Advertisement

ಪಾಶ್ಚಾತ್ಯ ಆಹಾರ ಪದ್ಧತಿಗಳಿಂದ ಮಕ್ಕಳನ್ನು ರಕ್ಷಿಸಬೇಕು: ಸುಮಿತ್ರಾ

01:06 PM Jul 31, 2019 | Suhan S |

ಮುಂಬಯಿ, ಜು. 30: ಬದಲಾದ ಗ್ರಾಮೀಣ ಬದುಕಿನಲ್ಲಿ ಕೆಸರುಡುಗೊಬ್ಬು ಎಂಬ ಕಾರ್ಯಕ್ರಮವನ್ನು ಆಚರಿಸುವ ಬದಲು ಆಟಿ ತಿಂಗಳಿನಲ್ಲಿ ಪಾಳುಬಿದ್ದಂತಹ ಕೃಷಿ ಗದ್ದೆಯಲ್ಲಿ ಮತ್ತೆ ಬೇಸಾಯವನ್ನು ಪುನರುಜ್ಜೀವನಗೊಳಿಸಿ ಆ ಮೂಲಕ ನಶಿಸಿ ಹೋಗುತ್ತಿರುವ ಸಂಪದ್ಭರಿತ ಕೃಷಿ ಲೋಕಕ್ಕೆ ಕಾಯಕಲ್ಪ ನೀಡುವ ಕಾರ್ಯ ಇಂದಿನ ಜನಾಂಗದಿಂದ ಆಗಬೇಕಾಗಿದೆ. ಇಂತಹ ಸಂಪನ್ಮೂಲ ಕಾರ್ಯಕ್ರಮಗಳಿಂದ ಆಟಿ ತಿಂಗಳ ಬೇಸಾಯ ಚಟುವಟಿಕೆಗೆ ಮಹತ್ವ ಬರುವುದರ ಜತೆಗೆ ಗ್ರಾಮೀಣ ಜನರ ಬದುಕು, ಧರ್ಮ, ಶ್ರದ್ಧೆ ಅಚಾರ ವಿಚಾರವನ್ನು ಅರ್ಥೈಸಲು ಸಾಧ್ಯ ಎಂದು ರಜಕ ಸಂಘ ಮುಂಬಯಿ ಇದರ ಗೌರವ ಕಾರ್ಯದರ್ಶಿ ಸುಮಿತ್ರಾ ರಮೇಶ್‌ ಪಲಿಮಾರು ಆಶಯ ವ್ಯಕ್ತಪಡಿಸಿದರು.

Advertisement

ಜು. 28ರಂದು ಬಿಲ್ಲವರ ಅಸೋಸಿಯೇಶನ್‌ ಬೊರಿವಲಿ-ದಹಿಸರ್‌ ಸ್ಥಳೀಯ ಕಚೇರಿ ಸಿಂಫೋಲಿ-ಗೋರೈರೋಡ್‌, ಬಿಎಂಸಿ ಗ್ಯಾರೇಜ್‌ನ ಎದುಗಡೆಯ ಸ್ಥಳೀಯ ಕಚೇರಿಯ ಗುರು ಸನ್ನಿಧಿಯಲ್ಲಿ ಜರಗಿದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪಾಶ್ಚಾತ್ಯ ಸಂಸ್ಕೃತಿಯ ಆಹಾರಗಳಿಗೆ ಮಾರು ಹೋಗಿರುವ ಮಕ್ಕಳನ್ನು ಮುಕ್ತಗೊಳಿಸಿ ಮನೆ ಊಟವನ್ನು ಅಭ್ಯಸಿಸುವ ಕರ್ತವ್ಯ ತಾಯಂದಿರದು. ಜತೆಗೆ ಊರಿನ ಸಂಸ್ಕಾರ, ಸಂಸ್ಕೃತಿ, ದೈವ ದೇವರನ್ನು ಪರಿಚಯಿಸುವ ಕೆಲಸ ನಮ್ಮಿಂದ ಆಗಬೇಕು ಎಂದು ನುಡಿದರು.

ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿಮಾತನಾಡಿದ ಕವಿ, ಲೇಖಕ ಶಿಮಂತೂರು ಚಂದ್ರಹಾಸ ಸುವರ್ಣ ಆಟಿ ತಿಂಗಳ ಆಚರಣೆಯು ಇಂದು ಪೈಪೋಟಿಯತ್ತ ಸಾಗುತ್ತಿದ್ದು, ಅಚ‌ರಣೆಗಳು ವೈಜ್ಞಾನಿಕ ಮಹತ್ವ ಕಳೆದುಕೊಳ್ಳುತ್ತಿದೆ. ಮಹಾನಗರದಲ್ಲಿ ಈ ಕಾರ್ಯಕ್ರಮವನ್ನು ಪ್ರಥಮ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆ ನಮ್ಮ ಸಮಿತಿಯದ್ದಾಗಿದ್ದು ಅದು ಇಂದಿಗೂ ಗ್ರಾಮೀಣ ಹಿನ್ನೆಲೆಯಲ್ಲಿ ಜರಗುತ್ತಿರುವುದು ವಿಶೇಷವಾಗಿದೆ. ಆಟಿ ತಿಂಗಳಲ್ಲಿ ದೈವದೇವರ ಪ್ರಾರ್ಥನೆ ನಿರ್ಬಂಧವಾಗಿದ್ದು ಅತಿಯಾದ ಮಳೆಯಿಂದಾಗಿ ಶುಭ ಕಾರ್ಯಗಳಿಗೆ ಅವಕಾಶ ಸಿಗದ ಕಾರಣ ಈ ತಿಂಗಳು ಕಷ್ಟದ ತಿಂಗಳೆಂದೇ ಪರಿಗಣಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿಯ ವಿಶೇಷ ಸಹಕಾರ, ಜತೆಗೆ ಪರಿಸರದ ಸರ್ವ ತುಳುವರಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಮಿತಿಯ ವಿಶೇಷತೆ ಯಾಗಿದೆ ಎಂದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಅತಿಥಿಯಾಗಿ ಆಗಮಿಸಿದ ಸುಮಿತ್ರಾ ರಮೇಶ್‌ ಪಲಿಮಾರು ಗೆಜ್ಜೆತ್ತಿಯ ಮೂಲಕ ಪಿಂಗಾರವನ್ನು ಅರಳಿಸಿ ತುಳುನಾಡಿನ ವೈವಿಧ್ಯ ಫಲಭರಿತ ಗೆರಸೆಯಲ್ಲಿ ಇಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ಸದಸ್ಯರು ಪ್ರಾರ್ಥನೆ ಹಾಡಿದರು. ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ ಬಿ ಅಮೀನ್‌ ಸ್ವಾಗತಿಸಿದರು. ಸಮಿತಿಯ ವತಿಯಿಂದ ಅತಿಥಿ ಗಣ್ಯರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಧನಸಹಾಯ ಹಾಗೂ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಜಿ. ಎಂ. ಕೋಟ್ಯಾನ್‌ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ನೂತನ ವಧು, ವರ ಹರ್ಷಿದ್‌ ಪಾಲನ್‌ ದಂಪತಿ ಮತ್ತು ಅಸೋಸಿಯೇಶನ್‌ನ ಮಾಜಿ ಯುವ ಅಭ್ಯುದಯದ ಕಾರ್ಯಾಧ್ಯಕ್ಷ ನೀಲೇಶ್‌ ಪೂಜಾರಿ ಪಲಿಮಾರು ದಂಪತಿಗಳನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಭಾರತ ಕೋ ಆಪರೇಟಿವ್‌ ಬ್ಯಾಂಕಿನ ನಿರ್ದೇಶಕರಾದ ಪ್ರೇಮನಾಥ ಪಿ. ಕೋಟ್ಯಾನ್‌, ಕೇಂದ್ರ ಕಚೇರಿಯ ಮಹಿಳಾ ವಿಭಾಗದ ಕುಸುಮಾ ಅಮೀನ್‌ ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಶೇಖರ್‌ ಎ. ಅಮೀನ್‌ ಕಾರ್ಯಕ್ರಮವನ್ನು ನಿರ್ವಹಿಸಿ, ಅತಿಥಿ ಪರಿಚಯಿಸಿ ಧನ್ಯವಾದವಿತ್ತರು. ಅನಂತರ ಮಹಿಳೆಯರು ತಯಾರಿಸಿದ ವಿವಿಧ ಖಾದ್ಯಗಳನ್ನು ಪರಿಚಯಿಸಿದರು.

Advertisement

ಉಪಕಾರ್ಯಾಧ್ಯಕ್ಷರಾದ ಶ್ರೀಧರ ವಿ. ಬಂಗೇರ, ರಜಿತ್‌ ಎಲ್. ಸುವರ್ಣ, ಜತೆ ಕಾರ್ಯದರ್ಶಿ ವತ್ಸಲಾ ಕೆ. ಪೂಜಾರಿ, ಜತೆ ಕೋಶಾಧಿಕಾರಿ ಎ. ವಿ. ಸುವರ್ಣ, ಆರ್‌. ಎಸ್‌. ಕೋಟ್ಯಾನ್‌, ರಾಘು ಜಿ. ಪೂಜಾರಿ, ಕೇಶರಂಜನ್‌ ಮುಲ್ಕಿ, ಜಯರಾಮ ಯು. ಪೂಜಾರಿ, ದಿನೇಶ್‌ ಸುವರ್ಣ ಮತ್ತು ಆಹ್ವಾನಿತ ಸದಸ್ಯರು, ಮಹಿಳಾ ಸದಸ್ಯರು ಹಾಗೂ ಯುವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿದರು. ಕೇಂದ್ರ ಕಚೇರಿಯ ಮಾಜಿ ಗೌರವ ಕಾರ್ಯದರ್ಶಿ ಧರ್ಮಪಾಲ ಬಿ. ಅಂಚನ್‌ ಹಾಗೂ ಹಾಲಿ ಜತೆ ಕಾರ್ಯದರ್ಶಿ ಕೇಶವ ಕೋಟ್ಯಾನ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಚಿತ್ರ-ವರದಿ: ರಮೇಶ್‌ ಉದ್ಯಾವರ್‌

Advertisement

Udayavani is now on Telegram. Click here to join our channel and stay updated with the latest news.

Next