ಲಕ್ಷ್ಮೇ ಶ್ವರ: ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ 2019-20ನೇ ಸಾಲಿನ ಶಾಲಾ ಸಂಸತ್ ಕಾರ್ಯಕ್ರಮ ನಡೆಯಿತು.
ಉದ್ಘಾಟಿಸಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಬಸವರಾಜ ನೆಲವಿಗಿ ಅವರು, ಭಾರತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ರಾಷ್ಟ್ರದಲ್ಲಿ ಸಂಸತ್ತಿನ ಕಾರ್ಯವೈಖರಿಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಈ ಬಗ್ಗೆ ಜ್ಞಾನ ನೀಡುವ ಮೂಲಕ ಅವರಿಗೆ ಹಕ್ಕು ಕರ್ತವ್ಯಗಳ ಬಗ್ಗೆ ಪ್ರಜ್ಞೆ ಮೂಡಿಸಬೇಕು ಎಂದರು.
ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಶಿಸ್ತು, ಸಂಯಮ, ಸಾಮಾಜಿಕ ಪ್ರಜ್ಞೆ ಮತ್ತು ನಾಯಕತ್ವ ಗುಣ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ನಡೆ-ನುಡಿಗಳಿಂದ ದೇಶದ ಸತøಜೆಯಾಗಬೇಕು. ಶಾಲಾ ಸಂಸತ್ತಿಗೆ ಆಯ್ಕೆಯಾದ ಮಕ್ಕಳು ಪ್ರಮಾಣ ವಚನದ ಆಶಯದಂತೆ ನಡೆದುಕೊಳ್ಳಬೇಕು. ಶಿಕ್ಷಕರು ಸಹ ತಮ್ಮ ಕಾರ್ಯದೆಡೆಗೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಪತ್ರಕರ್ತ ರಮೇಶ ನಾಡಿಗೇರ ಮಾತನಾಡಿ, ವಿವಿಧತೆಯಲ್ಲಿ ಏಕತೆ ಸಾಧಿಸಿದ ದೇಶ ಭಾರತ. ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರೂ ಜಾತಿ, ಮತ, ಭೇದ ಮರೆತು ಸಹೋದರತ್ವ ಮತ್ತು ಸೌಹಾರ್ಧತೆಯಿಂದ ಬದುಕಬೇಕು. ಗುರು-ಹಿರಿಯರಿಗೆ, ತಂದೆ-ತಾಯಿಗಳಿಗೆ ವಿಧೇಯರಾಗಿ ನಡೆದುಕೊಳ್ಳಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬಸನಗೌಡ ಉಳ್ಳಟ್ಟಿ, ಪಾರ್ವತಿ ನಾಗಸಮುದ್ರ, ನಿರ್ದೇಶಕಿ ಡಾ.ರೇವತಿ ನೆಲವಿಗಿ, ಸಚಿನ ಗಾಯಕವಾಡ, ಮುಖ್ಯೋಪಾಧ್ಯಾಯ ಕೆ.ಎಸ್. ಕೋಷ್ಠಿ, ಕ್ಷಮಾ ಮುಂಜಿ, ಶಿಕ್ಷಕ ವೃಂದ ಸೇರಿ ಇತರರಿದ್ದರು.