ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ದಾಖಲಾದ ಮಕ್ಕಳಿಗೆ ಕಾನೂನು ಬಾಹಿರವಾಗಿ ವರ್ಗಾವಣೆ ಪತ್ರ ನೀಡಿರುವ ಖಾಸಗಿ ಶಾಲೆಯ ಕ್ರಮ ಖಂಡಿಸಿ ಹಾಗೂ ಸಂಬಂಧಪಟ್ಟ ಶಾಲೆಯ ಮಾನ್ಯತೆ ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ವಿದ್ಯಾರ್ಥಿ ಪೋಷಕರ ಜಾಗೃತಿ ವೇದಿಕೆಯಿಂದ ನಗರದ ನೃಪತುಂಗ ರಸ್ತೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸುಂಕದಕಟ್ಟೆಯ ಹೆಗ್ಗನಹಳ್ಳಿಯ ಕಿರಣ್ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಲಕ್ಷ್ಮಣ್ ನಗರದ ಶ್ರೀಕೃಷ್ಣ ಅಂತಾರಾಷ್ಟ್ರೀಯ ಶಾಲೆ, ವಿದ್ಯಾನಿಕೇತನ ಪ್ರಾಥಮಿಕ ಹಾಗೂ ಪ್ರೌಢಶಾಲೆ, ನ್ಯೂ ಕಾರ್ಮೆಲ್ ಪ್ರೌಢಶಾಲೆ ಹಾಗೂ ಅಪೋಲೋ ಪ್ರಾಥಮಿಕ ಮತ್ತು ಪ್ರೌಢಧಿಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಮಾಡುತ್ತಿರುವ ಅನ್ಯಾಯ ಖಂಡಿಸಿ ಸೋಮವಾರ ಬೆಳಗ್ಗೆ ವೇದಿಕೆಯ ಕಾರ್ಯಕರ್ತರ ಜತೆಗೆ ವಿದ್ಯಾರ್ಥಿಗಳು, ಪಾಲಕರು ಸೇರಿಕೊಂಡು ಬೃಹತ್ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳು ರಸ್ತೆಯ ಮಧ್ಯದಲ್ಲಿ ಮಲಗಿ ವಿನೂತನವಾಗಿ ಪ್ರತಿಭಟನೆ ನಡೆಸಿದರೆ, ವೇದಿಕೆಯ ಕಾರ್ಯಕರ್ತನೊಬ್ಬ ಶಿಕ್ಷಣ ಇಲಾಖೆಯ ಆವರಣದ ಬೃಹತ್ ಮರ ಏರಿ, ನಮ್ಮ ಬೇಡಿಕೆಯನ್ನು ಈ ಕೂಡಲೇ ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವೇದಿಧಿಕೆಯ ಅಧ್ಯಕ್ಷ ರವಿ, ಅಪೋಲೋ ಶಾಲೆಯ ಆಡಳಿತ ಮಂಡಳಿ ಕಾನೂನು ಬಾಹಿರವಾಗಿ ಮೂರು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡಿದೆ. ಹಾಗೆಯೇ ಕೆಲವೊಂದು ಖಾಸಗಿ ಶಾಲೆಯಲ್ಲಿ ಬೇಕಾಬಿಟ್ಟಿ ಶುಲ್ಕ ನಿಗದಿ ಮಾಡುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಹಾಗೂ ಸಂಬಂಧಪಟ್ಟ ಸಚಿವರಿಗೂ ಮನವಿ ಸಲ್ಲಿಸಿದ್ದೇವೆ, ಇಷ್ಟಾದರೂ, ಯಾವುದೇ ಪ್ರಯೋಜನ ಆಗದೇ ಇದ್ದಾಗ ಮಕ್ಕಳ ಭವಿಷ್ಯಕ್ಕಾಗಿ ಬೀದಿಗೆ ಇಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.
ಬೇಡಿಕೆ ಈಡೇರಿಸುವ ಭರವಸೆ: ಪ್ರತಿಭಟನೆಯ ತೀವ್ರತೆ ಹೆಚ್ಚುತ್ತಿದ್ದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಡಾ. ಸೌಜನ್ಯ ಅವರು ವೇದಿಕೆ ಕೆಲವು ಸದಸ್ಯರನ್ನು ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರ ಸಭೆ ಕರೆದರು. ಸುಂಕದಕಟ್ಟೆಯ ಹೆಗ್ಗನಹಳ್ಳಿ ಅಪೋಲೋ ಪಬ್ಲಿಕ್ ಶಾಲೆಯಲ್ಲಿ ಮೂರು ವಿದ್ಯಾರ್ಥಿಗಳಿಗೆ ಕಾನೂನು ಬಾಹಿರವಾಗಿ ವರ್ಗಾವಣೆ ಪ್ರಮಾಣ ಪತ್ರ ನೀಡಿರುವುದನ್ನು ಹಿಂದಕ್ಕೆ ಪಡೆಯಬೇಕು. ಆ ಮೂರು ವಿದ್ಯಾರ್ಥಿಗಳಿಗೂ ಪುನರ್ ಪ್ರವೇಶ ಕಲ್ಪಿಸಿ, ಯಾವುದೇ ಸಮಸ್ಯೆ ನೀಡಬಾರದು ಎಂದು ಸೂಚಿಸಿದರು.
ಡೇರಾ ನಿಯಮದಂತೆ ಶುಲ್ಕ ಪಡೆಯಬೇಕು. ಡೇರಾ ರೂಪಿಸಿಕೊಟ್ಟಿರುವ ಶುಲ್ಕ ಪಟ್ಟಿ ಹೊರತುಪಡಿಸಿ, ಆಡಳಿತ ಮಂಡಳಿಯೇ ರಚಿಸಿದ ಶುಲ್ಕ ಪಟ್ಟಿಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನ ಮಾಡಬಾರದು. ಆರ್‌ಟಿಇ ಮಕ್ಕಳ ಪ್ರವೇಶ ನಿರಾಕರಿಸುವುದು ಶಿಕ್ಷಾರ್ಹ ಅಪರಾಧ ಎಂಬ ಎಚ್ಚರಿಕೆ ಆಡಳಿತ ಮಂಡಳಿಗೆ ನೀಡಿದರು. ನ್ಯಾಯಯುತ ಬೇಡಿಕೆ ಈಡೇರಿಸುವ ಭರವಸೆಯನ್ನು ಆಯುಕ್ತರು ನೀಡಿದ ನಂತರ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದರು.ವೇದಿಕೆಯ ಸುರೇಶ್, ಅಣ್ಣೇಗೌಡ, ವೆಂಕಟಗೌಡ, ಮಕ್ಕಳ ಪಾಲಕರಾದ ಶ್ರೀನಿವಾಸ್, ಮಂಜುನಾಥ್ ಮೊದಲಾದವರು ಪ್ರತಿಭಟನೆಯಲ್ಲಿದ್ದರು.