Advertisement

ಮನ ಗೆದ್ದ ಮಕ್ಕಳ ತಾಳಮದ್ದಳೆ

06:00 PM Feb 21, 2020 | mahesh |

ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮಕ್ಕಳೇ ನಡೆಸಿಕೊಟ್ಟ ಸೀತಾ ಕಲ್ಯಾಣ ಎಂಬ ಯಕ್ಷಗಾನ ತಾಳಮದ್ದಳೆ ಜನಮನ ಗೆದ್ದಿತು.

Advertisement

ಚಿಕ್ಕದಾಗಿ ಚೊಕ್ಕದಾಗಿ ನಡೆಸಿಕೊಟ್ಟ ತಾಳಮದ್ದಳೆಯ ಹಿಂದೆ ಅಧ್ಯಾಪಕರ ಶ್ರಮ ಗುರುತಿಸುವಂತಾದ್ದು. ಇಲ್ಲಿ ವಿಚಾರ ಪ್ರೌಢಿಮೆ, ಸಂವಾದ ಕೌಶಲ, ಕಥಾ ವಿಸ್ತಾರ ಇತ್ಯಾದಿಗಳನ್ನು ಗುರುತಿಸುವ ಹಾಗಿಲ್ಲ. ಆದರೆ ಮಕ್ಕಳ ಅನುಕರಣೆ, ಅನುಸರಣಾ ಗುಣ, ಕತೆಯನ್ನು ಅರ್ಥೈಸಿಕೊಂಡು ಮಂಡಿಸಿದ ಅರ್ಥಗಾರಿಕೆ ಸೊಗಸಾಗಿ ಮೂಡಿಬಂತು. ಇದೊಂದು ಪ್ರಯೋಗವೆಂದು ಸ್ವೀಕರಿಸಿದರೆ ಅದರಿಂದಲಾದರೂ ಮಕ್ಕಳಿಗೆ ಸಿಗುವ ಪ್ರೇರಣೆ, ಕಲಿಕಾ ಮೌಲ್ಯ, ಜೀವನ ಕೌಶಲ ಬಹಳ ದೀರ್ಘ‌ಕಾಲೀನ ಪರಿಣಾಮ ಬೀರುವಂತಾದ್ದು.

ಮಕ್ಕಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ರಾಮಾಯಣ ಕಥಾನಕದ ಯಜ್ಞ ಸಂರಕ್ಷಣೆಯ ಭಾಗದಿಂದ ಪ್ರಸಂಗವನ್ನು ಆಯ್ದುಕೊಳ್ಳಲಾಗಿತ್ತು. ವಿಶ್ವಾಮಿತ್ರ, ದಶರಥ, ವಸಿಷ್ಠ, ರಾಮ, ಲಕ್ಷ್ಮಣ, ತಾಟಕಿ, ಮಾರೀಚ, ಸುಬಾಹು, ಗೌತಮ, ಜನಕ, ಪರಶುರಾಮ ಇಷ್ಟು ಪಾತ್ರಗಳನ್ನು ಆರಿಸಿಕೊಂಡು ವಿದ್ಯಾರ್ಥಿಗಳಾದ ಶ್ರಾವ್ಯಾ, ಪ್ರಜ್ಞಾ, ತ್ರಿಲೋಚನ ಜೈನ್‌, ದೀಕ್ಷಿತ್‌, ಧನ್ಯಾ, ಯಶವಂತ, ಮೂಕಾಂಬಿಕೆ, ರಶ್ಮಿತಾ, ನಿಶ್ಮಿತಾ, ಅರವಿಂದ, ಚೈತ್ರಾ ಇವರು ಪಾತ್ರ ನಿರ್ವಹಣೆ ಮಾಡಿದರು.

ಹಿಮ್ಮೇಳದಲ್ಲೂ ಯಕ್ಷಗಾನದ ಕಲಿಕಾ ವಿದ್ಯಾರ್ಥಿಗಳೇ ಭಾಗವಹಿಸಿದ್ದು ಹೊರ ಕಲಾವಿದರನ್ನು ಆಹ್ವಾನಿಸಲಾಗಿತ್ತು. ಭಾಗವತರಾಗಿ ಮುರಳೀಧರ ಭಟ್‌ ಉಜಿರೆ, ಚೆಂಡೆ ಕಾರ್ತಿಕ್‌ ಉಜಿರೆ, ಮದ್ದಳೆ ಭಾರವಿ ಬೆಳಾಲು ಪಾಲ್ಗೊಂಡಿದ್ದರು. ಒಂದೂವರೆ ಗಂಟೆಯಷ್ಟು ಕಾಲ ಜರಗಿದ ತಾಳಮದ್ದಳೆ ಅತ್ಯಂತ ಸುಲಲಿತವಾಗಿ, ಹಿಮ್ಮೇಳ ಮುಮ್ಮೇಳಗಳ ಹಿತವಾದ ಬೆಸುಗೆಯೊಂದಿಗೆ ಕುತೂಹಲಕಾರಿಯಾಗಿಯೇ ಕೊನೆ ತನಕ ಸಾಗಿತ್ತು.

– ಸಾಂತೂರು ಶ್ರೀನಿವಾಸ ತಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next