Advertisement

ಶಾಲೆಗೆ ನುಗ್ಗುವ ದೂಳು: ಅಧಿಕಾರಿಗಳ ವಿರುದ್ಧ ಪುಟಾಣಿಗಳ ಆಕ್ರೋಶ

03:31 PM Feb 19, 2023 | Team Udayavani |

ಕಿಕ್ಕೇರಿ: ರಸ್ತೆ ಡಾಂಬರೀಕರಣ ನೆಪದಲ್ಲಿ 6ತಿಂಗಳ ಹಿಂದೆ ಬಗೆಯಲಾಗಿದ್ದ ರಸ್ತೆ ದುರಸ್ತಿ ಮಾಡದೆ ಮಕ್ಕಳ ಅನಾರೋಗ್ಯಕ್ಕೆ ಕಾರಣವಾದ ಅಧಿಕಾರಿ, ಗುತ್ತಿಗೆದಾರರ ವರ್ತನೆಗೆ ಬೇಸತ್ತು ಶಾಲಾ ಮಕ್ಕಳು ಪ್ರತಿಭಟನೆ ನಡೆಸಿದರು.

Advertisement

ಮೇಲೇಳುತ್ತಿದೆ: ರಸ್ತೆ ಅಭಿವೃದ್ಧಿ ಯೋಜನೆಯಡಿ ಕಿಕ್ಕೇರಿಯಿಂದ ಶ್ರವಣಬೆಳಗೊಳಕ್ಕೆ ಹಾದು ಹೋಗುವ ಸಾಸಲು ಗ್ರಾಮದಲ್ಲಿ ರಸ್ತೆ ಅಗೆಯಲಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂದೆ ರಸ್ತೆ ಬಗೆದು ಜಲ್ಲಿ ತುಂಬಿದ್ದ ಕಾರಣ ಸಣ್ಣ ವಾಹನ ರಸ್ತೆಯಲ್ಲಿ ಓಡಾಡಿದರೂ ದೂಳು ಮೇಲೇಳುತ್ತಿದೆ. ಇನ್ನು ಸುತ್ತಮುತ್ತಲ ಮನೆ, ಶಾಲೆಗೆ ದೂಳು ನುಗ್ಗುತ್ತಿತ್ತು. ಬಿಸಿಯೂಟ ಸೇವನೆ, ಪಾಠ ಪ್ರವಚನ ಕೇಳಲು ಸಾಧ್ಯವಾಗದೆ ಮಕ್ಕಳು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

ಅನಾರೋಗ್ಯ ಸಮಸ್ಯೆ: ನಿತ್ಯ ಶೀತ, ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆಗಳಿಂದ ಕಾಡುವಂತಾಗಿತ್ತು. ದಪ್ಪ ಜಲ್ಲಿ ರಸ್ತೆಯಿಂದ ವಾಹನ, ಪಾದಚಾರಿಗಳು ಸಾಗಲು ಪರದಾಡುತ್ತಿದ್ದರು. ಈ ಹಿನ್ನೆಲೆ ಶಾಲಾ ಮಕ್ಕಳು ಅವ್ಯವಸ್ಥೆ ಸರಿಪಡಿಸಲು ಅಧಿಕಾರಿಗಳಿಗೆ ಎಚ್ಚರಿಸಲು ನಡೆಸಿದ ಪ್ರತಿಭಟನೆಗೆ ಗ್ರಾಮಸ್ಥರು, ಗ್ರಾಮ ಮುಖಂಡರು ಬೆಂಬಲ ನೀಡಿದರು.

ದಮ್ಮಯ್ಯ, ದಮ್ಮಯ್ಯ ರಸ್ತೆ ದುರಸ್ತಿ ಮಾಡಿ, ರಸ್ತೆ ದೂಳು ಕುಡಿದು ನಿತ್ಯ ಕೆಮ್ಮು, ಜ್ವರ ಬರುತ್ತಿದೆ ಎಂದು ಮಕ್ಕಳು ಘೋಷಣೆ ಕೂಗಿದರು. ತುರ್ತು ಕಾಮಗಾರಿ ಮಾಡಿ: ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್‌ ಮಾತನಾಡಿ, ರಸ್ತೆ ಕಾಮಗಾರಿ ನೆಪದಲ್ಲಿ ವಿದ್ಯುತ್‌ ಕಂಬವನ್ನು ಕೀಳಲಾಗಿದೆ. ಒಳಚರಂಡಿ ವ್ಯವಸ್ಥೆ ಅಸಮರ್ಪಕವಾಗಿದ್ದು ಪಾದಚಾರಿಗಳು ಗುಂಡಿಗೆ ಬೀಳುವಂತಾಗಿದೆ ಎಂದು ದೂರಿದರು.

ಶಾಲೆ ಬಂದ್‌ ಎಚ್ಚರಿಕೆ: ರಸ್ತೆಯಲ್ಲಿನ ದೂಳು ಶಾಲೆಯೊಳಗೆ ಸೇರುತ್ತಿದ್ದು ಅಧಿಕಾರಿಗಳಿಗೆ ತಿಳಿಸಿ ಸಾಕಾಗಿದೆ. 120 ಮಕ್ಕಳು ಸರ್ಕಾರಿ ಶಾಲೆಯಲ್ಲಿರುವುದು ದಾಖಲೆಯಾಗಿದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ತುರ್ತು ರಸ್ತೆ ಕಾಮಗಾರಿ ಮಾಡದಿದ್ದರೆ ಶಾಲೆ ಬಂದ್‌ ಮಾಡಿ ರಸ್ತೆ ಚಳವಳಿ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.

Advertisement

ಸಣ್ಣ ವಾಹನ ಬಂದರೂ ಇಡೀ ರಸ್ತೆ ದೂಳು ಶಾಲೆಯೊಳಗೆ ನುಗ್ಗುತ್ತಿದೆ. ತ್ವರಿತವಾಗಿ ಕಾಮಗಾರಿ ಆರಂಭಿಸಲು ಮುಂದಾಗದಿದ್ದಲ್ಲಿ ರಸ್ತೆ ಚಳವಳಿ ಅನಿವಾರ್ಯವೆಂದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಸುಧಾರಾಣಿ ಗ್ರಾಮದಲ್ಲಿ ಪ್ರಸಿದ್ಧ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲವಿದ್ದು, ನಿತ್ಯ ನೂರಾರು ಭಕ್ತರು ರಾಜ್ಯದ ವಿವಿಧೆಡೆಯಿಂದ ಬರುವುದುಂಟು. ಎಲ್ಲರಿಗೂ ಕಿರಿಕಿರಿಯುಂಟು ಮಾಡುತ್ತಿದೆ ಎಂದರು. ಮುಖಂಡರಾದ ಮಹದೇವಪ್ಪ, ರಾಘವೇಂದ್ರ, ರಾಜೇಶ್‌, ಪ್ರಕಾಶ್‌, ಈರಪ್ಪ, ರವಿ, ಲತಾ, ದಿವ್ಯಾ, ಶೈಲಜಾ ಮತ್ತಿತರರಿದ್ದರು.

ವಿದ್ಯುತ್‌ ಕಂಬದ ಬದಲಾವಣೆಗೆ ಸಮಸ್ಯೆಯಾಗಿ ಕಾಮಗಾರಿ ವಿಳಂಬವಾಗಿದೆ. ಶೀಘ್ರ ಕಾಮಗಾರಿ ಮಾಡಲು ಹಾಗೂ ತಾತ್ಕಾಲಿಕವಾಗಿ ರಸ್ತೆ ದೂಳು ಬಾರದಂತೆ ರಸ್ತೆಗೆ ಟ್ಯಾಂಕರ್‌ ಮೂಲಕ ನೀರು ಸಿಂಪಡಿಸಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ. – ಪುಟ್ಟರಾಜು, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ

Advertisement

Udayavani is now on Telegram. Click here to join our channel and stay updated with the latest news.

Next