ತುಮಕೂರು: ಮಕ್ಕಳಿಗೆ ಕಾನೂನು ಅರಿವು ಅಗತ್ಯ. ಇದರಿಂದ ಉತ್ತಮ ಸಮಾಜಕ್ಕೆ ನಿರ್ಮಾಣ ಸಾಧ್ಯ ಎಂದು ಡೀಸಿ ಡಾ. ಕೆ. ರಾಕೇಶ್‌ಕುಮಾರ್ ತಿಳಿಸಿದರು.
ನಗರದ ಎಂಪ್ರಸ್ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೆ.ಎಸ್.ಆರ್.ಪಿ. 12ನೇ ಪಡೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಕಾನೂನು ಪಾಲನೆ, ಶಿಸ್ತು, ನಾಗರಿಕ ಜವಾಬ್ದಾರಿ ಹಾಗೂ ನಾಯಕತ್ವದ ಗುಣ ಬೆಳೆಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗಾಗಿ ಪೊಲೀಸ್ ಕೆಡೆಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಇಂದಿನ ಯುವ ಪೀಳಿಗೆಯಲ್ಲಿ ಶಿಸ್ತು, ಸಹನೆ, ರಾಷ್ಟ್ರ ಗೌರವ ಕಡಿಮೆಯಾಗುತ್ತಿದೆ. ಪ್ರಜ್ಞಾವಂತ ನಾಗರಿಕ ಸಮಾಜ ರೂಪಿಸುವುದಕ್ಕೆ ಪೊಲೀಸ್ ಕೆಡೆಟ್ ಕಾರ್ಯಕ್ರಮ ಪೂರಕವಾಗಿದ್ದು, ಶಾಲಾ ಮಟ್ಟದಲ್ಲೇ ಶಿಸ್ತು ಕಲಿಯಲು ಈ ಕಾರ್ಯ ಕ್ರಮ ಅನುವು ಮಾಡಿಕೊಡುತ್ತದೆ. ಪ್ರಜ್ಞಾವಂತ ನಾಗರಿಕರಿರುವ ದೇಶ ಸದಾ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದರು.
ಸಾಧನೆಗೆ ಪ್ರೇರಣೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನಂ ವಂಶಿಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಬಾರಿ 2 ಶಾಲೆಗಳನ್ನು ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿತ್ತು. ಈ ಬಾರಿ 10 ಶಾಲೆಗಳಲ್ಲಿ ಕಾರ್ಯಕ್ರಮವನ್ನು ವಿಸ್ತರಿಸ ಲಾಗಿದೆ. ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ತಂಡದ ಕೆಲಸ, ನವೀನ ಚಿಂತನೆ, ಪರಿಹಾರ ಸಾಮರ್ಥ್ಯ, ಕೌಶಲ್ಯ ವೃದ್ಧಿಯಾಗುವುದಲ್ಲದೆ ಯಾವುದೇ ಮಹತ್ತರ ಸಾಧನೆಯನ್ನು ಸಾಧಿಸಲು ಪ್ರೇರಣೆ ದೊರೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಾತ್ಯಾತೀತ ದೃಷ್ಟಿಕೋನ ಅಭಿವೃದ್ಧಿಪಡಿಸಲು ಯುವಕರನ್ನು ಪ್ರೇರೇಪಿಸುವುದು, ಸಂವಿಧಾನದ ಮೂಲಭೂತ ಕರ್ತವ್ಯ ಪಾಲಿಸುವಂತೆ ಪ್ರೋತ್ಸಾಹಿಸುವುದಲ್ಲದೇ, ವಿದ್ಯಾರ್ಥಿ ಗಳನ್ನು ಭಾವನ್ಮಾತಕ, ಮಾನಸಿಕ, ದೈಹಿಕವಾಗಿ ಸದೃಢವಾಗುವಂತೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಜವಾಬ್ದಾರಿ ಮೂಡಿಸುವ ಗುರಿ: ಕೆಎಸ್‌ಪಿಎಸ್ ಕಮಾಂಡೆಂಟ್ ಸುಂದರ್‌ರಾಜು ಮಾತನಾಡಿ, ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮವು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ವಿದ್ಯಾರ್ಥಿ ಗಳಲ್ಲಿ ಜವಾಬ್ದಾರಿ ಮೂಡಿಸಿ, ಶಿಸ್ತು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣದ ಗುರಿ ಹೊಂದುವುದಕ್ಕೆ ಈ ಕಾರ್ಯಕ್ರಮ ಅನುಕೂಲ ವಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಪ್ರಥಮ ಬಾರಿಗೆ ಕೇರಳ ರಾಜ್ಯದಲ್ಲಿ ಏರ್ಪಡಿಸಲಾಗಿತ್ತು. ನಂತರ ಉಳಿದ ರಾಜ್ಯಗಳಲ್ಲಿಯೂ ಆರಂಭಿಸಿ ವಿದ್ಯಾರ್ಥಿಗಳು ನಿಟ್ನೇತಿಯಿಂದ ಸಮಾಜದಲ್ಲಿ ಜೀವನ ನಡೆಸುವ ಮನೋಸ್ಥೈರ್ಯ ಕಲಿಸಿ ಕೊಡುತ್ತದೆ ಎಂದು ತಿಳಿಸಿದರು. ಡಿಡಿಪಿಐಗಳಾದ ಎಂ.ಆರ್.ಕಾಮಾಕ್ಷಿ ಹಾಗೂ ಕೆ.ರವಿಶಂಕರ್ ರೆಡ್ಡಿ, ಡಿವೈಎಸ್‌ಪಿಗಳಾದ ತಿಪ್ಪೇಸ್ವಾಮಿ, ಪಟೇಲ್ ಹಾಗೂ ಯುವ ಕುಮಾರ್, ಎಂಪ್ರಸ್ ಕಾಲೇಜಿನ ಪ್ರಾಂಶುಪಾಲ ಸಿದ್ದಲಿಂಗಪ್ಪ, ಪದ್ಮಾವತಿ, ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.