ಬಾಗಲಕೋಟೆ: ಶಿಕ್ಷಣದಿಂದ ವಂಚಿತರಾಗಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗ್ರಾಮವಾರು ಗುರುತಿಸಲು ನ. 17ರಿಂದ 28ರವರೆಗೆ ಸಮೀಕ್ಷೆ ಆರಂಭವಾಗಲಿದೆ. ಶಿಕ್ಷಣಾಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಆಸಕ್ತಿಯಿಂದ ಕಾರ್ಯನಿರ್ವಹಿಸುವಂತೆ ಡಿಸಿ ಕೆ.ಜಿ. ಶಾಂತಾರಾಂ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಹಮ್ಮಿಕೊಂಡಿದ್ದ 6ರಿಂದ 16 ವಯೋಮಾನದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷಾ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 1315 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಅಂಥ ಮಕ್ಕಳ ಪತ್ತೆ ಹಚ್ಚಲು ಶಿಕ್ಷಣ ಇಲಾಖೆಯ ಎಲ್ಲ ಸಿಬ್ಬಂದಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಶಿಕ್ಷಣ ಇಲಾಖೆಯ ಎಲ್ಲ ಶಿಕ್ಷಕರು ಪಿಡಿಒಗಳು, ಆಶಾ-ಅಂಗನವಾಡಿ ಕಾರ್ಯಕರ್ತೆಯರು ತಂಡ ರಚಿಸಿಕೊಂಡು ಮನೆ ಮನೆ ಭೇಟಿ ನೀಡಿ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಬೇಕು ಎಂದು ತಿಳಿಸಿದರು.
ತಲಾ 50 ಮನೆಗೊಂದು ಒಬ್ಬ ಶಿಕ್ಷಕರಂತೆ ನಿಗದಿಗೊಳಿಸಿ ಪ್ರತಿ ಮನೆಗೆ ಭೇಟಿ ನೀಡಿ ವಿವರ ಪಡೆಯಬೇಕು. ಸಮೀಕ್ಷೆ ಮುಗಿದ ತಕ್ಷಣ ಆಯಾ ಮನೆಗೆ ಸ್ಟಿಕರ್ ಅಂಟಿಸತಕ್ಕದ್ದು. ಮನೆಗಳ ಪಟ್ಟಿಯನ್ನು ಪಿಡಿಒಗಳಿಂದ ಪಡೆದು ಸಮೀಕ್ಷೆ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು. ಒಂದು ಗ್ರಾಪಂಗೆ ಹೈಸ್ಕೂಲ ಶಿಕ್ಷಕರನ್ನು ಸೂಪರ್ ವೈಜರ್ ಆಗಿ, ಹೋಬಳಿವಾರು ಬಿಆರ್‌ಸಿಗಳು ಕೋಆರ್ಡಿನೇಟರ್ ಹಾಗೂ ಬಿಇಒಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ವಾಟ್ಸ್ ಅಪ್ ಗ್ರುಪ್ ಮಾಡಬೇಕು. ಗ್ರಾಪಂ ಸುಪರ್ ವೈಜರ್‌ಗಳು ಒಟ್ಟು ಮನೆಗಳ ಶೇ. 10ರಷ್ಟು ಮನೆಗಳಿಗೆ ಕಡ್ಡಾಯವಾಗಿ ಹಾಗೂ ಹೋಬಳಿ ನೋಡಲ್ ಅಧಿಕಾರಿಗಳು ಶೇ. 2ರಷ್ಟು ಮನೆಗಳಿಗೆ ತಪ್ಪದೇ ಭೇಟಿ ನೀಡಿ ಸಮೀಕ್ಷೆಯಾಗಿರುವ ಬಗ್ಗೆ ಖಚಿತಪಡಿಸಬಹುದು ಎಂದರು.
ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ, ಗ್ರಾಮ ಸಭೆಗಳಲ್ಲಿ ಈ ಅಂಶ ಪ್ರಮುಖ ಆದ್ಯತೆಯಾಗಿ ಚರ್ಚಿಸುವಂತೆ ಸೂಚಿಸಿದರು. ಶಾಲೆಯಿಂದ ಹೊರಗುಳಿದ ಪ್ರತಿ ಮಗುವಿನ ವಿವರ, ತಂದೆ-ತಾಯಿ ವಿವರ ಹಾಗೂ ಭಾವಚಿತ್ರವನ್ನು ನಮೂನೆಯಲ್ಲಿ ಭರಿಸತಕ್ಕದು ಎಂದು ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್. ಕಾಮಾಕ್ಷಿ ಮಾತನಾಡಿ, ಬಾದಾಮಿಯಲ್ಲಿ 219, ಬಾಗಲಕೋಟೆಯಲ್ಲಿ 80, ಬೀಳಗಿಯಲ್ಲಿ 71, ಹುನಗುಂದದಲ್ಲಿ 261, ಜಮಖಂಡಿಯಲ್ಲಿ 261, ಮುಧೋಳದಲ್ಲಿ 268 ಮಕ್ಕಳು ಶಾಲೆಯಿಂದ ಹೊರಗುಳಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರಚಾರದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.