Advertisement

ಬಿರು ಬೇಸಗೆಯಲ್ಲಿ ಚಿಗುರೊಡೆದ ತಿರುಕನ ಕನಸು

07:04 PM Jul 18, 2019 | mahesh |

ತಿರುಕನಿಗೆ ಕನಸು ಬೀಳುವ ದೃಶ್ಯವನ್ನು, ಕೊರಳಿಗೆ ಆನೆ ವಿಜಯಮಾಲೆ ಹಾಕುವುದನ್ನು ಸಾಂಕೇತಿಕವಾಗಿ ಅಷ್ಟೇ ಪರಿಣಾಮಕಾರಿಯಾಗಿ ಪ್ರದರ್ಶಿಸಿದ ಮಕ್ಕಳ ಪ್ರಯತ್ನ ಫ‌ಲಿಸಿತು. ದೃಶ್ಯ ಬದಲಾವಣೆ ಹಾಗೂ ನಾಟಕಕ್ಕೆ ಪೂರಕವಾದ ಕಥಾಸಾರವನ್ನು ಸಮೂಹಗಾನದ ಮೂಲಕ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು.

Advertisement

“ತಿರುಕನೋರ್ವ ಊರ ಮುಂದೆ ಮುರುಕು ಧರ್ಮಶಾಲೆಯಲ್ಲಿ ಒರಗಿರುತ್ತಲೊಂದು ಕನಸು…’ಎನ್ನುವ ಷಡಕ್ಷರಿ ಕವಿಯ ಹಾಡು ಶಿಶು ಗೀತೆಗಳಲ್ಲಿ ಜನಪ್ರಿಯವಾಗಿದೆ.
ತಿರುಕನೊಬ್ಬನು ಊರೂರು ಅಲೆಯುತ್ತಾ, ಆ ಊರಿನ ರಾಜನ ವೈಭೋಗವನ್ನು ಕಣ್ಣಾರೆ ಕಂಡು ಧರ್ಮಛತ್ರದಲ್ಲಿ ಅವನು ಕಂಡ ಹಗಲುಗನಸಿನಲ್ಲಿ, ಊರಿನ ರಾಜನ ಆಯ್ಕೆಗಾಗಿ ಆನೆಯ ಸೊಂಡಿಲಿನಲ್ಲಿ ಹೂವಿನ ಹಾರವೊಂದನ್ನಿರಿಸಿ ಊರನ್ನು ಸುತ್ತಾಡಿಸುವಾಗ ಆನೆಯು ತಿರುಕನ ಕೊರಳಿಗೆ ಆ ಮಾಲೆಯನ್ನು ಹಾಕುತ್ತದೆ. ತಿರುಕನೇ ತಮ್ಮ ಊರಿನ ಮುಂದಿನ ರಾಜನೆಂದು ತಿಳಿದ ಪ್ರಜಾ ಜನರು ಅವನನ್ನು ಸಕಲ ಸಂಭ್ರಮಾದರಗಳಿಂದ ಅರಮನೆಗೆ ಕರೆದುಕೊಂಡು ಹೋಗಿ ಪಟ್ಟಾಭಿಷೇಕ ಮಾಡುವರು. ರಾಜ ವೈಭೋಗದಲ್ಲಿ ಮೈಮರೆತು ಪಟ್ಟದ ರಾಣಿಯಿಂದ ಜನಿಸಿದ ಮಕ್ಕಳ ಮದುವೆಯ ಸಂಭ್ರಮದಲ್ಲಿರುವಾಗ ವೈರಿ ದೇಶದ ರಾಜರು ದಂಡೆತ್ತಿ ಬಂದಿರುವ ವಿಷಯ ತಿಳಿದು ಹೆದರಿದ ತಿರುಕನ ಕನಸು ಭಗ್ನವಾಗುವುದು ಹಾಡಿನ ಸಾರಾಂಶ.

ಈ ಕಥೆಯನ್ನು ಆಧಾರವಾಗಿ ಮಾಲತಿ ಸಾಗರ ಬರೆದಿರುವ “ತಿರುಕನ ಕನಸು’ ಮಕ್ಕಳ ನಾಟಕವನ್ನು ಬಾಲಕಲಾವಿದರು ಇತ್ತೀಚೆಗೆ ಪ್ರಸ್ತುತಗೊಳಿಸಿದರು. ಸುಮನಸಾ ಕೊಡವೂರು ಮಕ್ಕಳಿಗಾಗಿ ಆಯೋಜಿಸಿದ್ದ ಬೇಸಿಗೆ ಕಾರ್ಯಗಾರದಲ್ಲಿ ತರಬೇತಿ ಪಡೆದ ಯು.ಕೆ.ಜಿ ಯಿಂದ ಏಳನೇ ತರಗತಿ ವರೆಗಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಮಾರೋಪದಂದು ಪ್ರದರ್ಶಿಸಿದ ನಾಟಕ ಕಿರಿಯರಿಂದ ಹಿರಿಯರವರೆಗೆ ಮೆಚ್ಚುಗೆ ಪಡೆಯಿತು. ಹಿಮ್ಮೇಳ ರಂಗಪರಿಕರಗಳ ಸ್ಥಳಾಂತರ/ ನಿಯೋಜನೆ ಎಲ್ಲವನ್ನೂ ಬಾಲಕಲಾವಿದರೇ ನಿರ್ವಹಿಸಿದ್ದು ಮಕ್ಕಳ ಕತೃತ್ವ ಶಕ್ತಿಗೆ ಸಾಕ್ಷಿಯಾಯಿತು. ತಿರುಕನಾಗಿ ಕು|ವರಾಲಿ ಪ್ರಕಾಶ್‌ ಅಭಿನಯ ಗಮನ ಸೆಳೆಯಿತು. ಉಳಿದಂತೆ ಮಂತ್ರಿ, ಸೇನಾಧಿಪತಿ, ಪುರ ಪ್ರಮುಖ ಪಾತ್ರಧಾರಿಗಳು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದರು. ತಿರುಕನಿಗೆ ಕನಸು ಬೀಳುವ ದೃಶ್ಯವನ್ನು, ಆತನ ಕೊರಳಿಗೆ ಆನೆ ವಿಜಯಮಾಲೆ ಹಾಕುವುದನ್ನು ಸಾಂಕೇತಿಕವಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ಪ್ರದರ್ಶಿಸಿದ ಮಕ್ಕಳ ಪ್ರಯತ್ನ ಫ‌ಲಿಸಿತು. ದೃಶ್ಯ ಬದಲಾವಣೆ ಹಾಗೂ ನಾಟಕಕ್ಕೆ ಪೂರಕವಾದ ಕಥಾಸಾರವನ್ನು ಸಮೂಹಗಾನದ ಮೂಲಕ ಪ್ರೇಕ್ಷಕರಿಗೆ ತಲುಪಿಸುವಲ್ಲಿ ತಂಡ ಯಶಸ್ವಿಯಾಯಿತು. ಅದರಲ್ಲೂ ರಾಜನ ಪಾತ್ರ ನಿರ್ವಹಸಿದ ಕು| ಮಾನ್ಸಿ ತನ್ನ ಚತುರಾಭಿನಯದಿಂದ, ಲವಲವಿಕೆಯಿಂದ ಪಾತ್ರಕ್ಕೆ ಜೀವ ತುಂಬಿದಳು. ಮದುಮಗನಾಗಿ ಮೊಗದಲ್ಲಿ ತೋರಿದ ಮಂದಹಾಸ, ರಾಣಿಯನ್ನು ಕಣ್ಣಿನಲ್ಲೆ ಮಾತನಾಡಿಸುವ ತುಂಟತನ, ಮಕ್ಕಳ ಲಾಲನೆಪಾಲನೆಯಲ್ಲಿ ತೋರಿದ ಜಾಣತನ, ವೈರಿ ರಾಜರ ಆಗಮನದ ಸುದ್ದಿ ತಿಳಿದಾಕ್ಷಣ ನಡುಗಿ ನೀರಾಗಿ ಪ್ರದರ್ಶಿಸಿದ ಪುಕ್ಕಲುತನ ವೈವಿದ್ಯಮಯವಾಗಿ ಹೊರಹೊಮ್ಮಿ ಪ್ರಶಂಸಗೆ ಪಾತ್ರವಾಯಿತು. ಮಕ್ಕಳ ನಾಟಕವಾದರೂ ಹಿರಿಯರ ಪ್ರಬುದ್ಧತೆಯನ್ನು ಮೈಗೂಡಿಸಿಕೊಂಡು ನುರಿತ ಕಲಾವಿದರಿಗೆ ತಾವೇನೂ ಕಡಿಮೆಯಿಲ್ಲವೆಂದು ಸಾಬೀತು ಪಡಿಸಿದ ಬಾಲಕ- ಬಾಲಕಿಯರು ಪ್ರಶಂಸಾರ್ಹರು.

ಹಿರಿಯರನ್ನು ತಿದ್ದುವುದು ಸುಲಭ, ಆದರೆ ಸಣ್ಣ ಪುಟ್ಟ ಮಕ್ಕಳಿಗೆ ತರಬೇತು ನೀಡಿ ಪೂರ್ಣ ಪ್ರಮಾಣದ ನಾಟಕವನ್ನು ಮಾಡುವುದೆಂದರೆ ದೊಡ್ಡ ಸಾಹಸವೇ ಸರಿ. ಈ ನಿಟ್ಟಿನಲ್ಲಿ ಮಕ್ಕಳಿಗೆ ಯೋಗ್ಯ ತರಬೇತಿ ನೀಡಿ ಅವರನ್ನು ಸಮರ್ಪಕವಾಗಿ ಬಳಸಿಕೊಂಡ ನಿರ್ದೇಶಕ ದಿವಾಕರ್‌ ಕಟೀಲ್‌ ಇವರೂ ಅಭಿನಂದನಾರ್ಹರು, ಬಿರು ಬೇಸಗೆಯ ಸಂಧ್ಯಾ ಸಮಯವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಅಭಿನಯ ಸಾಮರ್ಥ್ಯವನ್ನು ಓರೆಗೆ ಹಚ್ಚಿದ ಚಿಣ್ಣರನ್ನೂ ಅಭಿನಂದಿಸಬೇಕು.

ಜನನಿ ಭಾಸ್ಕರ್‌ ಕೊಡವೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next