ಬೆಂಗಳೂರು: ಮಕ್ಕಳನ್ನು ಪಠ್ಯ ವಿಷಯಗಳಿಗೆ ಸೀಮಿತವಾಗಿ ಕಟ್ಟಿಹಾಕುವ ಪ್ರವೃತ್ತಿ ಅಪಾಯಕಾರಿ ಎಂದು ಚುಟುಕು ಸಾಹಿತಿ ಎಚ್.ಡುಂಡಿರಾಜ್ ಕಳವಳ ವ್ಯಕ್ತಪಡಿಸಿದ್ದಾರೆ.
ವಾಡಿಯಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅನುಪಮಾ ಮಂಗಳವೇಢೆ ಅವರ ಚೊಚ್ಚಲ ಕೃತಿ “ಅನುಪಮ ಕಥನ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಹಿಂದೆ ಪೋಷಕರು ತಮ್ಮ ಮಕ್ಕಳು ಸರ್ ಎಂ.ವಿಶ್ವೇಶ್ವರಯ್ಯ, ಎ.ಪಿ.ಜೆ.ಅಬ್ದುಲ್ ಕಲಾಂ ರೀತಿ ಬೆಳೆಯಬೇಕು ಎಂದು ಆಶಿಸುತ್ತಿದ್ದರು.
ಆದರೆ, ಇಂದು ಆ ಪರಿಸ್ಥಿತಿ ಇಲ್ಲ. ಪಠ್ಯಬಿಟ್ಟು ಬೇರೆ ಕಲಿಕೆಗೆ ಪ್ರೋತ್ಸಾಹ ನೀಡುತ್ತಿಲ್ಲ. ಬರೀ ಡಾಕ್ಟರ್, ಎಂಜಿನಿಯರ್ ಮಾಡಿಸುವುದರಲ್ಲೇ ತಲ್ಲೀನರಾಗಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಈ ಮನೋಭಾವ ಒಳ್ಳೆಯದಲ್ಲ ಎಂದರು.
ಲೇಖಕಿ ಅನುಪಮಾ ಮಂಗಳವೇಢೆ ಅವರ ಬರವಣಿಗೆ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಡುಂಡಿರಾಜ್, ಚೊಚ್ಚಲ ಕೃತಿಯಲ್ಲೇ ಕೆಲವು ಭಿನ್ನ ವಿಷಯಗಳ ಮೇಲೆ ಲೇಖಕಿ ಬೆಳಕು ಚೆಲ್ಲಿದ್ದಾರೆ. ಅಲ್ಲದೆ, ಸಾಹಿತ್ಯ ಕ್ಷೇತ್ರದಲ್ಲಿ ಛಾಪು ಮೂಡಿಸುವ ಸುಳಿವು ನೀಡಿದ್ದಾರೆ ಎಂದರು.
ಕೃತಿ ಕುರಿತು ಮಾತನಾಡಿದ ನೃತ್ಯ ವಿದುಷಿ ಡಾ.ಬಿ.ಎನ್.ಮನೋರಮಾ, ಮಕ್ಕಳಾದ ನಂತರ ಅನುಪಮಾ ಅವರು ಭರತನಾಟ್ಯ ಕಲಿತು, ಆ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ನಮಗೆ ಮಾದರಿ. ನೃತ್ಯ ಕ್ಷೇತ್ರದ ಜತೆಗೆ ಇದೀಗ ಅವರು ಲೇಖಕಿಯಾಗಿ ಸಾಹಿತ್ಯ ಲೋಕ ಪ್ರವೇಶಿಸಿದ್ದು, ಅವರ ನೂತನ ಕೃತಿ ನೃತ್ಯ ಕಲಾವಿದರಿಗೆ ಕೈಗನ್ನಡಿಯಾಗಲಿದೆ ಎಂದರು.
ಹುಬ್ಬಳ್ಳಿ ಸಾಹಿತ್ಯ ಪ್ರಕಾಶನದ ಎಂ.ಎ.ಸುಬ್ರಹ್ಮಣ್ಯ, ಲೇಖಕಿ ಅನುಪಮಾ ಹಾಗೂ ಬರಹಗಾರ ಶ್ರೀವತ್ಸ ಜೋಶಿ ಉಪಸ್ಥಿತರಿದ್ದರು.