Advertisement
ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ದಿನವನ್ನು ವಿಶಿಷ್ಟವಾಗಿ ಆಚರಿಸಿದ್ದು, ಹೀಗೆ. ಶಾಲಾ ಆಡಳಿತಮಂಡಳಿ ಮೆಟ್ರಿಕ್ ಮೇಳ ಹಮ್ಮಿಕೊಂಡಿತ್ತು. ಮಾರಾಟ ಮತ್ತು ಪ್ರದರ್ಶನ ವ್ಯವಸ್ಥೆ ಇತ್ತು. ವಿದ್ಯಾರ್ಥಿಗಳಲ್ಲಿ ನಿತ್ಯ ಜೀವನದ ಪರಿಕಲ್ಪನೆ, ದೈನಂದಿನ ವ್ಯವಹಾರ ಜ್ಞಾನ, ಅಸಲು, ಲಾಭ ಮತ್ತು ನಷ್ಟದ ಬಗ್ಗೆ ತಿಳಿಯಲು ಈ ಮಾದರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮನೆಯಲ್ಲಿ ಬೆಳೆದ ತರಕಾರಿ, ಹಣ್ಣು ಹಂಪಲು ತಂದು ಮಾರಾಟಕ್ಕೆ ಇರಿಸಿದ್ದರು. ತಿಂಡಿ ತಿನಿಸುಗಳನ್ನೂ ಸ್ಟಾಲ್‌ನಲ್ಲಿ ಇಡಲಾಗಿತ್ತು. ಫಾಸ್ಟ್‌ಫುಡ್ ತಿನಿಸುಗಳಾದ ಪಾನಿಪುರಿ, ಮಸಾಲಪುರಿ, ಭೇಲ್‌ಪುರಿ, ಸೇವ್‌ಪುರಿ ಜತೆಗೆ ತಂಪು ಪಾನೀಯಗಳನ್ನು ಸ್ಥಳದಲ್ಲೇ ತಯಾರಿಸಿ ಮಕ್ಕಳು ಮಾರಾಟ ಮಾಡುತ್ತಿದ್ದರು. ದಿನಪೂರ್ತಿ ವ್ಯಾಪಾರ ಭರ್ಜರಿಯಾಗಿಯೇ ನಡೆಯಿತು. ಮಕ್ಕಳು ಸಂಜೆ ತನಕವೂ ಉತ್ಸಾಹದಿಂದ ವ್ಯಾಪಾರ – ವಹಿವಾಟಿನಲ್ಲಿ ತೊಡಗಿದ್ದರು. ಪ್ರತಿ ಮಳಿಗೆಯಲ್ಲಿ ಕನಿಷ್ಠ 300ರಿಂದ 1800 ರೂಪಾಯಿ ತನಕ ವ್ಯಾಪಾರ ನಡೆದಿದೆ. ದಿನದ ಸಂಪಾದನೆ ಮೊತ್ತ 50 ಸಾವಿರ ರೂ. ದಾಟಿತ್ತು. ಈ ರೀತಿ ಸಂಪಾದಿಸಿದ ಮೊತ್ತದ ಹಣ ವ್ಯಾಪಾರ ಮಾಡಿದ ಮಕ್ಕಳಿಗೇ ಸೇರಿತು.
Related Articles
ಸುಮಾರು 65 ಮಳಿಗೆ ತೆರೆಯಲಾಗಿತ್ತು. 400ಕ್ಕೂ ಅಧಿಕ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ದ್ದರು. ಅಂಗಡಿಗಳಿಗೆ ಆಕರ್ಷಕ ಹೆಸರುಗಳನ್ನು ಇರಿಸಿದ್ದರು. ತರಕಾರಿ ಅಂಗಡಿ, ಪಾನೀಯದ ಅಂಗಡಿ, ಕಬ್ಬಿನ ಹಾಲು, ಚರುಮುರಿ, ಅನಾನಸು, ಹಣ್ಣು- ಹಂಪಲು, ಕಲ್ಲಂಗಡಿ, ಮುಳ್ಳುಸೌತೆ ಅಂಗಡಿ, ಸೊಪ್ಪಿನ ಅಂಗಡಿ, ಜೀನಸು ಪದಾರ್ಥಗಳ ಅಂಗಡಿ, ಸಾವಯವ ಮಳಿಗೆ, ಮನೆಯಲ್ಲಿ ಬೆಳೆದ ಕಾಯಿಪಲ್ಲೆಗಳ ಅಂಗಡಿ, ಬಳೆ, ಓಲೆ, ಆಟಿಕೆ, ಗೊಂಬೆ, ಸೌಂದರ್ಯ ವರ್ಧಕ ಸಾಮಗ್ರಿಗಳ ಮಳಿಗೆ, ಮನೆಯಲ್ಲಿ ತಯಾರಿಸಿದ ತಿಂಡಿ- ತಿನಿಸು, ಬೇಕರಿ, ಕಬ್ಬಿನ ಅಂಗಡಿಗಳಿಗೆ ತಾವೇ ಹೆಸರನ್ನು ಇಟ್ಟಿದ್ದರು.
Advertisement
ನೆಲ್ಲಿಕಾಯಿ, ನಕ್ಷತ್ರ ಹಣ್ಣು, ಹೂವುಗಳು, ಹೂವಿನ ಬೀಜಗಳು, ಲಕ್ಷ್ಮಣ ಫಲದ ಗಿಡ, ಹೂವಿನ ಗಿಡ, ತರಕಾರಿಗಳು, ಪಾನಿಪೂರಿ, ಚರುಮುರಿ, ಸಿಹಿತಿಂಡಿಗಳು, ಮಜ್ಜಿಗೆ, ಲಿಂಬೆ ಶರಬತ್ತು, ಕಲ್ಲಂಗಡಿ ಜ್ಯೂಸ್, ಪಪ್ಪಾಯ, ಲಿಂಬೆ, ನೆಲ್ಲಿಕಾಯಿ, ಕಬ್ಬು, ಮರಗೆಣಸು, ಬಳೆ, ಬಿಂದಿ, ಚಕ್ಕೋತ, ಅಮೃತ ಬಳ್ಳಿ ಗಿಡ, ಲೋಳೆಸರದ ಗಿಡ, ಪುಸ್ತಕಗಳು, ಪಕೋಡ, ಉಪ್ಪಿನಕಾಯಿ, ಅಕ್ಕಿಹುಡಿ ಇತ್ಯಾದಿಗಳನ್ನು ಮಾರಾಟ ಮಾಡಿದರು. ಇಲ್ಲಿ ತಮ್ಮ ಸಹಪಾಠಿ ವಿದ್ಯಾರ್ಥಿಗಳು ಮತ್ತು ಹೆತ್ತವರು, ಊರವರು, ಎಸ್‌ಡಿಎಂಸಿ ಸದಸ್ಯರು ಗ್ರಾಹಕರಾಗಿದ್ದರು.
ಮೆಟ್ರಿಕ್ ಮೇಳವನ್ನು ಸಾವಯವ ಕೃಷಿಕ ಜಯಪ್ರಕಾಶ್ ಕೂಜುಗೋಡು ಉದ್ಘಾಟಿಸಿದರು. ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ಮುಖ್ಯ ಅತಿಥಿಯಾಗಿದ್ದರು. ವಿದ್ಯಾಲಯದ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್., ಸಂಚಾಲಕ ಚಂದ್ರಶೇಖರ ನಾಯರ್, ಹಿರಿಯರಾದ ಭಾರ್ಗವಿ ಅಮ್ಮ, ಆಡಳಿತ ಮಂಡಳಿ ಸದಸ್ಯ ರವಿ ಕಕ್ಕೆಪದವು, ಮುಖ್ಯಗುರು ವಿದ್ಯಾರತ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನುಭವ ಪಾಠವಿದ್ಯಾರ್ಥಿಗಳಿಗೆ ಜೀವನ ಅನುಭವ ಪಾಠ ಕಲಿಸಲು ವೇದಿಕೆ ನಿರ್ಮಿಸಿದ್ದೆವು. ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಇದೊಂದು ವ್ಯಾಪಾರ ವಹಿವಾಟಿನ ಅನುಭವ ಪಾಠವಷ್ಟೆ.
– ಗಣೇಶ್ ಪ್ರಸಾದ್, ಸಂಚಾಲಕ,
ಕುಮಾರಸ್ವಾಮಿ ವಿದ್ಯಾಸಂಸ್ಥೆ ಸುಬ್ರಹ್ಮಣ್ಯ