ಕಡಬ: ಕೃಷಿ ಸಂಸ್ಕೃತಿಯಿಂದ ಯುವ ಸಮುದಾಯ ದೂರ ಸರಿಯುತ್ತಿರುವ ಕಾಲಘಟ್ಟದಲ್ಲಿ ರಾಮಕುಂಜದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಶಾಲಾ ವಠಾರದಲ್ಲಿ ಸಾವಯವ ತರಕಾರಿ ತೋಟ ಮಾಡುವ ಮೂಲಕ ಕೃಷಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ. ಎರಡು ವರ್ಷಗಳಿಂದ ಇಲ್ಲಿ ಬೀಜ ಬಿತ್ತುವಲ್ಲಿಂದ ಫಸಲು ಕೊಯ್ಯುವ ತನಕ ಎಲ್ಲ ಕೆಲಸಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಿದ್ದಾರೆ.
ಮಧ್ಯಾಹ್ನದ ಬಿಸಿಯೂಟಕ್ಕೆ ತಾಜಾ ತರಕಾರಿ
ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಹುಟ್ಟೂರು ರಾಮಕುಂಜದಲ್ಲಿ ಅವರದೇ ಗೌರವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧೀನದಲ್ಲಿರುವ ಈ ಅನುದಾನಿತ ಪ್ರೌಢಶಾಲೆಯು ಸಂಸ್ಕಾರದೊಂದಿಗೆ ಶಿಕ್ಷಣ ಎನ್ನುವ ಧ್ಯೇಯದೊಂದಿಗೆ ಕಾರ್ಯಾಚರಿಸುತ್ತಿದೆ. ಸುಮಾರು 430 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸಂಸ್ಥೆಯಲ್ಲಿ ತಮ್ಮ ಮಧ್ಯಾಹ್ನದ ಉಚಿತ ಬಿಸಿಯೂಟಕ್ಕೆ ವಿದ್ಯಾರ್ಥಿಗಳೇ ತರಕಾರಿ ಬೆಳೆಯುತ್ತಿದ್ದಾರೆ.
ಅಡುಗೆಗೆ ತರಕಾರಿ ಕಡಿಮೆಯಾದರೆ ಮಾತ್ರ ಖರೀದಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಕೃಷಿಯತ್ತ ಒಲವು, ರೈತರ ಕಷ್ಟಗಳ ಬಗ್ಗೆ ಅರಿವು ಮೂಡಿಸುವುದು, ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ನಾಣ್ಣುಡಿಯನ್ನು ಅರ್ಥೈಸುವ ಉದ್ದೇಶ ಈ ಯೋಜನೆಯಲ್ಲಿ ಅಡಕವಾಗಿದೆ.
ಇಲ್ಲಿನ ಇನ್ನೊಂದು ವಿಶೇಷವೆಂದರೆ, ತರಕಾರಿ ಬೆಳೆಯನ್ನು ಸಾವಯವ ಗೊಬ್ಬರ ಬಳಸಿಯೇ ಮಾಡಲಾಗುತ್ತಿದೆ. ಅದಕ್ಕಾಗಿ ಶಾಲೆಗೆ ಹತ್ತಿರವಿರುವ ಮನೆಗಳಿಂದ ಬರುವ ವಿದ್ಯಾರ್ಥಿಗಳು ಮನೆಯಿಂದ ಸಗಣಿ ತರುವ ಯೋಜನೆ ರೂಪಿಸಲಾಗಿದೆ. ಕಟ್ಟಿಗೆಯಿಂದ ಸಿಗುವ ಬೂದಿಯನ್ನೂ ಬಳಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಅಲಸಂಡೆ, ಬೆಂಡೆ, ಬದನೆ ಹಾಗೂ ದೀವಿ ಹಲಸು ಬಳಕೆಗೆ ಸಿಗುತ್ತಿದ್ದು, ತೊಂಡೆ ಹಾಗೂ ಬಸಳೆ ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಸಿಗಲಿದೆ. ಶಾಲೆಯ 9ನೇ ತರಗತಿಯ ಕೃಷಿಯಲ್ಲಿ ಆಸಕ್ತಿ ಇರುವ ಆಯ್ದ 20 ವಿದ್ಯಾರ್ಥಿಗಳು ತರಕಾರಿ ತೋಟದ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಉಳಿದ ವಿದ್ಯಾರ್ಥಿಗಳೂ ಈ ಕೆಲಸದಲ್ಲಿ ಸಹಕರಿಸುತ್ತಾರೆ. ಮುಖ್ಯ ಶಿಕ್ಷಕ ಸತೀಶ್ ಭಟ್ ಅವರ ಮಾರ್ಗದರ್ಶನದಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ ರೈ ಹಾಗೂ ಶಿಕ್ಷಕಿ ಪುಷ್ಪಾವತಿ ತರಕಾರಿ ತೋಟದ ಕೆಲಸಗಳಿಗೆ ನೇತೃತ್ವ ನೀಡುತ್ತಿದ್ದಾರೆ.
ಇಸ್ರೇಲ್ ಕೃಷಿಯ ಆಸಕ್ತಿಸ್ವಾವಲಂಬಿಯಾಗಿ ಬದುಕಲು ಕೃಷಿ ಸಹಕಾರಿ. ರೈತರ ಪರಿಶ್ರಮ ಅರಿವಾಗ ಬೇಕಾದರೆ ಪ್ರತಿಯೊಬ್ಬರೂ ಸ್ವಲ್ಪ ಮಟ್ಟಿಗಾದರೂ ಕೃಷಿಯಲ್ಲಿ ತೊಡಗ ಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಕೃಷಿ ಕಾಯಕದ ಸ್ಫೂರ್ತಿ ತುಂಬುವ ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಸ್ರೇಲ್ ದೇಶದಲ್ಲಿ ಜನಪ್ರಿಯವಾಗಿರುವ ಕಡಿಮೆ ಮಣ್ಣು ಹಾಗೂ ನೀರನ್ನು ಬಳಕೆ ಮಾಡಿ ಬೆಳೆ ತೆಗೆಯುವ ವಿಶಿಷ್ಟ ಕೃಷಿ ಪದ್ಧತಿಯನ್ನು ನಮ್ಮ ಶಾಲೆಯ ತರಕಾರಿ ತೋಟದಲ್ಲಿಯೂ ಪ್ರಯೋಗ ನಡೆಸಬೇಕೆಂಬ ಉದ್ದೇಶವಿದೆ.
– ಸತೀಶ್ ಭಟ್, ಮುಖ್ಯ ಶಿಕ್ಷಕರು
ಜೀವನ ಶಿಕ್ಷಣತರಗತಿಯೊಳಗಿನ ಪಾಠದೊಂದಿಗೆ ಜೀವನ ಶಿಕ್ಷಣವೂ ಸಿಗುತ್ತಿದೆ. ಮಣ್ಣಿನೊಂದಿಗೆ ಕೆಲಸ ಮಾಡುವುದೇ ಖುಷಿ. ಅದರಲ್ಲಿಯೂ ತರಕಾರಿ ತೋಟದಲ್ಲಿ ನಾವು ಬೆಳೆಸಿದ ಗಿಡಬಳ್ಳಿಗಳು ಹೂವು ಬಿಟ್ಟು ಫಸಲು ಬಂದಾಗ ಸಿಗುವ ಸಂತೋಷವೇ ಬೇರೆ.
– ಶ್ರೀಕಾಂತ್ ಗೋಳಿತೊಟ್ಟು 9ನೇ ತರಗತಿ ವಿದ್ಯಾರ್ಥಿ
ನಾಗರಾಜ್ ಎನ್.ಕೆ.