Advertisement

Children cancer clinic: ಮಕ್ಕಳ ಕ್ಯಾನ್ಸರ್‌ ಚಿಕಿತ್ಸಾ ನಂತರದ ಕ್ಲಿನಿಕ್‌

03:27 PM Aug 07, 2023 | Team Udayavani |

ಭಾರತದಲ್ಲಿ ಪ್ರತೀ ವರ್ಷ ಅಂದಾಜು 76,805 ಮಕ್ಕಳು ಹಾಗೂ ಹದಿಹರಯದವರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ ಗಳೆಂದರೆ ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್‌), ಮಿದುಳಿನ ಕ್ಯಾನ್ಸರ್‌ಗಳು, ಲಿಂಫೊಮಾಗಳು ನ್ಯೂರೊಬ್ಲಾಸ್ಟೊಮಾ ಮತ್ತು ವಿಲ್ಮ್ಸ್ ಟ್ಯೂಮರ್‌ನಂತಹ ಘನ ಗಡ್ಡೆಗಳು.ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸಿದರೆ ಶೇ. 80ರಷ್ಟು ಬಾಲ್ಯಕಾಲದ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದಾಗಿದೆ.

Advertisement

ಬಾಲ್ಯಕಾಲದ ಕ್ಯಾನ್ಸರ್‌ನಿಂದ ಬದುಕುಳಿಯುವ ವಿಚಾರದಲ್ಲಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಾಧಿಸಲಾದ ಭಾರೀ ಪ್ರಗತಿಯನ್ನು ಭಾರತ ಸಹಿತ ಕಡಿಮೆ ತಲಾದಾಯವುಳ್ಳ ದೇಶ (ಎಲ್‌ಎಂಐಸಿಗಳು)ಗಳಲ್ಲಿ ಯಥಾವತ್‌ ಸಾಧಿಸಲು ಸಾಧ್ಯವಾಗಿಲ್ಲವಾದರೂ ಇತ್ತೀಚೆಗಿನ ದಶಕಗಳಲ್ಲಿ ಬದುಕುಳಿಯುವ ಪ್ರಮಾಣ ಗಮನಾರ್ಹ ಹೆಚ್ಚಳ ಕಂಡಿದೆ.

ಬಾಲ್ಯಕಾಲದ ಕ್ಯಾನ್ಸರ್‌ಗಳಿಂದ ಬದುಕುಳಿಯುವ ಪ್ರಮಾಣ ಸರಾಸರಿ ಶೇ. 70-80 ಇರುವುದನ್ನು ಗಮನಿಸಿದರೆ ಮುಂಬರುವ ವರ್ಷಗಳಲ್ಲಿ ಇದು ಇನ್ನಷ್ಟು ಹೆಚ್ಚುವುದು ನಿಸ್ಸಂಶಯ.

ಕ್ಯಾನ್ಸರ್‌ ಚಿಕಿತ್ಸೆ ಪೂರ್ಣಗೊಂಡ ಬಳಿಕದ (ಎಸಿಟಿ) ಕ್ಲಿನಿಕ್‌ನ ಅಗತ್ಯವೇನು? ಕ್ಯಾನ್ಸರ್‌ನಿಂದ ಬದುಕುಳಿದವರು ಚಿಕಿತ್ಸೆ, ಔಷಧ ಮತ್ತು ಚಿಕಿತ್ಸಾ ವಿಧಾನಗಳ ಅಡ್ಡ ಪರಿಣಾಮಗಳು ಮಾತ್ರವಲ್ಲದೆ ಮಾನಸಿಕ ಸಮಸ್ಯೆಗಳಂತಹ ವಿಶಿಷ್ಟ ತೊಂದರೆಗಳನ್ನು ಎದುರಿಸುತ್ತಾರೆ. ಕ್ಯಾನ್ಸರ್‌ಗೆ ತುತ್ತಾಗಿರುವ ಮಕ್ಕಳು ಮತ್ತು ಅವರ ಹೆತ್ತವರು ಚಿಕಿತ್ಸೆಯ ಅವಧಿಯಲ್ಲಿ ಬಹುತೇಕ ಬಾರಿ ತಮ್ಮ ಸ್ವಂತ ಊರಿನಿಂದ ದೂರ ಇರಬೇಕಾಗುತ್ತದೆ.

ದೈಹಿಕ ಮತ್ತು ಮಾನಸಿಕ ಅಸಮತೋಲನ, ಶಾಲಾ ಕಾಲೇಜಿಗೆ ಗೈರಾಗುವುದು ಇತ್ಯಾದಿಗಳು ಚಿಕಿತ್ಸೆ ಪೂರ್ಣಗೊಂಡು ಹಿಂದಿರುಗಿದಾಗ ಸಮಸ್ಯೆಗಳನ್ನು ಉಂಟು ಮಾಡಬಹುದು. ಹೀಗಾಗಿ ಕ್ಯಾನ್ಸರ್‌ ಚಿಕಿತ್ಸೆಗೆ ಒಳಗಾಗುವ ಎಲ್ಲ ಮಕ್ಕಳು ಕೂಡ ದೀರ್ಘ‌ಕಾಲೀನ ಅನುಸರಣೆಯ ಆರೈಕೆಯನ್ನು ಪಡೆಯುವುದು ಬಹಳ ಮುಖ್ಯ. ಕಾಯಿಲೆಯಿಂದ ಒಮ್ಮೆ ಗುಣಮುಖನಾದ ಬಳಿಕ ಮಗು ತಾನು ಈಗ ರೋಗಿಯಲ್ಲ ಎಂಬ ಭಾವನೆಯನ್ನು ಹೊಂದುವುದು ಬಹಳ ಪ್ರಾಮುಖ್ಯವಾದುದು, ಇದರಿಂದಾಗಿ ಅವರು ಸಲೀಸಾಗಿ ಸಹಜ ಸ್ಥಿತಿಗೆ ಮರಳುತ್ತಾರೆ ಮತ್ತು ಸಮಾಜದ ಪ್ರಧಾನ ವಾಹಿನಿಯಲ್ಲಿ ಸುಗಮವಾಗಿ ಬೆರೆತುಕೊಳ್ಳುವುದು ಸಾಧ್ಯವಾಗುತ್ತದೆ. ಮಕ್ಕಳು ಮತ್ತು ಅವರ ಕುಟುಂಬಗಳ ಈ ಸಹಜತೆಗೆ ಮರಳುವಿಕೆಯನ್ನು ಸಾಧ್ಯವಾಗಿಸಲು ಎಸಿಟಿ ಕ್ಲಿನಿಕ್‌ಗಳು ಸಹಾಯ ಮಾಡುತ್ತವೆ. ಇಂತಹ ಕುಟುಂಬಗಳು ಹೊಂದಿರುವ, ಇದುವರೆಗೆ ಕಂಡುಬಾರದ ಸಮಸ್ಯೆಗಳನ್ನು ಮತ್ತು ಕುಟುಂಬಗಳ ಅಗತ್ಯಗಳನ್ನು ಪರಿಹರಿಸುವುದಕ್ಕೆ ಈ ಕ್ಲಿನಿಕ್‌ಗಳು ನೆರವಾಗುತ್ತವೆ.

Advertisement

ಎಸಿಟಿ ಕ್ಲಿನಿಕ್‌ನಲ್ಲಿ ಏನು ನಡೆಯುತ್ತದೆ?

ಕ್ಯಾನ್ಸರ್‌ ಚಿಕಿತ್ಸೆಯು ಅಂತ್ಯಗೊಂಡ ಬಳಿಕ ರೋಗಿಗಳು ಇಲ್ಲಿ ನೋಂದಾವಣೆಗೊಳ್ಳುತ್ತಾರೆ. ನೋಂದಣಿಯ ಸಮಯದಲ್ಲಿ ನೀಡಲಾಗಿರುವ ಚಿಕಿತ್ಸೆಯ ಬಗೆಗಿನ ಸಾರಾಂಶ ಮತ್ತು ಅನುಸರಣೆ ಆರೈಕೆಯ ಕರಡು ಯೋಜನೆ ಯನ್ನು ರೋಗಿ ಮತ್ತು ಕುಟುಂಬ ಸದಸ್ಯರಿಗೆ ನೀಡಲಾಗುತ್ತದೆ.

ಕ್ಲಿನಿಕ್‌ ಭೇಟಿಯ ವೇಳೆ ಅನುಸರಣೆ ಆರೈಕೆ (ನಿಯಮಿತ ಆರೋಗ್ಯ ಮತ್ತು ಸೌಖ್ಯ ತಪಾಸಣೆ ಸಹಿತ), ಚಿಕಿತ್ಸೆಯ ವಿಳಂಬ ಪರಿಣಾಮಗಳು, ಕ್ಯಾನ್ಸರ್‌ ಮರುಕಳಿಸುವಿಕೆ, ದ್ವಿತೀಯಕ ಕ್ಯಾನ್ಸರ್‌ ಮತ್ತು ಜೀವನ ಗುಣಮಟ್ಟದಂತಹ ವಿಚಾರಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ. ಕುಟುಂಬ ಸದಸ್ಯರು, ಗೆಳೆಯ- ಗೆಳತಿಯರು ಮತ್ತು ಆರೈಕೆದಾರರನ್ನು ಕೂಡ ಈ ಕ್ಲಿನಿಕ್‌ನ ಭಾಗವಾಗಿ ಪರಿಗಣಿಸಲಾಗುತ್ತದೆ.

ಕ್ಯಾನ್ಸರ್‌ ಚಿಕಿತ್ಸೆಯ ವಿಳಂಬ ಪರಿಣಾಮಗಳೇನು?

ಮಕ್ಕಳ ಅಂಗಾಂಗಗಳು ಇನ್ನೂ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಇರುವುದರಿಂದ ಕ್ಯಾನ್ಸರ್‌ಗೆ ನೀಡುವ ಗುರಿ ನಿರ್ದೇಶಿತ ಚಿಕಿತ್ಸೆಗಳು ಭವಿಷ್ಯದಲ್ಲಿ ಈ ಅಂಗಾಂಗಗಳ ಮೇಲೆ ಪರಿಣಾಮಗಳನ್ನು ಉಂಟು ಮಾಡಬಹುದು. ಕ್ಯಾನ್ಸರ್‌ ಗುರಿ ನಿರ್ದೇಶಿತ ಚಿಕಿತ್ಸೆಗೆ ಒಳಗಾದ ತಿಂಗಳುಗಳು ಅಥವಾ ವರ್ಷಗಳ ಬಳಿಕ ಉದ್ಭವಗೊಳ್ಳಬಹುದಾದ ಈ ಅಡ್ಡ ಪರಿಣಾಮಗಳನ್ನು ವಿಳಂಬ ಪರಿಣಾಮಗಳು ಎನ್ನುತ್ತಾರೆ.

ಉದಾಹರಣೆಗೆ, ಮಿದುಳಿನ ಟ್ಯೂಮರ್‌ ಹೊಂದಿರುವ ಮಗುವಿನ ಮಿದುಳಿಗೆ ನೀಡಲಾಗುವ ರೇಡಿಯೇಶನ್‌ ಚಿಕಿತ್ಸೆಯು ಹಾರ್ಮೋನ್‌ ಕೊರತೆಗೆ ಕಾರಣವಾಗಬಹುದು; ಇದನ್ನು ಪತ್ತೆಹಚ್ಚಿ ಸೂಕ್ತವಾಗಿ ಚಿಕಿತ್ಸೆ ನೀಡಬೇಕಾಗಿರುತ್ತದೆ. ಹಾಗೆಯೇ ಕಿಮೋಥೆರಪಿಯ ಕೆಲವು ಔಷಧಗಳು ಹೃದಯದ ಕಾರ್ಯಚಟುವಟಿಕೆ ಮತ್ತು ಶ್ರವಣ ಶಕ್ತಿಯ ಮೇಲೆ ಪರಿಣಾಮ ಬೀರಬಹುದು; ಹೀಗಾಗಿ ಇವುಗಳ ಮೇಲೆ ನಿಗಾ ಇರಿಸಿ ಅಸಹಜತೆ ಕಂಡುಬಂದರೆ ಚಿಕಿತ್ಸೆಯ ಮೂಲಕ ನಿರ್ವಹಿಸಬೇಕಾಗುತ್ತದೆ.

ಕ್ಯಾನ್ಸರ್‌ ಚಿಕಿತ್ಸೆಗೆ ಒಳಗಾಗಿ ಗುಣ ಹೊಂದಿರುವ ಮಗು ವಿಳಂಬ ಪರಿಣಾಮಗಳನ್ನು ಹೊಂದುವ ಸಾಧ್ಯತೆಗಳು ಶೇ. 3-15ರ ನಡುವೆ ಇದ್ದು, ಕ್ಯಾನ್ಸರ್‌ ಉಂಟಾಗಿರುವ ದೇಹಭಾಗ ಮತ್ತು ನೀಡಲಾಗಿರುವ ಚಿಕಿತ್ಸೆಯನ್ನು ಅವಲಂಬಿಸಿರುತ್ತದೆ. ಕಳೆದ ದಶಕಗಳಲ್ಲಿ ಚಿಕಿತ್ಸಾ ವಿಧಾನಗಳಲ್ಲಿ ಆಗಿರುವ ಪ್ರಗತಿಯಿಂದಾಗಿ ವಿಳಂಬ ಪರಿಣಾಮಗಳು ಗಮನಾರ್ಹವಾಗಿ ಕಡಿಮೆಯಾಗಿವೆ.

ಯಾವೆಲ್ಲ ತಜ್ಞ ವಿಭಾಗಗಳು ಎಸಿಟಿ ಕ್ಲಿನಿಕ್‌ನ ಭಾಗವಾಗಿರುತ್ತವೆ?

ಈ ಕ್ಲಿನಿಕ್‌ನ ಪ್ರಧಾನ ತಂಡವು ಈ ಕೆಳಗಿನ ತಜ್ಞ ವೈದ್ಯರನ್ನು ಒಳಗೊಂಡಿರುತ್ತದೆ:

 ಮಕ್ಕಳ ಕ್ಯಾನ್ಸರ್‌ ತಜ್ಞರು (ಪೀಡಿಯಾಟ್ರಿಕ್‌ ಓಂಕಾಲಜಿಸ್ಟ್‌)

 ಮಕ್ಕಳ ಮತ್ತು ಹದಿಹರಯದವರ ಮನಶಾÏಸ್ತ್ರಜ್ಞರು (ಚೈಲ್ಡ್‌ ಆ್ಯಂಡ್‌ ಅಡೊಲೆಸೆಂಟ್‌ ಸೈಕಿಯಾಟ್ರಿಸ್ಟ್‌)

 ಮಕ್ಕಳ ಅಂತಸ್ರಾವಶಾಸ್ತ್ರಜ್ಞರು (ಪೀಡಿಯಾಟ್ರಿಕ್‌ ಎಂಡೊಕ್ರೈನಾಲಜಿಸ್ಟ್‌)

 ವೈದ್ಯಕೀಯ ಸಾಮಾಜಿಕ ಕಾರ್ಯಕರ್ತರು (ಮೆಡಿಕಲ್‌ ಸೋಶಿಯಲ್‌ ವರ್ಕರ್‌)  ಮನಶಾಸ್ತ್ರೀಯ ಸಾಮಾಜಿಕ ಕಾರ್ಯಕರ್ತರು (ಸೈಕಿಯಾಟ್ರಿಕ್‌ ಸೋಶಿಯಲ್‌ ವರ್ಕರ್‌)

 ದಾದಿ ಸಮನ್ವಯಕಾರರು (ನರ್ಸ್‌ ಕೊಆರ್ಡಿನೇಟರ್‌)

 ಪ್ರಜನನ ವೈದ್ಯಶಾಸ್ತ್ರ ತಜ್ಞರು (ರಿಪ್ರೊಡಕ್ಟಿವ್‌ ಮೆಡಿಸಿನ್‌ ಸ್ಪೆಶಲಿಸ್ಟ್‌)

ಸರಕಾರೇತರ ಸಂಸ್ಥೆ (ಎನ್‌ಜಿಒ)ಗಳು ಎಸಿಟಿ ಕ್ಲಿನಿಕ್‌ನಲ್ಲಿ ಭಾಗವಹಿಸುತ್ತವೆಯೇ?

ಕ್ಯಾನ್ಸರ್‌ ಚಿಕಿತ್ಸೆಯ ಬಳಿಕ ಅಂಥ ಮಕ್ಕಳು ಸಾಮಾನ್ಯವಾಗಿ ವಿಮೆ ಮತ್ತು ಸರಕಾರ ಸಂಬಂಧಿ ಯೋಜನೆಗಳಿಗೆ ಅರ್ಹತೆ ಹೊಂದಿರುವುದಿಲ್ಲ. ಹೀಗಾಗಿ ಇಂತಹ ಮಕ್ಕಳ ಪುನರ್ವಸತಿಯಲ್ಲಿ ಎನ್‌ ಜಿಒಗಳು ಪ್ರಧಾನ ಪಾತ್ರ ವಹಿಸುತ್ತವೆ ಹಾಗೂ ಅಂಥ ಮಕ್ಕಳಿಗೆ ಆರೈಕೆ ಲಭಿಸುವುದನ್ನು ಖಾತರಿ ಪಡಿಸುತ್ತವೆ. ಮಾನವ ಮತ್ತು ಇತರ ಸಂಪನ್ಮೂಲ ಒದಗಿಸುವ ಮೂಲಕ ಆಸ್ಪತ್ರೆಗಳ ಸಾಮರ್ಥ್ಯ ವೃದ್ಧಿಗೂ ನೆರವಾಗುತ್ತವೆ. ಭಾರತೀಯ ಕ್ಯಾನ್ಸರ್‌ ಸೊಸೈಟಿಯಂತಹ ಎನ್‌ಜಿಒಗಳು ಇಂತಹ ಮಕ್ಕಳಿಗೆ ಶಿಕ್ಷಣ ಲಭ್ಯವಾಗುವುದನ್ನು ಖಚಿತಪಡಿಸುವುದಕ್ಕಾಗಿ ವಿದ್ಯಾರ್ಥಿ ವೇತನಗಳನ್ನು ಒದಗಿಸುತ್ತದೆ ಹಾಗೂ ಆಯ್ದ ಸಂಯೋಜಿತ ಆಸ್ಪತ್ರೆಗಳಲ್ಲಿ ಇಂತಹ ರೋಗಿ ಗಳ ವಿಳಂಬ ಪರಿಣಾಮಗಳಿಗೆ ಚಿಕಿತ್ಸೆಗಾಗಿ ಧನ ಸಹಾಯವನ್ನು ಕೂಡ ನೀಡುತ್ತವೆ.

ಇಂತಹ ಕ್ಲಿನಿಕ್‌ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಇದೆಯೇ?

2023ರ ಕ್ಯಾನ್ಸರ್‌ನಿಂದ ಬದುಕಿ ಉಳಿದವರ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಕಸ್ತೂರ್ಬಾ ಆಸ್ಪತ್ರೆಯ ಪೀಡಿಯಾಟ್ರಿಕ್‌ ಹೆಮಟಾಲಜಿ ಮತ್ತು ಆಂಕಾಲಜಿ ವಿಭಾಗವು ಭಾರತೀಯ ಕ್ಯಾನ್ಸರ್‌ ಸೊಸೈಟಿ, ಮುಂಬಯಿಯ ಸಹಯೋಗದಲ್ಲಿ ಎಸಿಟಿ ಕ್ಲಿನಿಕನ್ನು “ಪಾಟ್ನìರ್‌ಶಿಪ್‌ ಇನ್‌ ಕ್ಯಾನ್ಸರ್‌ ಸರ್ವೈವರ್‌ಶಿಪ್‌ ಆಪ್ಟಿಮೈಸೇಶನ್‌ (ಪಿಐಸಿಎಎಸ್‌ಎಸ್‌ಒ) ಎಂಬ ಯೋಜನೆಯಾಗಿ ಆರಂಭಿಸಿವೆ.

ಇದರ ಮೂಲಕ ಆಪ್ತಸಮಾಲೋಚಕರಿಂದ ಮನೋಸಾಮಾಜಿಕ ಅಗತ್ಯಗಳ ವಿಶ್ಲೇಷಣೆ, ಶಿಕ್ಷಣಕ್ಕೆ ಆರ್ಥಿಕ ನೆರವು ಮತ್ತು ತಪಾಸಣೆ ಮತ್ತು ಪರೀಕ್ಷೆಗಳ ಮೂಲಕ ನಿರ್ದಿಷ್ಟ ವಿಳಂಬ ಪರಿಣಾಮಗಳ ಗುರುತಿಸುವಿಕೆ, ವಿಳಂಬ ಪರಿಣಾಮಗಳ ಚಿಕಿತ್ಸೆಗೆ ನೆರವು ಮತ್ತು ಬದುಕುಳಿದವರ ನೆರವು ಸಮೂಹ ರಚನೆಗೆ ಸಹಾಯ ಒದಗಿಸಲಾಗುತ್ತಿದೆ. ಕ್ಯಾನ್ಸರ್‌ನಿಂದ ಮುಕ್ತಿ ಪಡೆದವರು ಮತ್ತು ಅವರ ಕುಟುಂಬದವರಿಗೆ ಸಂಪೂರ್ಣ ಆರೈಕೆಯನ್ನು ಒದಗಿಸುವ ಗುರಿ ಹೊಂದಿ ಸಮಗ್ರ ತಂಡದೊಂದಿಗೆ ಈ ಕ್ಲಿನಿಕ್‌ ಪ್ರತೀ ಬುಧವಾರ ಕಾರ್ಯಾಚರಿಸುತ್ತದೆ.

-ಡಾ| ಎಮಿನ್‌ ರಹಿಮಾನ್‌ ಅಸಿಸ್ಟೆಂಟ್‌ ಪ್ರೊಫೆಸರ್‌

-ಡಾ| ವಾಸುದೇವ ಭಟ್‌ ಕೆ. ಅಸೋಸಿಯೇಟ್‌ ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ಪೀಡಿಯಾಟ್ರಿಕ್‌ ಹೆಮಟಾಲಜಿ ಮತ್ತು ಆಂಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪೀಡಿಯಾಟ್ರಿಕ್‌ ಹೆಮಟಾಲಜಿ ಮತ್ತು ಆಂಕಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಾಹೆ, ಮಣಿಪಾಲ)

Advertisement

Udayavani is now on Telegram. Click here to join our channel and stay updated with the latest news.

Next