Advertisement

ನಿಮ್ಮ ಮಗು ಹೇಗಿದೆಯೋ ಹಾಗೆಯೇ ಸ್ವೀಕರಿಸಿ, ಪ್ರೀತಿಸಿರಿ: ಪೂರ್ಣಿಮಾ

10:57 AM Dec 08, 2018 | |

ಮೂಡುಬಿದಿರೆ: ಅಂಗವಿಕಲ ಮಗು ಹುಟ್ಟಿದೆಯಲ್ಲೋ ಎಂದು ಕೊರಗುತ್ತ, ಕೀಳರಿಮೆ ಬೆಳೆಸಿಕೊಳ್ಳುತ್ತ ಮಗುವನ್ನು ಉಪೇಕ್ಷಿಸಬೇಡಿ. ನಿಮ್ಮ ಮಗು ಹೇಗಿದೆಯೋ ಹಾಗೆಯೇ ಸ್ವೀಕರಿಸಿ, ಪ್ರೀತಿಸಿರಿ. ಮಗುವಿಗೆ ತಾಯಿ ತಂದೆ ಮೊದಲು ಬೆಂಗಾವಲಾಗಬೇಕು. ಇಂಥ ಧನಾತ್ಮಕ ಚಿಂತನೆ ಇದ್ದಾಗ ಮಗು ನಿಮ್ಮನ್ನು ಪ್ರೀತಿಸುತ್ತದೆ. ನಿಮ್ಮನ್ನು ಪರಿವಾರ, ಸಮಾಜ ಗೌರವಿಸುತ್ತದೆ ಎಂದು ಮಂಗಳೂರು ಶಕ್ತಿ ನಗರದ ಅರಿವು ವಿಶೇಷ ಮಕ್ಕಳ ತರಬೇತಿ ಕೇಂದ್ರದ ಮುಖ್ಯಸ್ಥೆ ಪೂರ್ಣಿಮಾ ಆರ್‌.ಕೆ. ಭಟ್‌ ಹೇಳಿದರು.

Advertisement

ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆಯ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ಶುಕ್ರವಾರ ಜರಗಿದ ಅಂತಾರಾಷ್ಟ್ರೀಯ ಅಂಗವಿಕಲರ ದಿನಾಚರಣೆ ಮತ್ತು ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಹಾಗೂ ಹೆತ್ತವರ ಸಮಾವೇಶದಲ್ಲಿ ಅವರು ತಮ್ಮ ಬದುಕಿನ ಅನುಭವಗಳನ್ನು ಹಂಚಿಕೊಂಡರು. ಉದ್ಯಮಿ ಹಸ್ದುಲ್ಲಾ ಇಸ್ಮಾಯಿಲ್‌ ಅಧ್ಯಕ್ಷತೆ ವಹಿಸಿದ್ದರು.

ಅಂಗವಿಕಲರಾಗಿದ್ದು ಆಳ್ವಾಸ್‌ನಲ್ಲಿ ಎಂಎಸ್‌ಡಬ್ಲ್ಯು ವಿದ್ಯಾರ್ಥಿ ನಿತ್ಯಾನಂದ ಕಾರ್ಕಳ ಮತ್ತು ಪದವಿ ವಿದ್ಯಾರ್ಥಿ ದೀಕ್ಷಿತ್‌ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಅತಿಥಿಗಳಾಗಿ, ದ.ಕ. ಜಿಲ್ಲಾ ಅಂಗವಿಕಲರ ಪುನರ್ವಸತಿ ಅಧಿಕಾರಿ ಪಿ.ವಿ. ಸುಬ್ರಮಣಿ, ಮೂಡುಬಿದಿರೆ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್‌. ನಾಗೇಶ್‌, ಆದರ್ಶದ ನಿರ್ದೇಶಕ ಜೇಕಬ್‌ ವರ್ಗೀಸ್‌ ಭಾಗವಹಿಸಿದ್ದರು. ಅಳಿಯೂರು ಪ್ರೌಢಶಾಲೆಯ ಅಂಗವಿಕಲವಿದ್ಯಾರ್ಥಿ ವರುಣ್‌ ಮಾತನಾಡಿ, ನಾವು ಅಂಗವಿಕಲರೆಂದು ವಕ್ರ ದೃಷ್ಟಿ ಬೀರದಿರಿ. ನಮಗೆ ಬೇಕಾದದ್ದು ಬರಿಯ ಅನುಕಂಪವಲ್ಲ, ಸಹಾಯ. ನಮಗೆ ಶಿಕ್ಷಣ ಬೇಕು, ಉದ್ಯೋಗ ಬೇಕು. ನಾವೂ ನಿಮ್ಮಂತೆಯೇ ಬಾಳಲು ಎಲ್ಲ ಅವಕಾಶಗಳನ್ನೂ ಕಲ್ಪಿಸಿಕೊಟ್ಟರೆ ಸಾಕು. ಹಲವಾರು ಮಂದಿ ಅಂಗವಿಕಲರು ಅಸಾಧ್ಯವೆನಿಸಿರುವುದನ್ನು ಸಾಧ್ಯ ಎಂದು ಸಾಧಿಸಿ ತೋರಿದ್ದಾರೆ. ನಾವು ನಿಮಗೆ ಹೊರೆಯಾಗದಂತೆ ಬಾಳ ಬಯಸುತ್ತೇವೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ
ಮೂಡುಬಿದಿರೆಯ ಸಮನ್ವಯ ಶಿಕ್ಷಣ ಕೇಂದ್ರ, ಆಳ್ವಾಸ್‌ ವಿಶೇಷ ಶಾಲೆ, ಸ್ಫೂರ್ತಿ ಭಿನ್ನ ಸಾಮರ್ಥ್ಯವುಳ್ಳ ಮಕ್ಕಳ ವಿಶೇಷ ಶಾಲೆ, ವಿಶೇಷ ಮಕ್ಕಳ ಹೆತ್ತವರ ವೇದಿಕೆ, ನವಚೇತನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ., ಕಾರ್ಕಳದ ಅರುಣೋದಯ ವಿಶೇಷ ಶಾಲೆ, ಚೇತನ ವಿಶೇಷ ಶಾಲೆ, ವಿಜೇತ ವಿಶೇಷ ವಸತಿ ಶಾಲೆ, ಮೂರುಕಾವೇರಿಯ ಮಾನವ ವಿಕಾಸ ಕೇಂದ್ರ, ಕಿನ್ನಿಗೋಳಿ ಸೈಂಟ್‌ ಮೇರಿಸ್‌ ವಿಶೇಷ ಶಾಲೆ, ವೇಣೂರಿನ ಕ್ರಿಸ್ತರಾಜ ನವಚೇತನ ವಿಶೇಷ ಶಾಲೆ ಈ ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದ್ದವು. ಅಂಗವಿಕಲ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿದವು. ಆಶಾಲತಾ ಮೂಡುಬಿದಿರೆ ಸ್ವಾಗತಿಸಿ, ಸಂಧ್ಯಾ ನಿರೂಪಿಸಿ, ಸಂಜೀವಿ ವಂದಿಸಿದರು.

ಉಡುಪು ಉಡುಗೊರೆ 
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಶಾಲಾ ಮುಖ್ಯಸ್ಥರ ಮೂಲಕ ಉಡುಪುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗವಿಕಲರು, ಹೆತ್ತವರು ಹಾಗೂ ಹಿತೈಷಿಗಳಿಂದ ಮೂಡುಬಿದಿರೆ ಮೈನ್‌ ಮತ್ತು ಥರ್ಡ್‌ ಶಾಲಾ ಸಹಕಾರದೊಂದಿಗೆ ‘ಅಂಗವಿಕಲರ ಕುರಿತಾದ ಜಾಗೃತಿ ಜಾಥಾ’ ಮೂಡುಬಿದಿರೆ ಥರ್ಡ್‌ ಶಾಲೆಯ ಬಳಿಯಿಂದ ಸಮಾಜ ಮಂದಿರದ ತನಕ ನಡೆಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next