ಗುಂಡ್ಲುಪೇಟೆ: ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ದೇಶಿಪುರ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕೆಎಸ್‌ಆರ್‌ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ದೇಶಿಪುರ ಗ್ರಾಮದಲ್ಲಿ ಕೆಎಸ್ ಆರ್‌ಟಿಸಿ ಬಸ್ ಅಡ್ಡಗಟ್ಟಿ ರಸ್ತೆ ಮಧ್ಯೆ ಕಲ್ಲುಗಳನ್ನಿಟ್ಟು ಡಿಪೋ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ, ಕೊರೊನಾ ಹಿಂದೆ ಬರುತ್ತಿದ್ದತೆ ಸಮರ್ಪಕವಾಗಿ ಬಸ್ ಕಲ್ಪಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು, ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಸಮರ್ಪಕವಾಗಿ ಬಸ್ ಇಲ್ಲ. ಬೆಳಗ್ಗೆ 8 ಗಂಟೆಗೆ ಗ್ರಾಮಕ್ಕೆ ಬಸ್ ಬರುತ್ತಿರುವ ಕಾರಣ ಆ ವೇಳೆ ವಿದ್ಯಾರ್ಥಿಗಳು ಹೋಗಲು ಆಗುತ್ತಿಲ್ಲ. ನಂತರ 10 ಗಂಟೆಗೆ ಬಸ್ ಇರುವುದರಿಂದ ಆ ಸಂದರ್ಭವೂ ಸರಿಯಾದ ಸಮಯಕ್ಕೆ ಶಾಲೆ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಜೊತೆಗೆ ಗ್ರಾಮಸ್ಥರಿಗೂ ಸಮಸ್ಯೆ ಹೆಚ್ಚಿದೆ.
ಅನೇಕ ಸಂದರ್ಭದಲ್ಲಿ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಆಕ್ರೋಶ ಹೊರಹಾಕಿದರು. ಕೊರೊನಾಕ್ಕಿಂತ ಮುಂಚೆ ನಿಗದಿತ ಸಂದರ್ಭಕ್ಕೆ ಬಸ್ ವ್ಯವಸ್ಥೆ ಇತ್ತು. ನಂತರ ಅವುಗಳನ್ನು ನಿಲ್ಲಿಸಲಾಯಿತು. ಕೊರೊನಾ ಹೋಗಿ ಜನ ಜೀವನ ಯಥಾಸ್ಥಿಗೆ ಬಂದರೂ ಸಹ ಕೆಎಸ್‌ಆರ್ ಟಿಸಿ ವತಿಯಿಂದ ಸೂಕ್ತ ರೀತಿಯಲ್ಲಿ ಬಸ್ ಬಿಟ್ಟಿಲ್ಲ. ಇದರಿಂದ ತೊಂದರೆ ಹೆಚ್ಚಿನ ರೀತಿಯಲ್ಲಿ ಉತ್ಪತ್ತಿಯಾಗಿದೆ. ಆದ್ದರಿಂದ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಮಾಹಿತಿ ಅರಿತ ಬೇಗೂರು ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಧೂಳಶೆಟ್ಟಿ ಭೇಟಿ ನೀಡಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಮನವೊಲಿಸುವ ಪ್ರಯತ್ನ ಮಾಡಿದರು. ನಂತರ ಸ್ಥಳಕ್ಕಾಗಮಿಸಿ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರು, ದೇಶಿಪುರ ಗ್ರಾಮಕ್ಕೆ ಸೂಕ್ತ ಸಮಯಕ್ಕೆ ಬಸ್ ಬಿಡುವುದಾಗಿ ಭರವಸೆ ನೀಡಿದರು.
ನಂತರ ಪ್ರತಿಭಟನೆ ಕೈಬಿಡಲಾಯಿತು. ಗ್ರಾಮಸ್ಥರಾದ ದ್ಯಾವಪ್ಪ, ದೊಡ್ಡಪ್ಪ, ಮಣಿಕಂಠ, ನಾಗರಾಜು, ಮಹೇಶ್, ರವಿ, ಗಿರೀಶ್, ರವಿ ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇತರರು ಇದ್ದರು.