Advertisement

ಕಬ್ಬನ್‌ ಉದ್ಯಾನದಲ್ಲಿ ನಾಳೆಯಿಂದ ಮಕ್ಕಳ ಹಬ್ಬ

11:47 AM Nov 09, 2018 | Team Udayavani |

ಬೆಂಗಳೂರು: ಮಕ್ಕಳ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗವಿಕಲರ ಸಬಲೀಕರಣ ಇಲಾಖೆಗಳ ಸಹಯೋಗದಲ್ಲಿ ನ.10 ಹಾಗೂ 11 ರಂದು ನಗರದ ಕಬ್ಬನ್‌ ಉದ್ಯಾನದಲ್ಲಿ ಮಕ್ಕಳ ಹಬ್ಬವನ್ನು ಏರ್ಪಡಿಸಲಾಗಿದೆ.

Advertisement

ನಗರ ಭಾಗದ ಮಕ್ಕಳಿಗೆ ಗ್ರಾಮೀಣ ಬದುಕನ್ನು ಪರಿಚಯಿಸುವ ದೃಷ್ಟಿಯಿಂದ ಈ ಬಾರಿಯ ವಿಷಯವಾಗಿ “ಗ್ರಾಮೀಣ ಜೀವನ ಶೈಲಿ’ಯನ್ನು ಆಯ್ದುಕೊಳ್ಳಲಾಗಿದ್ದು, ಈ ಕುರಿತಂತೆ ಫ‌ಲಪುಷ್ಟ ಪ್ರದರ್ಶನ ಮೇಳ ಏರ್ಪಡಿಸಲಾಗಿದೆ. ಮೇಳದಲ್ಲಿ ನೂರಕ್ಕೂ ಹೆಚ್ಚು ಜಾತಿಯ ಹೂವು ಹಣ್ಣುಗಳಿಂದ ಪ್ರಾಣಿ, ಪಕ್ಷಿ ಆಕೃತಿಗಳನ್ನು ನಿರ್ಮಿಸಲಾಗುತ್ತಿದೆ.

ಜತೆಗೆ ಗ್ರಾಮೀಣ ಕ್ರೀಡೆಗಳಾದ ಬುಗುರಿ, ಗೋಲಿ, ಚೌಕಾಬಾರ, ಹಗ್ಗ ಜಗ್ಗಾಟ, ಅಳಗುಳಿ ಮಣೆ, ಹುಲಿ ಆಟ, ಲಗೋರಿ, ಮಡಿಕೆ ಒಡೆಯುವುದು. ತೆಂಗಿನ ಗರಿ ಸ್ಕೇಟಿಂಗ್‌ ಆಟ ಹಾಗೂ ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಕಾರದೊಂದಿಗೆ ಕುಸ್ತಿ, ಮಲ್ಲಕಂಬದಂತಹ  ಸಾಹಸ ಕ್ರೀಡೆಗಳನ್ನು ಸಹ ಆಯೋಜಿಸಲಾಗಿದೆ. 

ವಿಶೇಷವಾಗಿ ಬ್ಯಾಂಡ್‌ಸ್ಟಾಂಡ್‌ಗೆ ಪುಷ್ಪ ನಮನ ಸಲ್ಲಿಸಲು ತೋಟಗಾರಿಕೆ ಇಲಾಖೆಯು ಸಾವಿರಾರು ಹೂವುಗಳನ್ನು ಬಳಸಿ ಕೃತಕ ಬ್ಯಾಂಡ್‌ಸ್ಟಾಂಡ್‌ ನಿರ್ಮಿಸುತ್ತಿದೆ. ನಾಟಕ ಅಕಾಡೆಮಿ, ಲಲಿತಕಲಾ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ ಮತ್ತು ಜಾನಪದ ಅಕಾಡೆಮಿಗಳ ಮೇಲುಸ್ತುವಾರಿಯಲ್ಲಿ ನಾಟಕ, ಸಂಗೀತ, ಶಿಲ್ಪಕಲೆ, ಜಾನಪದ ಕಲಾ ಪ್ರದರ್ಶನ ಸೇರಿ ವಿವಿಧ ನೃತ್ಯ ಪ್ರಕಾರಗಳು, ಸಮೂಹ ನೃತ್ಯ, ಯಕ್ಷಗಾನ ಹಾಗೂ ಗಾರುಡಿ ಗೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ.

ತೋಟಗಾರಿಕೆ ಇಲಾಖೆಯು ವಿವಿಧ ಮಾದರಿ ಗಾರ್ಡನ್‌ಗಳು, ಹೊಸ ತಳಿಯ ಹೂಗಳು, ತೋಟಗಾರಿಕೆಗೆ ಉಪಯುಕ್ತ ಯಂತ್ರೋಪಕರಣ, ರಸಗೊಬ್ಬರ, ಬೀಜ ಮಾರಟಕ್ಕೂ ವೇದಿಕೆ ಕಲ್ಪಿಸಿದೆ ಎಂದು ತೋಟಗಾರಿಕೆ ಇಲಾಖೆ (ಕಬ್ಬನ್‌ ಉದ್ಯಾನ) ಉಪನಿರ್ದೇಶಕ ಮಹಾಂತೇಶ ಮುರುಗೋಡು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next