Advertisement

ಮಕ್ಕಳ ರಜಾ ಮಾಹಿತಿ ಕಲ್ಯಾಣ ಸಮಿತಿಗೆ ಕಡ್ಡಾಯ

06:00 AM Dec 09, 2018 | |

ಬೆಂಗಳೂರು: ಶಾಲೆಗೆ ನಿರಂತರ ಗೈರು ಹಾಜರಾಗುವ ಮಕ್ಕಳ ಮಾಹಿತಿಯನ್ನು ಇನ್ಮುಂದೆ ಶಾಲೆಯಿಂದಲೇ ಕಡ್ಡಾಯವಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಲಿಖೀತ ರೂಪದಲ್ಲಿ ನೀಡಬೇಕು!

Advertisement

ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಪೂರ್ವ ಸೂಚನೆ ಇಲ್ಲದೇ ಗೈರು ಹಾಜರಾಗಿರುವ ಮಕ್ಕಳ ಮನೆಗೆ ಶಾಲಾ ಶಿಕ್ಷಕರು ಹೋಗಿ ವಿಚಾರಿಸುವ ಪದ್ಧತಿ ಈಗ ಜಾರಿಯಲ್ಲಿದೆ. ಆದರೆ, ಶಾಲಾ ಶಿಕ್ಷಣ ವಂಚಿತ ಮಕ್ಕಳನ್ನು ಪುನರ್‌ ಶಾಲೆಗೆ ಕರೆತರುವಲ್ಲಿ ಈ ಪದ್ಧತಿ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ.

ಸದ್ಯದ ವ್ಯವಸ್ಥೆ ಪ್ರಕಾರ, ಶಾಲಾಡಳಿತ ಮಂಡಳಿಯಿಂದಲೇ ಗೈರಾದ ಮಕ್ಕಳ ತನಿಖೆ ನಡೆಸಲಾಗುತ್ತದೆ. ಅಷ್ಟಾಗಿಯೂ ಮಗು ಯಾಕೆ ಶಾಲೆಗೆ ಬರುತ್ತಿಲ್ಲ ಎಂಬುದು ಗೊತ್ತಾಗದೇ ಇದ್ದಾಗ ತನಿಖೆ ಅಲ್ಲಿಗೆ ನಿಂತು ಬಿಡುತ್ತದೆ. ಕಾಣೆಯಾದ ಮಗುವಿನ ಮಾಹಿತಿ ಕಲ್ಯಾಣ ಸಮಿತಿಗೆ ಬರುವ ವೇಳೆಗೆ ಒಂದೆರೆಡು ವರ್ಷವೇ ಕಳೆದಿರುತ್ತದೆ. ಅಷ್ಟೊತ್ತಿಗೆ ಮಗುವಿನ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬಿದ್ದಿರುತ್ತದೆ. ಇದನ್ನೆಲ್ಲ ತಪ್ಪಿಸುವ ಉದ್ದೇಶದಿಂದ ಇನ್ಮುಂದೆ ಶಾಲಾ ಶಿಕ್ಷಕರು ನಿರಂತರ ಗೈರಾದ ವಿದ್ಯಾರ್ಥಿ ಮಾಹಿತಿಯನ್ನು ತಕ್ಷಣ ಲಿಖೀತ ರೂಪದಲ್ಲಿ ಕಲ್ಯಾಣ ಸಮಿತಿಗೆ ನೀಡಬೇಕು ಎಂದು ಸರ್ವ ಶಿಕ್ಷಾ ಅಭಿಯಾನ ಶಾಲಾ ಮುಖ್ಯಸ್ಥರಿಗೆ ಹಾಗೂ ಮುಖ್ಯ ಶಿಕ್ಷಕರಿಗೆ ನಿರ್ದೇಶನ ನೀಡಿದೆ.

ಯಾವುದೇ ಮಗು ಪೂರ್ವ ಸೂಚನೆ ಇಲ್ಲದೇ ದೀರ್ಘ‌ಕಾಲ ಗೈರು ಹಾಜರಾದಲ್ಲಿ ಅಥವಾ ಆ ಮಗುವಿನ ಕುಟುಂಬವನ್ನು ಕಂಡು ಹಿಡಿಯಲು ಶಾಲಾ ಶಿಕ್ಷಕರು ವಿಫ‌ಲವಾದಲ್ಲಿ ಮಗುವಿನ ಮಾಹಿತಿಯನ್ನು ಕಡ್ಡಾಯವಾಗಿ ತಮ್ಮ ಜಿಲ್ಲಾ ವ್ಯಾಪ್ತಿಯ ಮಕ್ಕಳ ಕಲ್ಯಾಣ ಸಮಿತಿಗೆ ಲಿಖೀತ ರೂಪದಲ್ಲಿ ನೀಡಬೇಕು. ಹಾಗೆಯೇ ಆ ಪ್ರತಿಯನ್ನು ಕಡ್ಡಾಯವಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ)ಗಳಿಗೆ ಮತ್ತು ಜಿಲ್ಲಾ ಉಪನಿರ್ದೇಶಕ(ಡಿಡಿಪಿಐ)ರಿಗೂ ಸಲ್ಲಿಸಬೇಕು  ಎಂದಿದೆ.

ಸಮಿತಿಯಿಂದ ಶೀಘ್ರ ತನಿಖೆ :
ಪ್ರಸಕ್ತ ಸಾಲಿನಲ್ಲಿ ಶಾಲಾ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳ ಮಾಹಿತಿ ಕಲೆ ಹಾಕಲು ಸಮಗ್ರ ತನಿಖೆ ಸರ್ವಶಿಕ್ಷಾ ಅಭಿಯಾನದಿಂದ ನಡೆಯುತ್ತಿದೆ. ಸಮೀಕ್ಷೆ ವರದಿ ಜನವರಿ ಅಥವಾ ಫೆಬ್ರವರಿ ವೇಳೆಗೆ ಸರ್ಕಾರದ ಕೈ ಸೇರಲಿದೆ. ಶಾಲಾ ಮಕ್ಕಳ ಮೇಲೆ ನಿಗಾ ಇಡುವುದು ಶಿಕ್ಷಕರ ಹಾಗೂ ಶಾಲಾಡಳಿತ ಮಂಡಳಿಯ ಕರ್ತವ್ಯವಾಗಿದೆ. ನಿರಂತರವಾಗಿ ಶಾಲೆಗೆ ಗೈರಾದ ಮಗುವಿನ ಮಾಹಿತಿ ಕಲ್ಯಾಣ ಸಮಿತಿಗೆ ಬಂದ ತಕ್ಷಣವೇ ವಿಚಾರಣೆ ನಡೆಸಿ, ಮಗುವಿನ ಪತ್ತೆಗೆ ಬೇಕಾದ ಎಲ್ಲ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಲ್ಯಾಣ ಸಮಿತಿಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ಹಾಜರಾತಿ ಪ್ರಾಧಿಕಾರ ಸಕ್ರಿಯವಾಗಿಲ್ಲ
ಶಾಲಾ ಮಕ್ಕಳ ಹಾಜರಾತಿಯನ್ನು ಜಿಲ್ಲೆಯಿಂದಲೇ ನಿರ್ವಹಣೆ ಮಾಡುವ ಮತ್ತು ಮಕ್ಕಳು ನಿರಂತರವಾಗಿ ಶಾಲೆಗೆ ಬರುವಂತೆ ನೋಡಿಕೊಳ್ಳುವ ಹಾಜರಾತಿ ಪ್ರಾಧಿಕಾರ ಪ್ರತಿ ಜಿಲ್ಲೆಯಲ್ಲೂ ಇರುತ್ತದೆ. ರಾಜ್ಯದಲ್ಲೆಲ್ಲೂ ಈ ಪ್ರಾಧಿಕಾರ ಸಕ್ರಿಯವಾಗಿಲ್ಲ. ಶಾಲೆಗಳಿಂದ ಪ್ರತಿ ವಾರ ವಿದ್ಯಾರ್ಥಿಗಳ ಮಾಹಿತಿ ಪಡೆದು ಅವರ ಹಾಜರಾತಿ ಮೇಲೆ ನಿಗಾ ಇಡುವ ಕಾರ್ಯ ಮಾಡಬೇಕಿರುವ ಹಾಜರಾತಿ ಪ್ರಾಧಿಕಾರದ ಅಧಿಕಾರಿಗಳು ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು. ಜಿಲ್ಲಾ ಹಾಜರಾತಿ ಪ್ರಾಧಿಕಾರಿಗಳು ಈ ಸಂಬಂಧ ಸಕ್ರಿಯವಾಗಿ ಕೆಲಸ ಮಾಡಬೇಕು. ಯಾವುದೇ ಸೂಚನೆ ಇಲ್ಲದೇ ಒಂದು ವಾರಕ್ಕಿಂತ ಹೆಚ್ಚುಕಾಲ ಮಗು ಶಾಲೆಗೆ ಬಾರದೇ ಇದ್ದರೆ ಅಂತಹ ಮಕ್ಕಳ ಮನೆಗೆ ಶಾಲಾ ಶಿಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಬೇಕು.
– ಮರಿಸ್ವಾಮಿ, ಮುಖ್ಯಸ್ಥ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ನಿರಂತರವಾಗಿ ಗೈರು ಹಾಜರಾಗಿರುವ ಮಕ್ಕಳ ಮಾಹಿತಿಯನ್ನು ಕಲ್ಯಾಣ ಸಮಿತಿಗೆ  ನೀಡಬೇಕು ಎಂಬ ನಿಯಮ ಇದೆ. ಆದರೆ, ಶಾಲಾ ಮುಖ್ಯ ಶಿಕ್ಷಕರು ಇದನ್ನು ಮಾಡುತ್ತಿಲ್ಲ. ವಿಚಾರಣೆ ವೇಳೆ ಸಮಿತಿಯು ಎನ್‌ಜಿಒಗಳ ಮೂಲಕ ಮಕ್ಕಳ ಮಾಹಿತಿ ಪಡೆದುಕೊಳ್ಳಬೇಕಾದ ಸ್ಥಿತಿ ಇದೆ.
– ಎಸ್‌. ಚಂದ್ರಶೇಖರ್‌, ಸದಸ್ಯ, ಮಕ್ಕಳ ಕಲ್ಯಾಣ ಸಮಿತಿ, ಬೆಂಗಳೂರು ನಗರ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next