ಮೈಸೂರು: ಇಂದಿನ ಮಕ್ಕಳಿಗೆ ಇತಿಹಾಸದ ಸಂಪೂರ್ಣ ಅರಿವು ಮೂಡಿಸುವ ಮೂಲಕ ದೇಶಾಭಿಮಾನ ಹೆಚ್ಚಿಸುವ ಅಗತ್ಯವಿದೆ ಎಂದು ಮೈಸೂರು ಉಪ ವಿಭಾಗಾಧಿಕಾರಿ ವೆಂಕಟರಾಜು ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಚನ್ನಮ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹಾಳಾಗಿರುವ ಕಿತ್ತೂರು ಕೋಟೆ: 2006ರಲ್ಲಿ ತಾನು ವಿಶೇಷ ತಹಶೀಲ್ದಾರ್ ಆಗಿ ನೇಮಕಗೊಂಡಾಗ ಕಿತ್ತೂರನ್ನು ಆಯ್ಕೆ ಮಾಡಿಕೊಂಡೆ. ಕಿತ್ತೂರಿಗೆ ನೇಮಕಗೊಂಡು ಹೋದಾಗ ಮೊದಲಿಗೆ ಕಿತ್ತೂರಿನ ಕೋಟೆಗೆ ಭೇಟಿ ನೀಡಿದರೆ, ಅದರ ಸಂರಕ್ಷಣೆ ಮಾಡದೆ ಹಾಳಾಗಿ ಅವನತಿಯತ್ತ ಸಾಗಿತ್ತು. ಚನ್ನಮ್ಮನ ಕೋಟೆಯ ತೊಲೆಗಳು ಊರಿನ ದೇಸಾಯಿಗಳ ಮನೆಗಳ ತೊಲೆಗಳಾಗಿದ್ದವು. ಇನ್ನು ಸಂಗೊಳ್ಳಿ ರಾಯಣ್ಣನ ಮನೆಯ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.
ಅದು ಕೂಡ ಹಾಳಾಗಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಉತ್ತರ ಭಾರತದವರ ಹೋರಾಟವೇ ಹೆಚ್ಚು ಬಿಂಬಿತವಾಗಿದೆ. ದಕ್ಷಿಣ ಭಾರತದ ಸ್ವಾತಂತ್ರ್ಯ ಚಳವಳಿಗಾರರಲ್ಲಿ ಕೆಲವೇ ಕೆಲವರನ್ನು ಇತಿಹಾಸದಲ್ಲಿ ದಾಖಲಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸುತ್ತೇವೆ. ಆದರೆ, ಇತಿಹಾಸವನ್ನು ತಿಳಿಸಲ್ಲ. ಮಕ್ಕಳಿಗೆ ಇತಿಹಾಸ ತಿಳಿಸಿದರೆ ಅವರಲ್ಲಿ ದೇಶಾಭಿಮಾನ ಅಚ್ಚಳಿಯದೆ ಉಳಿಯುತ್ತದೆ ಎಂದು ಹೇಳಿದರು.
ಚನ್ನಮ್ಮ ಪ್ರಮುಖ ಹೋರಾಟಗಾರ್ತಿ: ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಅನೇಕ ಮಹನೀಯರ ತ್ಯಾಗ-ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರಷ್ಟೇ ಪ್ರಧಾನರಾಗಿ ಮಹಿಳೆಯರೂ ಹೋರಾಡಿದ್ದಾರೆ. ಅವರಲ್ಲಿ ಕಿತ್ತೂರು ಚನ್ನಮ್ಮ ಪ್ರಮುಖರು. ಇಂದಿನ ಪೀಳಿಗೆಗೆ ಕಿತ್ತೂರು ಚನ್ನಮ್ಮ ಆದರ್ಶವಾಗಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ ಮಾತನಾಡಿ, ರಾಜ್ಯದಲ್ಲಿ ಮಳೆಯಿಂದ ಹಲವಾರು ಜಿಲ್ಲೆಗಳು ಪ್ರವಾಹ ಪರಿಸ್ಥಿತಿ ಎದುರಿಸಿವೆ. ಮೈಸೂರು ಜಿಲ್ಲೆ ಕೂಡ ಪ್ರವಾಹಕ್ಕೆ ಸಿಲುಕಿದ್ದರಿಂದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿ ಉಳಿದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಪೂರ್ವ ಸಿದ್ಧತೆ ಸಭೆಯಲ್ಲಿ ತೀರ್ಮಾನಿಸಲಾಗಿರುವುದರಿಂದ ವೇದಿಕೆ ಕಾರ್ಯಕ್ರಮವಿಲ್ಲದೆ, ಚನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಕನ್ನಡಪರ ಹೋರಾಟಗಾರರಾದ ತಾಯೂರು ವಿಠ್ಠಲಮೂರ್ತಿ,ಮೂಗೂರು ನಂಜುಂಡಸ್ವಾಮಿ, ಬಿ.ಎ.ಶಿವಶಂಕರ್, ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಸಮಿತಿಯ ಕಾನ್ಯ ಶಿವಮೂರ್ತಿ, ಗಿರೀಶ್, ವಿರೂಪಾಕ್ಷ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.