ಮುದ್ದು ಪುಟಾಣಿಗಳೇ, ನನಗೆ ಸರಿಯಾಗಿ ನೆನಪಿದೆ.. ನಾವು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ನವೆಂಬರ್ ಬಂತೆಂದರೆ ಕನ್ನಡ ರಾಜ್ಯೋತ್ಸವದ ತಯಾರಿ. ಇದನ್ನೆಲ್ಲ ಮುಗಿಸಿ ಪ್ರೌಢ ಶಿಕ್ಷಣ ಅಂತ ಹೊರಟಾಗ ಇದರ ಆಚರಣೆಯೇ ಬೇರೆ ರೀತಿ. ಶಿಕ್ಷಕರು ಎಲ್ಲರೂ ಸೇರಿ ಅದೂ ಇದೂ ಅಂತ ಆಟಗಳನ್ನಾಡಿಸಿ ಏನೋ ಒಂದು ಸಿಹಿ ಹಂಚಿ ಒಂದು ಸಭೆ ಮಾಡುತ್ತಿದ್ದರು. ಏನೊ ಒಂದಷ್ಟು ಮಾಡೋವಾಗ ಆಸಕ್ತಿ ಇದ್ದ ನಾಲ್ಕಾರು ಜನ ಅಲ್ಲೇ ಇರ್ತಿದ್ರು. ಆಗ ನಮಗೆ ಅದರಲ್ಲಿ ಆಸಕ್ತಿ ಇರಲಿಲ್ಲ. ನಮ್ಮದೇ ಬೇರೆಯ ಪ್ರಪಂಚ.
ನನಗೆ ಮಕ್ಕಳೊಂದಿಗೆ ಒಡನಾಟ ತುಂಬಾನೇ ಇಷ್ಟ. ಮಕ್ಕಳೊಂದಿಗೆ ಮಾತುಕತೆ, ನಗುನಗುತ್ತಾ ಸಮಯ ಕಳೆಯೋದು, ಆಟವಾಡುವುದು… ನನಗಿಷ್ಟ. ಮಕ್ಕಳ ಜೊತೆಗಿದ್ದರೆ ಒಂದು ಕ್ಷಣ ನಾನೊಬ್ಬಳು ಹಿರಿ ವಯಸ್ಸಿನವಳು ಎಂಬುದನ್ನು ಮರೆತೇ ಬಿಡುತ್ತೇನೆ, ನನ್ನ ಬಾಲ್ಯದ ದಿನಗಳು ಎಂದೋ ಕಳೆದಿವೆ ಎನ್ನುವ ಪರಿವೆಯೂ ಇರುವುದಿಲ್ಲ. ಕಿರಿಯರಿಗೆ ಉಪದೇಶ ಮತ್ತು ಸಲಹೆ ನೀಡುವುದೇ ಹಿರಿಯರ ಅಭ್ಯಾಸ. ನನಗಿನ್ನೂ ನೆನಪಿದೆ, ಪುಟ್ಟ ಹುಡುಗಿಯಾಗಿದ್ದಾಗ ನನಗೂ ಇಂಥ ಉಪದೇಶಗಳೆಂದರೆ ಕಿರಿಕಿರಿ.
ಇತರರ ಮಾತುಗಳನ್ನು ಆಲಿಸಿದಾಗಲೆಲ್ಲಾ ನಾನೊಬ್ಬಳು ಜ್ಞಾನಿ, ಬುದ್ಧಿವಂತೆ ಹಾಗೂ ಪ್ರಮುಖ ವ್ಯಕ್ತಿಯಾಗುವ ಕನಸು ಕಾಣುತ್ತಿದ್ದೆ. ಸುತ್ತ ಮುತ್ತಲಿನ ಈ ಅಭೂತಪೂರ್ವ ಸೌಂದರ್ಯ… ಎಲ್ಲವನ್ನೂ ಮರೆಯುವ ನಾವು ಅಥವಾ ನಮ್ಮ ಹಿರಿಯರು ನಮ್ಮದೇ ವಾದ ವಿವಾದ ಮಂಡಿಸುತ್ತಾ ಕಾಲಹರಣ ಮಾಡಿ ಸ್ವಂತಿಕೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಆದರೆ ನನಗೆ ಗೊತ್ತು. ನೀವೆಲ್ಲಾ ತುಂಬಾ ಬುದ್ಧಿವಂತರು, ನಿಮ್ಮ ಕಣ್ಣು ಮತ್ತು ಕಿವಿಗಳು ಜಗತ್ತಿನ ಸೌಂದರ್ಯ ಮತ್ತು ಸುತ್ತಲಿನ ಬದುಕನ್ನು ಆಸ್ವಾದಿಸಲು ತೆರೆದೇ ಇರುತ್ತದೆ.
” ಒಂದು ಸುಂದರ ಹೂವನ್ನು ಅದರ ನಾಮಧೆಯದಿಂದ ಗುರುತಿಸುವಿರಾ ಅಥವಾ ಹಕ್ಕಿಯೊಂದು ಹಾಡುತ್ತಿದ್ದರೆ ಆ ಹಕ್ಕಿಯ ಹೆಸರು ಹೇಳಬಲ್ಲಿರಾ? ಅವುಗಳೊಂದಿಗೆ ಅದೆಷ್ಟು ಸರಳವಾಗಿ ಸ್ನೇಹ ಬೆಳೆಸುತ್ತೀರಿ”ಅಥವಾ ಒಂದಿಷ್ಟು ಪ್ರೀತಿಯಿಂದ ಬಳಿ ಸರಿದರೆ ಸಾಕು ಪ್ರಕೃತಿಯ ಪ್ರತಿ ಜೀವ ಜಂತುಗಳೂ ನಿಮ್ಮ ಒಡನಾಡಿಯಾಗಬಲ್ಲವು.
ಮಕ್ಕಳು ಜೊತೆಯಾಗಿ ಆಡುತ್ತಾರೆ, ಜೊತೆಯಾಗಿ ನಲಿಯುತ್ತಾರೆ ಮತ್ತು ಕೆಲಸ ಮಾಡುತ್ತಾರೆ. ಪುಟಾಣಿಗಳೇ, ನಮ್ಮ ನಿಮ್ಮ ನಡುವೆ ಒಬ್ಬ ಮಹಾನ್ ವ್ಯಕ್ತಿ ಇದ್ದಾರೆಂಬುವುದು ನಿಮಗೂ ಗೊತ್ತಲ್ಲ? ಅವರೇ ರಾಷ್ಟ್ರಪಿತ ಮಹಾತ್ಮಗಾಂಧಿ. ಇವರನ್ನು ನಾವು ಪ್ರೀತಿಯಿಂದ ಬಾಪೂಜಿ ಎನ್ನುತ್ತೇವೆ. ಅವರೊಬ್ಬ ಮಹಾನ್ ಜ್ಞಾನಿ. ಆದರೆ ಅವರೆಂದೂ ತಮ್ಮ ಬುದ್ದಿವಂತಿಕೆಯನ್ನು ಪ್ರದರ್ಶಿಸಿಲ್ಲ. ಬಲು ಸರಳ ಮತ್ತು ಮಕ್ಕಳಂಥ ಮುಗ್ಧ ಮನಸ್ಸು ಅವರದು. ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ಎಷ್ಟೋ ಬಾರಿ, ನಗುನಗುತ್ತಲೇ ಜಗತ್ತನ್ನು ಎದುರಿಸಲು ಸಿದ್ಧರಾಗಿ ಎಂಬ ನೀತಿಪಾಠವನ್ನು ನಮಗೆ ಬೋಧಿಸುತ್ತಿದ್ದರು.
*ಸಾನಿಯಾ. ಆರ್. ಶಿವಮೊಗ್ಗ