ಅದು ಎ.ಡಿ.ಎ. ರಂಗಮಂದಿರದಲ್ಲಿ ನಡೆದ “ನೃತ್ಯ ಸಿರಿ- 2020′ ಕಾರ್ಯಕ್ರಮ. ಮೂರು ವರ್ಷದ ಪುಟ್ಟಬಾಲೆಯರಿಂದ ಹದಿಹರೆಯದ ಹುಡುಗಿಯರವರೆಗೆ ನಿರಾಯಾಸವಾಗಿ ನರ್ತಿಸುತ್ತ, ಪ್ರತಿಭಾ ಪ್ರದರ್ಶನ ಮಾಡಿದರು. ನಾಟ್ಯಕಲಾರ್ಪಣ ನೃತ್ಯ ಕೇಂದ್ರ ಟ್ರಸ್ಟ್ ನಾಟ್ಯಾಚಾರ್ಯ ಪದ್ಮಜಾ ಜಯರಾಂ ಅವರು ನೀಡಿದ ಸಮರ್ಥ ನೃತ್ಯ ತರಬೇತಿ ಎದ್ದುಕಾಣುತ್ತಿತ್ತು.
“ಮನೋಹರ ಪುಷ್ಪಾಂಜಲಿ’ಯಿಂದ ಪ್ರಾರಂಭವಾದ ಪ್ರಸ್ತುತಿ ಪಂಚವದನ ವಿನಾಯಕನ ವಿವಿಧ ಸುಂದರರೂಪಗಳನ್ನು ಪ್ರದರ್ಶಿಸಿ ಮುದಗೊಳಿಸಿತು. “ಮಹಾದೇವ ಶಿವಶಂಭೋ’- ರೇವತಿ ರಾಗದ ಕೃತಿಯನ್ನು ಸಪ್ತಕನ್ನಿಕೆಯರು ತಮ್ಮ ಸ್ಫುಟವಾದ ಆಂಗಿಕಗಳು ಮತ್ತು ಯೋಗದ ಭಂಗಿಗಳಿಂದ ಸೆಳೆದರು. “ಸುಬ್ರಹ್ಮಣ್ಯ ಕೌತ್ವಂ’ ಕೂಡ ಅಷ್ಟೇ ಶಕ್ತಿಶಾಲಿಯಾಗಿ ಅಭಿವ್ಯಕ್ತಗೊಂಡು, ಮಯೂರಭಂಗಿಗಳ ವಿನ್ಯಾಸದಲ್ಲಿ ಕುಮಾರಸ್ವಾಮಿಯ ಮಹಿಮೆಯನ್ನು ಚಿತ್ರಿಸಿತು.
“ತಂಬೂರಿ ಮೀಟಿದವ’- ಪುರಂದರದಾಸರ ಪದ ಮೈಮರೆಸುವ ಗಾನಲಹರಿಯಲ್ಲಿ ತೇಲಿಸುತ್ತ, ಕಲಾವಿದೆಯರ ಲಾಸ್ಯಪ್ರಧಾನ ಆಂಗಿಕ- ಅಭಿನಯಗಳಿಂದ ಆನಂದ ನೀಡಿತು. ಆಕರ್ಷಕ ವೇಷಭೂಷಣಗಳಿಂದ ಕಂಗೊಳಿಸಿದ ಅಷ್ಟಗೋಪಿಯರೊಡನೆ ಮುದ್ದುಕೃಷ್ಣನಾಡಿದ ಲೀಲಾವಿನೋದ, ಹರ್ಷದಾಯಕ ಕೋಲಾಟದ ಸಂಭ್ರಮ ರಮಣೀಯವಾಗಿತ್ತು. ಪುಟಾಣಿಗಳು “ಶ್ರೀಮನ್ನಾರಾಯಣ’ನನ್ನು ಸಾಕ್ಷಾತ್ಕರಿಸಿದ ಬಗೆ ಚೆಂದವೆನಿಸಿದರೆ, ದುಷ್ಟ ಸಂಹಾರಿ ಭೈರವ ನಾರಿ’ಯರ ವೀರಾವೇಶ ರೌದ್ರರೂಪ, ಮಹಿಷಾಸುರ ಮರ್ದಿನಿಯ ಶಕ್ತ ಕಾಳಗದ ದೃಶ್ಯಗಳು ಕಣ್ಸೆಳೆದವು.
“ನಟೇಶ ಕೌತ್ವಂ’ ದೈವೀಕತೆಯ ರಸಧಾರೆ ಹರಿಸಿದರೆ, ಕರುಣಾಕರ ಶಂಕರನ “ಶಿವ ಶಂಭೋ ಸ್ವಯಂಭೋ’ವಿನ ಶಕ ವಿಭಿನ್ನ ರೂಪಗಳನ್ನು ಸಾಕಾರಗೊಳಿಸಲಾಯಿತು. ಮುಂದೆ ತೆರೆದುಕೊಂಡ ಜಾನಪದ ಆಯಾಮದ ನೃತ್ಯಗಳು ಕುಣಿಸುವ ಲಯದಲ್ಲಿ ಸೆಳೆದೊಯ್ದವು. “ಮೂಡಲ್ ಕುಣಿಗಲ್ ಕೆರೆ’ಯನ್ನು ಬಣ್ಣಿಸಿದ ಚೆಲುವೆಯರ ಜಾನಪದ ಹೆಜ್ಜೆಗಳು, ಮಲೆ ಮಹದೇಶ್ವರನ ಭಕ್ತರ ಕಂಸಾಳೆಯ ಕಸರತ್ತಿನ ಭಂಗಿಗಳ ರಚನೆ, ಹಾರಿ ಕುಣಿಯುವ ಬನಿ ಸೊಗಸಾಗಿದ್ದವು.
* ವೈ.ಕೆ. ಸಂಧ್ಯಾ ಶರ್ಮ