗೆ ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ ನಾನು ಪ್ರವಾಸ ಹೋಗಲು ಹಿಂಜರಿಯುತ್ತೇನೆ. ಹೋಗಲೇಬೇಕಾದ ಅನಿವಾರ್ಯತೆ ಬಂದರೂ ಹೋದ ಕಡೆ ತಂಗುವುದಿಲ್ಲ. ಮಂಚ, ಮೆತ್ತೆ, ಹಾಸಿಗೆ, ಬೆಳಕು ಇದನ್ನೆಲ್ಲ ನಮಗೆ ಬೇಕಾದ ರೀತಿಯಲ್ಲಿ ಯಾರು ಒದಗಿಸಿಕೊಡುತ್ತಾರೆ? ಮನೆಯಲ್ಲೂ ಕೂಡ ನನ್ನ ಈ ಕುಸುಬಿಷ್ಠೆಯನ್ನು ಹೆಂಡತಿ, ಮಕ್ಕಳು ಇಷ್ಟಪಡುವುದಿಲ್ಲ, “ನೀವು ಅಲ್ಲಿಗೆ ಒಂದೆರಡು ದಿನ ಹೇಗೋ ಹೋಗಿ ಮಲಗಿ ಎದ್ದು ಬರಬೇಕಷ್ಟೆ. ಆದರೆ ಅದಕ್ಕಾಗಿ ನೀವು ತಯಾರಿ ಮಾಡಿಕೊಳ್ಳುವುದನ್ನು, ಚಿಂತಾಕ್ರಾಂತರಾಗಿರುವುದನ್ನು ನೋಡಿದರೆ, ಸಹಸ್ರ ಗಾಯತ್ರಿ ಯಜ್ಞಕ್ಕೆ ಕೂಡುವ ಯಜಮಾನರಂತೆ ಆಡುತ್ತೀರಲ್ಲ!’ ಎನ್ನುತ್ತಾರೆ.
ಬಸ್ ರೈಲುಗಳಲ್ಲಿ ರಾತ್ರಿ ಹೊತ್ತು ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಬಂದೊದಗಿದಾಗ ನಾನು ನನ್ನ ಹಾಸಿಗೆಯನ್ನು ತಯಾರು ಮಾಡಿಕೊಳ್ಳುವ ರೀತಿ, ಮನೆಯಿಂದ ತಂದಿರುವ ಬೆಡ್‌ಶೀಟು-ದಿಂಬು-ಹೊದಿಕೆಗಳನ್ನು ಜೋಡಿಸಿಕೊಳ್ಳುವ ರೀತಿಯನ್ನು ಗಮನಿಸುವ ಸಹಪ್ರಯಾಣಿಕರು ನನಗೆ ಹುಚ್ಚೋ, ಇಲ್ಲ ಬೆಪ್ಪೋ ಇಲ್ಲ ಶಿವಲೀಲೆಯೋ, ಇಲ್ಲ ಎಲ್ಲವೂ ಒಟ್ಟಿಗೆ ಬೆರೆತಿರುವ ಒಂದು ಅತೀತವಾದ ಸ್ಥಿತಿಯೋ ಎಂಬಂತೆ ನನ್ನ ಕಡೆಗೆ ಕಕ್ಕಾಬಿಕ್ಕಿಯಾಗಿ ನೋಡುತ್ತಿರುತ್ತಾರೆ.
ಇವೆಲ್ಲ ಸರಿ, ಆದರೂ ನೆರೂಡಾನನ್ನು ನಾನು ಮುಂದಿನ ಹಂತಗಳಲ್ಲಿ ಅನುಸರಿಸಲಾರೆ, ಅನುಕರಿಸಲೂ ಆರೆ. ನೆರೂಡಾನಿಗೆ ಬೀಳುವ ಕನಸುಗಳು ತುಂಬಾ ವಿಚಿತ್ರ. ಅವನು ಯಾವಾಗಲೂ ಇನ್ನೊಬ್ಬರ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾನೆ. ಇನ್ನೊಬ್ಬರಿಗೆ ಕನಸು ಬೀಳುವ ಸಮಯದಲ್ಲಿ ಇವನಿಗೂ ಬೀಳುವುದರಿಂದ ಅವನ ಕನಸಿನಲ್ಲಿ ಇಣುಕಿ ನೋಡುವ ರೀತಿ ಇವನಿಗೂ, ಇವನ ಕನಸಿಗೂ ಗೊತ್ತಾಗುತ್ತದೆ. ನೆರೂಡಾ ಸಾವಿರಾರು ಕಾವ್ಯ ರಸಿಕರ ಕನಸುಗಳಲ್ಲಿ ಪ್ರತಿದಿನವೂ ವಿಶ್ವಾದ್ಯಂತ ಕಾಣಿಸಿಕೊಳ್ಳುತ್ತಲೇ ಇರುತ್ತಾನೆ. ಹಾಗಿದ್ದರೂ ಅಷ್ಟೊಂದು ಜನರಿಗೆ ಕನಸು ಬೀಳುವ ಸಮಯದಲ್ಲೇ ಅವರ ಕನಸಿನ ವಿವರಗಳು ಇವನ ಕನಸಿನಲ್ಲೂ ಕೂಡ ಮೂಡುತ್ತಿರುತ್ತವೆ. ಹೀಗೆ ನೆರೂಡನಿಗೂ, ಆತನ ಕಾವ್ಯ ರಸಿಕರಿಗೂ ಬೀಳುತ್ತಿರುವ ಕನಸುಗಳ ಮಾಲೆ ಕುರಿತು ದಕ್ಷಿಣ ಅಮೆರಿಕದ ನೂರಾರು ಲೇಖಕರಿಗೂ ಅದೇ ಸಮಯದಲ್ಲಿ ಕನಸು ಬೀಳುತ್ತದಂತೆ. ಇದೆಲ್ಲ ನಿಜವಾಗಿಯೂ ಸಾಧ್ಯವೇ, ಸಾಧುವೇ ಎಂದು ನನಗೆ ತಿಳಿದಿರುವಷ್ಟರ ಮಟ್ಟಿಗಿನ ಭೌತಶಾಸ್ತ್ರ, QUANTUM MECHANICS ನೆರವಿನಿಂದ ಅರ್ಥ ಮಾಡಿಕೊಳ್ಳಲು ಹೆಣಗಾಡಿ, ಹೋರಾಡಿ ಸೋತು ಕಂಗಾಲಾಗಿದ್ದೇನೆ.
(ಅಪೂರ್ಣ)
ಕೆ. ಸತ್ಯನಾರಾಯಣ