Advertisement
ಇತ್ತೀಚೆಗೆ ಸ್ನೇಹಿತರೊಬ್ಬರು ಲೋಕಾಭಿರಾಮವಾಗಿ ಮಾತನಾಡುತ್ತಾ ತಾನು ಅನುಭವಿಸುತ್ತಿರುವ ಒಂದು ವೇದನೆಯನ್ನು ಹಂಚಿಕೊಂಡರು. ನನ್ನ ಮಗ ಶಾಲೆಯಿಂದ ಮನೆಗೆ ಬಂದ ಮೇಲೆ ನಮ್ಮ ಮಾತೇ ಕೇಳಲ್ಲ ಅಂತಾನೆ. ಎಷ್ಟು ಹೇಳಿದರೂ ಕೇಳ್ಳೋದಿಲ್ಲ, ಶಾಲೆಯಲ್ಲಿ ಹೋಮ್‌ವರ್ಕ್ ಕೊಟ್ಟರೂ ಅವನ ಬಳಿ ಅದನ್ನು ಮಾಡಿಸುವಷ್ಟರಲ್ಲಿ ಜೀವ ಬಾಯಿಗೆ ಬಂದಂತಿರುತ್ತದೆ ಮರಾಯೆÅ ಎಂದರು. ಹೌದು ಸರ್ ಈಗೆಲ್ಲಾ ಮಕ್ಕಳು ಸ್ವಲ್ಪ ಹಠ ಜಾಸ್ತಿ ಮಾಡ್ತಾರೆ ಎನ್ನುತ್ತಾ, ಅಂದ ಹಾಗೆ ನಿಮ್ಮ ಮಗ ಎಷ್ಟನೇ ಕ್ಲಾಸು ಎಂದು ಕೇಳಿದೆ. ಅವರು ಎಲ್‌ಕೆಜಿ ಅಂದರು. ಅಲ್ಲಿಗೆ ಅವರ ಸಮಸ್ಯೆಯ ಹಿಂದೆ ವಿಚಾರ ಮಾಡಲೇ ಬೇಕಾದ ಹಲವು ಸಂಗತಿಗಳಿವೆ ಎನ್ನಿಸಿತು.
Related Articles
Advertisement
ಮಕ್ಕಳಿಗೆ ಮನೆ ಎನ್ನುವುದು ಸಂತೋಷ ನೀಡುವ ತಾಣವಾಗಬೇಕೇ ಹೊರತು ಅದು ಜೈಲಿನಂತೆ ಅನ್ನಿಸಬಾರದು. ಕಲಿಕೆಯ ವಿಚಾರದಲ್ಲಿ ತೀವ್ರ ತೆರನಾದ ಒತ್ತಡವನ್ನು ಸಣ್ಣ ಮನಸುಗಳ ಮೇಲೆ ಹೇರುವುದು ಸರಿಯಲ್ಲ. ಹಾಗಾದರೆ ಮಕ್ಕಳು ಹೋಂವರ್ಕ್ ಮಾಡುವುದು ಬೇಡವೆ? ಖಂಡಿತಾ ಮಾಡಬೇಕು. ಆದರೆ ಅದಕ್ಕೆ ಮೊದಲು ಮಗುವಿಗೆ ಒಂದಷ್ಟು ಹೊತ್ತು ನಿರಾಳವಾಗಲು ಬಿಡಿ.
ಕಲಿಕೆಯ ಹೊರತಾಗಿಯೂ ಆನಂದ ಪಡುವಂತಹ ಸಂಗತಿಗಳಿವೆ ಎನ್ನುವುದನ್ನು ಮನದಟ್ಟು ಮಾಡಿ. ಟಿ.ವಿ, ಆಟಗಳ ಜೊತೆ ಜೊತೆಗೆ ಮಕ್ಕಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಅವರೊಂದಿಗೆ ಒಂದಷ್ಟು ಹೊತ್ತು ಚಂದಗೆ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಶಾಲೆಯಲ್ಲಿ, ದಾರಿಯಲ್ಲಿ ನಡೆದ ಘಟನೆಗಳ ಬಗ್ಗೆ ಹೇಳಲು ಹೇಳಿ. ಸಣ್ಣ ಸಣ್ಣ ಕತೆಗಳನ್ನು ಹೇಳಿ. ಅಡುಗೆ ಮಾಡುವ ಬಗೆ, ದೋಸೆ ಮಾಡುವ ರೀತಿ , ಬಟ್ಟೆ ಒಗೆಯುವ ಕ್ರಮ, ಸ್ವತ್ಛತೆಯ ಅಗತ್ಯ ಹೀಗೆ ದಿನನಿತ್ಯದ ಏನೋ ಒಂದು ವಿಚಾರವನ್ನು ಅದಕ್ಕೆ ಎಷ್ಟಾದರೂ ಅರ್ಥವಾಗಲಿ ಬಿಡಲಿ ಸುಮ್ಮನೆಯಾದರೂ ಇಂತಹ ವಿಚಾರಗಳ ಕುರಿತು ಮಾತನಾಡಿ.
ಧಾರಾವಾಹಿ, ಸಿನೆಮಾಗಳನ್ನು ಅಥವಾ ಮೊಬೈಲನ್ನು ನೀವು ನೋಡುತ್ತಾ ಮಗು ಮತ್ತು ಟಿವಿ ಎರಡೂ ಕಡೆ ಗಮನ ಕೊಡುತ್ತೇನೆ ಎನ್ನುವ ಭ್ರಮೆ ಬಿಟ್ಟುಬಿಡಿ. ಅದೆಷ್ಟೇ ಬಿಝಿ ಇದ್ದರೂ ಮಕ್ಕಳಿಗೆಂದೇ ವಿಶೇಷ ಸಮಯ ನೀಡಿ. ನಿಮ್ಮ ವರ್ತನೆ ಮಗುವಿನ ಬಗೆಗೆ ನೀವು ಸಂಪೂರ್ಣ ಕಾಳಜಿ ವಹಿಸುತ್ತೀರಿ ಅದರ ಬೇಕು ಬೇಡಗಳನ್ನು ವಿಚಾರಿಸುತ್ತೀರಿ, ಮಗುವನ್ನು ತುಂಬಾ ಪ್ರೀತಿಸುತ್ತೀರಿ ಎನ್ನುವ ವಿಚಾರ ಅದಕ್ಕೆ ಪಕ್ಕಾ ಮನವರಿಕೆಯಾಗುವಂತಿರಬೇಕು. ಹಾಗೆಂದು ಮಕ್ಕಳನ್ನು ತೀರಾ ಮುದ್ದಿಸಲು ಹೋಗಬೇಡಿ. ಅತೀ ಮುದ್ದು ಮಕ್ಕಳನ್ನು ಹಾಳು ಮಾಡುತ್ತದೆ. ಪ್ರೀತಿ ಮಕ್ಕಳನ್ನು ಬೆಳೆಸುತ್ತದೆ ಎನ್ನುವ ಮಾತು ನೆನಪಿರಲಿ.
ಅತೀ ಆಮಿಷಗಳನ್ನೊಡ್ಡಿ ಹೋಂವರ್ಕ್ ಮಾಡಿಸುವ ಕೆಲಸ ಆಗಬಾರದು. ಮಕ್ಕಳು ಸ್ವಲ್ಪ ಸಮಯ ಎಂಜಾಯ್ ಮಾಡಿದ ಬಳಿಕ ಅವರ ಮನಸ್ಸನ್ನು ಶಾಲೆಯ ಹೋಂವರ್ಕ್‌ನ ಕಡೆಗೆ ತಿರುಗಿಸಲು ಪ್ರಯತ್ನಿಸಿ, ಅದರ ಪ್ರಾಮುಖ್ಯತೆಯ ಬಗೆಗೆ ತಿಳಿ ಹೇಳಿ. ಮಕ್ಕಳನ್ನು ಕಲಿಕೆಯ ವಿಚಾರದಲ್ಲಿ ಅದೆಷ್ಟೇ ಹಿಂದುಳಿದಿದ್ದರೂ ನೀನು ಮನಸ್ಸು ಮನಸು ಮಾಡಿದರೆ ಬೇರೆಯವರಿಗಿಂತ ನೀನೇ ಚೆಂದಗೆ ಬರೆಯುತ್ತೀಯಾ. ನಿನ್ನ ಬಳಿ ಎಲ್ಲವೂ ಸಾಧ್ಯ ಎನ್ನುವಂತಹ ಮಾತುಗಳನ್ನಾಡಿ ಅದನ್ನು ಪ್ರೋತ್ಸಾಹಿಸಲು ಪ್ರಯತ್ನಿಸಿ.
ಕೆಲವೊಮ್ಮೆ ಶಾಲೆಯಲ್ಲಿ ನೀಡುತ್ತಿರುವ ಹೋಂವರ್ಕ್ ಹೆಚ್ಚಾಗುತ್ತಿದೆ ಅಂತನ್ನಿಸಿದರೆ ದಯವಿಟ್ಟು ಅದನ್ನು ಸಂಬಂಧಿಸಿದ ಶಿಕ್ಷಕರ ಗಮನಕ್ಕೆ ತನ್ನಿ. ನರ್ಸರಿ ಸೇರಿದಂತೆ ಒಂದು ಮತ್ತು ಎರಡನೇ ತರಗತಿಯ ಮಕ್ಕಳಿಗೆ ಹೋಂವರ್ಕ್ ನೀಡಬಾರದು ಎಂದು ಸರಕಾರದ ಆದೇಶವೇ ಇದೆ. ಒಟ್ಟಿನಲ್ಲಿ ಹೋಂವರ್ಕ್ ಎನ್ನುವುದು ಮಕ್ಕಳ ಪಾಲಿಗೆ ಒತ್ತಾಯದ ಹೇರಿಕೆಯಾಗ ದಿರುವಂತೆ ನೋಡಿಕೊಳ್ಳಿ. ಮಗು ಮನೆಯ ವಾತಾವರಣವನ್ನು ಸಂಭ್ರಮಿಸಲು ಬಿಡಿ. ಅದರೊಂದಿಗೆ ಒಂದಷ್ಟು ಹೋಂವರ್ಕ್ ಕೂಡ ಇರಲಿ.
– ನರೇಂದ್ರ. ಎಸ್. ಗಂಗೊಳ್ಳಿ