Advertisement

ಗಡಿಗೆಯಲ್ಲಿ ಅಡುಗೆ ಮಾಡಿ ಸಂಭ್ರಮಿಸಿದ ಮಕ್ಕಳು

04:01 PM May 05, 2017 | |

ಕಲಬುರಗಿ: ಇಲ್ಲಿನ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಏ. 20ರಿಂದ ಕಲಬುರಗಿ ರಂಗಾಯಣ ಆರಂಭಗೊಳಿಸಿರುವ ಮಕ್ಕಳ ಬೇಸಿಗೆ ಶಿಬಿರ ಮಕ್ಕಳ ಸಮಗ್ರ ಸಾಂಸ್ಕೃತಿಕ ವಿಕಾಸಕ್ಕೆ ವೇದಿಕೆಯಾಗಿ ಪರಿಣಮಿಸಿದೆಯಲ್ಲದೆ, ಅವರ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿದೆ. 

Advertisement

ದಿನದಿಂದ ದಿನಕ್ಕೆ ಮಕ್ಕಳನ್ನು ಜವಾಬ್ದಾರಿಯುತರನ್ನಾಗಿ ತಯಾರು ಮಾಡುವುದಲ್ಲದೆ, ಮಾನಸಿಕ ವಿಕಾಸ, ಆರೋಗ್ಯ ತಿಳಿವಳಿಕೆ, ಪ್ರತಿಭೆಗಳಿಗೆ ಪೋಷಕವಾಗಿ ಶಿಬಿರ ಹೊರಹೊಮ್ಮುತ್ತಿದೆ. ತಿಂಗಳ ಕಾಲ ನಡೆಯುತ್ತಿರುವ ಶಿಬಿರದಲ್ಲಿ ಒಟ್ಟು 150 ಮಕ್ಕಳು ಪಾಲ್ಗೊಂಡಿದ್ದಾರೆ. 

ಆರಂಭದಲ್ಲಿ ಕೇವಲ 125 ಮಕ್ಕಳಿಗೆ ಅವಕಾಶ ನೀಡುವ ಗುರಿ ಹೊಂದಲಾಗಿತ್ತು. ಪಾಲಕರ ಒತ್ತಡ ಮತ್ತು ಮಕ್ಕಳ ಜ್ಞಾನದ ಹಸಿವು ನೋಡಿ ಇನ್ನು 25 ಮಕ್ಕಳನ್ನು ಹೆಚ್ಚಿಗೆ ಸೇರಿಸಿಕೊಳ್ಳಲಾಗಿದೆ ಎಂದು ಶಿಬಿರ ಸಂಚಾಲಕರು ಮಾಹಿತಿ ನೀಡಿದ್ದಾರೆ. 

ಹಾಡುಗಾರಿಕೆ, ವೇದಿಕೆ ಹಂಚಿಕೆ, ಡೊಳ್ಳು ಕುಣಿತ, ವೀರಗಾಸೆ, ಗುಡಿಸಿಲು ಸಹಜೀವನ, ಗೀಗೀ ಪದ, ಶಿಶು ಗೀತೆ, ರಂಗ ಗೀತೆ, ಚಿತ್ರಕಲೆ, ಪೇಪರ್‌ ಕಟಿಂಗ್‌, ಸಂಪ್ರದಾಯ ಹಾಡುಗಳು, ಯೋಗ, ಕಥೆ ರಚನೆ ಮಾಡುವುದು, ಜನಪದ ಹಾಡುಗಾರಿಕೆ ಮತ್ತು ಪ್ರಾತ್ಯಕ್ಷಿಕೆಗೆ ಶಿಬಿರದಲ್ಲಿ ಮಹತ್ವ ನೀಡಲಾಗಿದೆ.

ಇದರ ಫಲವಾಗಿ ಗಡಿಗೆಯಲ್ಲಿ ಅಡುಗೆ ಎನ್ನುವ ವಿನೂತನ ಕ್ರಮದ ಮೂಲಕ ಅದರ ರುಚಿ, ಪ್ರಯೋಜನ ತಿಳಿಸಿ ಹೇಳಲಾಯಿತು. ಗುರುವಾರ ಆರೋಗ್ಯ ಇಲಾಖೆ ನಿವೃತ್ತ ಆಧಿಕಾರಿ ಲಕ್ಷ್ಮಣ ಕಡಬೂರು, ಮಕ್ಕಳಿಗೆ ಯಾವ ಆಹಾರ ಸೇವಿಸಬೇಕು.

Advertisement

ಹೇಗೆ ಜೀವನ ಕ್ರಮ ರೂಢಿಸಿಕೊಳ್ಳಬೇಕು. ಎಂಥ ಆಹಾರ ಪಥ್ಯ ಮಾಡಬೇಕು. ಯಾವ ಆಹಾರ ಎಷ್ಟು ಬಾರಿ, ಯಾವ ಸಮಯದಲ್ಲಿ ಉಣ್ಣಬೇಕು ಎಲ್ಲವನ್ನು ತಿಳಿ ಹೇಳಿದ್ದಾರೆ ಎನ್ನುತ್ತಾರೆ ರಂಗಾ ಯಣದ ಪ್ರಭಾರಿ ಆಡಳಿತಾಧಿಕಾರಿ ದತ್ತಪ್ಪ ಸಾಗನೂರು, ಶಿಬಿರದ ಸಂಚಾಲಕ ಸಂದೀಪ. 

ನಾಲ್ಕು ಗುಂಪು: ಒಟ್ಟು 150 ಮಕ್ಕಳನ್ನು ನಾಲ್ಕು ಮೈನಾ, ಪಾರಿವಾಳ, ಗಿಳಿ ಮತ್ತು ಕೋಗಿಲೆ ಗುಂಪುಗಳಾಗಿ ವಿಂಗಡಿಸಲಾಗಿದೆ. ಇವರೆಲ್ಲರಿಗೂ ರಂಗಾಯಣದ ಕಲಾವಿದರಾದ ವಿಜಯಕುಮಾರ ದೊಡ್ಡಮನಿ, ಸಾಜೀದ್‌, ಬೈರವ (ಭೀಮಣ್ಣ), ಕಲ್ಯಾಣಿ ಭಜಂತ್ರಿ ಹಾಗೂ ರಂಗಾಯಣದ ಇನ್ನೂ ಆರು ಕಲಾವಿದರ, ಸ್ಥಳೀಯ ಮೂರುಕ್ಕೂ ಹೆಚ್ಚು ಕಲಾವಿದರ ಗುಂಪುಗಳು ಉಸ್ತುವಾರಿ ಹೊಣೆ ಹೊತ್ತಿವೆ.

ಶ್ಲಾಘನೆ: ನನ್ನ ಮಗ ನಾಚುತ್ತಿದ್ದ. ಓದಿನಲ್ಲಿ ಮುಂದಿದ್ದನಾದರೂ, ಟಿವಿ ನೋಡುವ ಹುಳುವಾಗಿದ್ದ. ಅವನನ್ನು ಕೌಟುಂಬಿಕ ವಾತಾವರಣಕ್ಕೆ ತರಬೇಕಿತ್ತು. ಆ ಕೆಲಸವನ್ನು ರಂಗಾಯಣ ಮಾಡಿದೆ ಎಂದು ಪಾಲಕರಾದ ಶ್ರೀದೇವಿ ಶಿವಣ್ಣಗೌಡರ ಬೇಸಿಗೆ ಶಿಬಿರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

* ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next