Advertisement

ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಅನುಕಂಪದ ಬದಲು ಪ್ರೀತಿ ಅಗತ್ಯ: ಶಕುಂತಳಾ

02:34 PM Feb 24, 2017 | Team Udayavani |

ಕಡಬ: ಮರ್ದಾಳದ ಬೆಥನಿ ಜೀವನ್‌ ಜ್ಯೋತಿ ವಿಶೇಷ ಶಾಲೆಯ ವಾರ್ಷಿಕೋತ್ಸವ, ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ಕ್ಷೇತ್ರ ಸಂದರ್ಶಿಸುವ ಪಾದಯಾತ್ರಿಗಳಿಗೆ ಸ್ವಾಗತ ಕಾರ್ಯಕ್ರಮವು ಬುಧವಾರ ಸಂಜೆ ಜರಗಿತು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ, ರಾಜ್ಯ ಸರಕಾರದ ಸಂಸದೀಯ ಕಾರ್ಯ ದರ್ಶಿ ಶಕುಂತಳಾ ಟಿ. ಶೆಟ್ಟಿ ಅವರು ಮಾತನಾಡಿ, ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಅನುಕಂಪದ ಅಗತ್ಯವಿಲ್ಲ. ಬದಲಾಗಿ ಅವರನ್ನು ಇತರ ಮಕ್ಕಳಂತೆಯೇ ಪ್ರೀತಿಯಿಂದ ಸಲಹುವ ಅಗತ್ಯವಿದೆ. ಬೆಥನಿ ಸಂಸ್ಥೆ ಮಾಡುತ್ತಿರುವ ಈ ಪುಣ್ಯದ ಕೆಲಸಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದರು.  ಸಾಮಾಜಿಕ ಕಾರ್ಯಕರ್ತ, ಕಾಂಗ್ರೆಸ್‌ ಮುಂದಾಳು  ಜಿ. ಕೃಷ್ಣಪ್ಪ ಮಾತನಾಡಿ, ಆರೋಗ್ಯ ಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ  ಕ್ರೈಸ್ತ ಸಂಸ್ಥೆಗಳ ಕೊಡುಗೆ ಅಪೂರ್ವವಾದುದು. ಭಿನ್ನ ಸಾಮರ್ಥಯದ ಮಕ್ಕಳಿಗಾಗಿ ವಿಶೇಷ ಶಾಲೆ  ನಡೆಸುತ್ತಿರುವ ಬೆಥನಿ ಸಂಸ್ಥೆಯ ಕಾರ್ಯ ಶ್ಲಾಘನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಪುತ್ತೂರು ಧರ್ಮಪ್ರಾಂತ್ಯದ ಆಡಳಿತಾಧಿ ಕಾರಿ ವಂ| ಡಾ| ಜಾರ್ಜ್‌ ಕಾಲಾಯಿಲ್‌ ಮಾತನಾಡಿ, ಸಮಾಜದಲ್ಲಿ ಇಂದು ನಾನು ಮತ್ತು ನನ್ನದು ಎನ್ನುವ ಮನೋಭಾವದ ಪರಿಣಾಮವಾಗಿ ಅಶಾಂತಿ ತಾಂಡವಾಡುತ್ತಿದೆ ಎಂದರು. 

ಸ್ವಾರ್ಥ ಮನೋಭಾವವನ್ನು ತ್ಯಜಿಸಿ ಸರ್ವರಿಗೂ ಒಳಿತನ್ನು ಬಯಸುವ ಜೀವನ ಶೈಲಿಯನ್ನು ನಾವು ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗಲು ಸಾಧ್ಯ ಎಂದರು. 

ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ಮಾತನಾಡಿ, ಶಾಲೆಗೆ ಸರಕಾರದಿಂದ ಸಿಗಬಹುದಾದ ನೆರವನ್ನು ಕೊಡಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆಯಿತ್ತರು. 

Advertisement

ಮರ್ದಾಳ ಗ್ರಾ.ಪಂ.ಅಧ್ಯಕ್ಷೆ ಲಲಿತಾ, ಶನಿವಾರಸಂತೆಯ ಶ್ರೀ ಮಂಜುನಾಥ ಪಾದಯಾತ್ರಿ ಟ್ರಸ್ಟ್‌ನ ಮುಂದಾಳು ಸಿ.ವಿ.ಜಯಪ್ಪ ಅವರು ಅತಿಥಿಗಳಾಗಿದ್ದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುದರ್ಶನ ಗೌಡ ಕೋಡಿಂಬಾಳ ಉಪಸ್ಥಿತರಿದ್ದರು. ಪಾದಯಾತ್ರಿ ಟ್ರಸ್ಟ್‌ನ ವತಿಯಿಂದ ಶಾಲೆಗೆ ದೇಣಿಗೆ ಹಸ್ತಾಂತರಿಸಲಾಯಿತು.

ಬೆಥನಿ ವಿದ್ಯಾಸಂಸ್ಥೆಗಳ ಸಂಚಾಲಕ ವಂ| ಸತ್ಯನ್‌ ತೋಮಸ್‌ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಶೈಲಾ ಪಿ.ಜೆ. ವರದಿ ಮಂಡಿಸಿದರು. ಯೋಗ ಶಿಕ್ಷಕ ವಿಜೇಶ್‌ ಬಿಳಿನೆಲೆ ನಿರೂಪಿಸಿ, ಶಾಲಾ ನಿರ್ದೇಶಕ ವಂ| ಆ್ಯಂಟನಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ ಅವರು ಕ್ರೀಡಾ ಸಾಧಕರ ಪಟ್ಟಿ ವಾಚಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಕೊಡಗು ಜಿಲ್ಲೆಯ ಶನಿವಾರಸಂತೆಯ ಶ್ರೀ ಮಂಜುನಾಥ ಪಾದಯಾತ್ರಿ ಟ್ರಸ್ಟ್‌ ಇದರ‌ ಮುಂದಾಳು ಸಿ.ವಿ. ಜಯಪ್ಪ ಅವರ ನೇತೃತ್ವದಲ್ಲಿ ಆಗಮಿಸಿದ ಪಾದಯಾತ್ರಿಗಳನ್ನು  ಆದರದಿಂದ ಸ್ವಾಗತಿಸಲಾಯಿತು.

ಕ್ರೀಡಾ ಕ್ಷೇತ್ರದಲ್ಲಿ  ವಿಶೇಷ ಸಾಧನೆಗೈದ ಶಾಲಾ ವಿದ್ಯಾರ್ಥಿಗಳಾದ ರೆಬೇಕಾ, ಮಹೇಶ್‌ ಕೆರೆಮುದೇಲು, ಮಂಜುನಾಥ ಕೆರೆಮುದೇಲು, ದಿವ್ಯಾ, ರೋಷನ್‌, ಸಜಿನಾ, ಅಜಯ್‌ ಹಾಗೂ ಸಾಧನ್‌ ಅವರನ್ನು ಅತಿಥಿಗಳು ಸಮ್ಮಾನಿಸಿ ಗೌರವಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರಿಗೆ ಬಹುಮಾನ ವಿತರಿಸಲಾಯಿತು.

ಶಿವ ಭಕ್ತರಿಗೆ ಕ್ರೈಸ್ತ ಶಾಲೆ ವಸತಿ
ಶಿವರಾತ್ರಿಯ ವೇಳೆಗೆ ಧರ್ಮಸ್ಥಳ ಕ್ಷೇತ್ರದ ಮಂಜುನಾಥ ಸ್ವಾಮಿಯ ದರ್ಶನಕ್ಕೆಂದು ಪಾದಯಾತ್ರೆಯ ಮೂಲಕ ಆಗಮಿಸುತ್ತಿರುವ ಶಿವ ಭಕ್ತರಿಗೆ ಕಳೆದ 4 ವರ್ಷಗಳಿಂದ ಕ್ರೈಸ್ತ ಧರ್ಮಗುರುಗಳ ಆಡಳಿತದಲ್ಲಿರುವ ಮರ್ದಾಳದ  ಬೆಥನಿ ಶಾಲೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸುತ್ತಿರುವುದು ಜನರು ಧರ್ಮದ ಹೆಸರಿನಲ್ಲಿ ಕಚ್ಚಾಡು ತ್ತಿರುವ ಇಂದಿನ ಕಾಲಘಟ್ಟದಲ್ಲಿ ಭಾವೈಕ್ಯದ ಪ್ರತೀಕವಾಗಿ ಎಲ್ಲರ ಗಮನ ಸೆಳೆಯುತ್ತಿದೆ.  ಈ ವರ್ಷವೂ ವಾರ್ಷಿ ಕೋತ್ಸವದ ಸಂದರ್ಭದಲ್ಲಿ  ಕೊಡಗು ಜಿಲ್ಲೆಯ ಶನಿವಾರಸಂತೆಯ ಶ್ರೀ ಮಂಜುನಾಥ ಪಾದಯಾತ್ರಿ ಟ್ರಸ್ಟ್‌ನಮುಂದಾಳು ಸಿ.ವಿ.ಜಯಪ್ಪ ಅವರ ನೇತೃತ್ವದಲ್ಲಿ ಪಾದಯಾತ್ರೆಯ ಮೂಲಕ ಆಗಮಿಸಿದ ಸುಮಾರು 120 ಮಂದಿ ಪಾದಯಾತ್ರಿಗಳಿಗೆ ಶಾಲೆಯ ಬಳಿ ವಿಶೇಷ ಸ್ವಾಗತ ಕೋರಲಾಯಿತು. ವಾರ್ಷಿಕೋತ್ಸವಲ್ಲಿ ಪಾದಯಾತ್ರಿಗಳು ರಾತ್ರಿ ಶಾಲೆಯಲ್ಲಿ  ತಂಗಿ ಗುರುವಾರ ಮುಂಜಾನೆ ಧರ್ಮಸ್ಥಳದತ್ತ ಸಾಗಿದರು.

Advertisement

Udayavani is now on Telegram. Click here to join our channel and stay updated with the latest news.

Next