ಮೈಸೂರು: ಹತ್ತಾರು ಮಳಿಗೆಗಳು, ಒಂದೆಡೆ ವ್ಯಾಪಾರ ವಹಿವಾಟು, ಮತ್ತೂಂದೆಡೆ ಕೊಡು ಕೊಳ್ಳುವಿಕೆಗಾಗಿ ಚೌಕಾಸಿ… ಕೊನೆಯಲ್ಲಿ ಉಳಿಸಿದ್ದೆಷ್ಟು, ಗಳಿಸಿದ್ದೆಷ್ಟು ಎಂಬ ಲೆಕ್ಕಾಚಾರ. ಜೊತೆಗೆ ದೇಶದ ಆರ್ಥಿಕ ಸುಭದ್ರತೆಗಾಗಿ ತೆರಿಗೆ ಪಾವತಿಸುವ ಜವಾಬ್ದಾರಿಯ ಅರಿವು… ಯಾವುದೋ ಹೋಟೆಲ್‌ಗಳಿಗೆ ಇಲ್ಲವೇ ಮಳಿಗೆಗಳಿಗೆ ಪೋಷಕರೊಂದಿಗೆ ತೆರಳಿ ಫುಡ್ ಆರ್ಡರ್ ಮಾಡಿ ತಿಂದು ಬರುತ್ತಿದ್ದ ಮಕ್ಕಳು ಇಲ್ಲಿ ವ್ಯಾಪಾರಸ್ಥರಾಗಿದ್ದರು.
ಪೋಷಕರು ಗ್ರಾಹಕರಾಗಿದ್ದರು…. ಮೈಸೂರಿನ ಕನಕದಾಸ ನಗರದ ಕೌಟಿಲ್ಯ ವಿದ್ಯಾಲಯ ಆವರಣದಲ್ಲಿ ಶನಿವಾರ ನಡೆದ ಜಾಗತಿಕ ಹಬ್ಬ ದಲ್ಲಿ ಮಕ್ಕಳು ನಡೆಸಿದ ವಾಣಿಜ್ಯ ವಿಹಾರದ ಸಡಗರ – ಸಂಭ್ರಮದ ಪರಿ ಇದು. ಜಾಗತಿಕ ಹಬ್ಬ ಎಂಬ ಪರಿಕಲ್ಪನೆಯಲ್ಲಿ ಮಕ್ಕಳಿಗೆ ಕಲಿಕೆಯ ಜೊತೆ ಜೊತೆಯಲ್ಲಿ ಔದ್ಯೋಗಿಕ ಅರಿವು ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ವಾಣಿಜ್ಯ ವಿಹಾರ ಕಾರ್ಯಕ್ರಮದಲ್ಲಿ ಶಾಲೆಯ 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ಪಾಲ್ಗೊಂಡು,
ತಾವೇ ತಯಾರಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಮೂಲಕ ಉದ್ಯಮ ನಡೆಸುವ ಅನುಭವ ಪಡೆದರು. ಶಾಲೆಯ ಆವರಣದಲ್ಲಿ ನಿರ್ಮಿಸಿದ್ದ ಸುಮಾರು 25 ಮಳಿಗೆಗಳಲ್ಲಿ ದೇಶದ ವಿವಿಧ ರಾಜ್ಯಗಳ ಆಹಾರ ಪಾದಾರ್ಥಗಳು ಜೊತೆಗೆ ಪಾಶ್ಚಿಮಾತ್ಯ ರಾಷ್ಟ್ರಗಳ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲಾಯಿತು. ಸಾರ್ವಜನಿಕರು ಹಾಗೂ ಪೋಷಕರು ಗ್ರಾಹಕರಾಗಿ ಮಕ್ಕಳಿಂದ ತಿಂಡಿ ತಿನಿಸುಗಳನ್ನು ಖರೀದಿಸಿ ಸವಿದು ಸಂಭ್ರಮಿಸಿದರು.
ದೇಶದಲ್ಲಿ ಇಂದು ಆರ್ಥಿಕ ಸ್ಥಿತಿಗತಿ, ಜಿಎಸ್‌ಟಿಯ ಸಾಧಕ ಬಾಧಕ ಹಾಗೂ ಜಿಡಿಪಿ ಬಗ್ಗೆ ಚರ್ಚೆ ನಡೆಯುತ್ತಿರುವ ಇವತ್ತಿನ ಸಂದರ್ಭದಲ್ಲಿ ಉದ್ಯಮ ರಂಗದ ಪಾತ್ರ, ಒಬ್ಬ ಉದ್ಯಮಿಯಾಗಿ ಆದಾಯ ತೆರಿಗೆ ಪಾವತಿಸುವ ಜವಾಬ್ದಾರಿಯ ಅರಿವನ್ನು ಮಕ್ಕಳಿಗೆ ನೀಡಲಾಯಿತು. ಮಕ್ಕಳು ಭವಿಷ್ಯದಲ್ಲಿ ಸಂಬಳದ ಶಿಕ್ಷಣಕ್ಕೆ ಅವಲಂಬಿತರಾಗದೆ ತಾವೂ ಕೂಡಾ ಉದ್ಯಮಿಗಳಾಗುವುದು, ಒಂದಷ್ಟು ಜನರಿಗೆ ಕೆಲಸ ನೀಡಿ ನಿರುದ್ಯೋಗ ಸಮಸ್ಯೆ ನಿವಾರಿಸುವುದು.
ಆ ಮೂಲಕ ದೇಶಕ್ಕೆ ಉತ್ಪನ್ನಗಳನ್ನು ತಯಾರು ಮಾಡಿ ದೇಶದ ಔದ್ಯೋಗಿಕ ಕ್ಷೇತ್ರವನ್ನು ಬಲಿಷ್ಠಗೊಳಿಸುವ ಬಗ್ಗೆ ಅರಿವು ಮೂಡಿಸಲಾಯಿತು. ಡಿಡಿಪಿಐ ಪಾಂಡುರಂಗ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಮುಖ್ಯಸ್ಥರಾದ ಆರ್.ರಘು (ಕೌಟಿಲ್ಯ) ಮಾತನಾಡಿದರು. ಶಾಲೆಯ ಉಪ ಪ್ರಾಂಶುಪಾಲೆ ರಾಧಿಕಾ, ಶಿಕ್ಷಕರು ಹಾಗೂ ಮಕ್ಕಳ ಪೋಷಕರು ಪಾಲ್ಗೊಂಡಿದ್ದರು.