ಗಂಗೊಳ್ಳಿ: ಮಕ್ಕಳಿಗೆ ಬಾಲ್ಯದಲ್ಲಿ ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಪರಿಚಯಿಸುವ
ಶಿಕ್ಷಣ ನೀಡುವ ಅಗತ್ಯತೆ ಇದೆ. ಮಕ್ಕಳು ಸಂಸ್ಕಾರವಂತರಾದರೆ ಸಮಾಜ ಸದೃಢವಾಗಿ ಬೆಳೆಯುತ್ತದೆ. ಮಕ್ಕಳಿಗೆ ನಮ್ಮ
ಸಂಸ್ಕೃತಿ ಸಂಸ್ಕಾರದ ಶಿಕ್ಷಣ ನೀಡುವ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣದಲ್ಲಿ ಶಿಕ್ಷಣ ನೀಡಬೇಕು. ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹಾಕಬಾರದು. ಶಿಶು ಮಂದಿರಗಳು ಕಳೆದ ಹಲವು ದಶಕಗಳಿಂದ ಬಾಲ್ಯದಲ್ಲಿ ಮಕ್ಕಳಿಗೆ ಅಗತ್ಯವಿರುವ ಶಿಕ್ಷಣವನ್ನು ನೀಡುವ ಮಹತ್ಕಾರ್ಯದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದು ಗುತ್ತಿಗೆದಾರ ಜಿ.ಡಿ.ರಾಘವೇಂದ್ರ ಶೇರುಗಾರ್ ಹೇಳಿದರು.
ಗಂಗೊಳ್ಳಿಯ ಶ್ರೀ ವಿಜಯ ವಿಠಲ ಮಂಟಪದಲ್ಲಿ ಜರಗಿದ ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ 33 ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಶೋಧಾ ಆರ್.ಶೇರುಗಾರ್ ಬಹುಮಾನ ವಿತರಿಸಿದರು. ಸೇವಾ ಸಂಗಮ ಟ್ರಸ್ಟ್‌ನ ಕಾರ್ಯದರ್ಶಿ ಚಂದ್ರಿಕಾ ಧನ್ಯ ಶುಭ ಹಾರೈಸಿದರು. ಶಿಶು ಮಂದಿರದ ಸದಸ್ಯರಾದ ಶ್ರೀನಿವಾಸ ಎಂ., ಭಾಸ್ಕರ ಎಚ್.ಜಿ., ಉಷಾ ಪಿ.ಮಡಿವಾಳ, ವಿಜಯಶ್ರೀ ವಿ.ಆಚಾರ್ಯ, ಅಶ್ವಿತಾ ಜಿ. ಪೈ, ವಸಂತಿ ಎನ್.ಖಾರ್ವಿ, ಮಾತಾಜಿ ಮಂಜುಳಾ ಉಪಸ್ಥಿತರಿದ್ದರು.
ಬಳಿಕ ಶಿಶು ಮಂದಿರದ ಪುಟಾಣಿಗಳಿಂದ, ಬಾಲಗೋಕುಲದ ಮಕ್ಕಳಿಂದ ಹಾಗೂ ಮಾತೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.
ಶಿಶು ಮಂದಿರದ ಅಧ್ಯಕ್ಷೆ ಸವಿತಾ ಯು. ದೇವಾಡಿಗ ಸ್ವಾಗತಿಸಿದರು. ಸಂಚಾಲಕ ಡಾ| ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾತಾಜಿ ಭಾಗೀರಥಿ ವರದಿ ವಾಚಿಸಿದರು. ಆಡಳಿತ ಮಂಡಳಿ ಸದಸ್ಯ ಬಿ.ರಾಘವೇಂದ್ರ ಪೈ ನಿರ್ವಹಿಸಿದರು. ಕಾರ್ಯದರ್ಶಿ ಬಿ.ಲಕ್ಷ್ಮಿಕಾಂತ ಮಡಿವಾಳ ವಂದಿಸಿದರು.