ಚಿಕ್ಕಬಳ್ಳಾಪುರ: ಜಗತ್ತಿಗೆ ಮಾದರಿಯಾಗಿರುವ ದೇಶದ ಪ್ರಜಾಪ್ರಭುತ್ವದ ಬುನಾದಿಯನ್ನು ಬಲ ಪಡಿಸುವ ದಿಸೆಯಲ್ಲಿ ಶಾಲಾ, ಕಾಲೇಜು ಮಕ್ಕಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಅಭಿಪ್ರಾಯಪಟ್ಟರು.
ನಗರದ ಜಿಪಂ ಸಭಾಂಣಗದಲ್ಲಿ ಬುಧವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಗ್ರಾಮ್ ಸಂಘಟನೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ನಾವು ಅರ್ಪಿಸಿಕೊಂಡ ಸಂವಿಧಾನದ ಮೌಲ್ಯಗಳು ಎಂತಹದು, ಆ ಮೌಲ್ಯಗಳನ್ನು ಹೇಗೆ ಎತ್ತಿ ಹಿಡಿಯಬೇಕು ಎಂಬುದರ ಅವಲೋಕನೆ ಅಗತ್ಯವಾಗಿ ಆಗಬೇಕಿದೆ. ಮಕ್ಕಳಂತಹ ಶುದ್ಧ ಮನಸ್ಸಿನ ನಾಯಕರು ಇರುವ ಸಂಸತ್ ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದರು.
ಆರೋಗ್ಯ ಕ್ಷೀಣಿಸುತ್ತಿದೆ: ಮಕ್ಕಳ ಕಾರ್ಯಕ್ರಮಗಳಲ್ಲಿ ಮಕ್ಕಳ ಸಂಸತ್ ಶ್ರೇಷ್ಠವಾದದು. ಇಂದಿನ ದಿನಗಳಲ್ಲಿ ಸಮಾಜದಲ್ಲಿ ಹೆಚ್ಚು ಹೆಚ್ಚು ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗುತ್ತಿದೆ. ಆದರೆ ಗುಣಮಟ್ಟದ ಹಾಗೂ ಮಾನವೀಯ ಶಿಕ್ಷಣ ಸಿಗುವುದು ಕಡಿಮೆ ಆಗುತ್ತಿದೆ.
ಹಾಗೆಯೇ ಆಸ್ಪತ್ರೆಗಳು ಹೆಚ್ಚಾದಂತೆ ಜನರಿಗೆ ಆರೋಗ್ಯ ಕಡಿಮೆ ಆಗುತ್ತಿದೆ. ನ್ಯಾಯಾಲಯಗಳು, ಪೊಲೀಸ್ ಠಾಣೆಗಳು ಹೆಚ್ಚಾದರೂ ನ್ಯಾಯ ಸಿಗುವ ವ್ಯವಸ್ಥೆ ಕಡಿಮೆಯಾಗುತ್ತಿದೆ. ಇವೆಲ್ಲಕ್ಕೂ ಪರಿಹಾರ ಆಗಬೇಕಾದರೆ ಉತ್ತಮ ಆಡಳಿತ ಮತ್ತು ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗದ ಕ್ರಿಯಾಶೀಲ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ ಎಂದರು.
ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ: ಜಿಪಂ ಅಧ್ಯಕ್ಷ ಎಚ್.ವಿ.ಮಂಜುನಾಥ ಮಾತನಾಡಿ, ಮಕ್ಕಳಿಗೆ ಪ್ರಜಾಪ್ರಭುತ್ವದ ಆಧಾರವಾಗಿ ಪ್ರಶ್ನಿಸುವ ಮತ್ತು ಚರ್ಚಿಸುವ ವಾತಾವರಣವನ್ನು ಮಕ್ಕಳ ಸಂಸತ್ ನಿರ್ಮಾಣ ಮಾಡಿದೆ. ಪ್ರಜಾಪ್ರಭುತ್ವದ ಅರಿವು ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ದೊರೆಯುತ್ತಿರುವುದು ಶ್ಲಾಘನೀಯ. ಪ್ರಪಂಚದಲ್ಲಿಯೇ ಭಾರತದ ಪ್ರಜಾಪ್ರಭುತ್ವ ಶ್ರೇಷ್ಠವಾಗಿದ್ದು, ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದರಿಂದ ದೇಶದ ಪ್ರಜಾಪ್ರಭುತ್ವ ಇನ್ನಷ್ಟು ಬಲಗೊಳ್ಳಲು ಸಾಧ್ಯ ಎಂದರು.
ಗ್ರಾಮ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್.ಬಸವರಾಜ್ ಮಾತನಾಡಿ, ಮಕ್ಕಳ ಸಂಸತ್ ಕಾರ್ಯಕ್ರಮದ ಉದ್ದೇಶ ಮಕ್ಕಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪ ನೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೌಲ್ಯದ ಬಗ್ಗೆ ಜಾಗೃತಿ ಹಾಗೂ ಆಸಕ್ತಿ ಮೂಡಿಸುವುದು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ದೇವರಾಜ್, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ, ಸುಗಮ್ಯ ಶಿಕ್ಷ ಕಾರ್ಯ ಕ್ರಮದ ಮುಖ್ಯಸ್ಥೆ ಸಿ.ಆರ್.ಉಷಾ, ಕಾರ್ಯಕ್ರಮದ ಸಂಯೋಜಕರಾದ ಲಕ್ಷ್ಮೀಕಾಂತ್, ಜಿಲ್ಲಾ ಸಂಯೋ ಜಕ ನವೀನ್ ಕುಮಾರ್, ಮುದಿಗೆರೆ ಗ್ರಾಪಂ ಅಧ್ಯಕ್ಷ ನಾಗಪ್ಪ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಡಿವಾಳಪ್ಪ, ಲೋಕೇಶ್, ಶಿಕ್ಷಣ ಇಲಾಖೆಯ ಪ್ರತಿನಿಧಿ ರಘುನಾಥರೆಡ್ಡಿ ಇದ್ದರು.