Advertisement

ಮಕ್ಕಳಿಗೆ ಸ್ವಚ್ಛತೆಯ ಪಾಠ ಅಗತ್ಯ

12:02 PM Jun 02, 2019 | Suhan S |

ಮಳವಳ್ಳಿ: ಸ್ವಚ್ಛತೆಯ ಪಾಠ ಗ್ರಾಮೀಣ ಮಕ್ಕಳಿಗೆ ತುಂಬಾ ಅಗತ್ಯವಿದ್ದು, ಇಂದಿಗೂ ಎಷ್ಟೋ ಮಕ್ಕಳು ಸ್ವಚ್ಛತೆಯಿಂದ ವಂಚಿತರಾಗಿದ್ದಾರೆ. ಅಂತಹ ಮಕ್ಕಳಿಗೆ ಶುಚಿತ್ವದ ಬಗ್ಗೆ ತಿಳಿವಳಿಕೆ ಮೂಡಿಸುವ ಅಗತ್ಯವಿದೆ ಎಂದು ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಡಾ.ಬಿ.ಎಸ್‌.ಶಿವಣ್ಣ ಹೇಳಿದರು.

Advertisement

ತಾಲೂಕಿನ ಬಂಡೂರು ಗ್ರಾಪಂ ವ್ಯಾಪ್ತಿಯ ದಡದಪುರ, ಬಂಡೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ವಚ್ಛತಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, ಗಾಮೀಣ ಮಕ್ಕಳು ತಮ್ಮ ಆರೋಗ್ಯ ಹಾಗೂ ಕೈ-ಕಾಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲೂ ಹಿಂದೆ ಬಿದ್ದಿದ್ದಾರೆ. ಶಾಲಾ ಹಂತದಲ್ಲೇ ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಿದಾಗ ಭವಿಷ್ಯದಲ್ಲಿ ಶುಚಿತ್ವದ ಜಾಗೃತಿ ಮೂಡಿ ಸಮಾಜ ಹಾಗೂ ಪರಿಸರವೂ ಸ್ವಚ್ಛತೆಯಿಂದ ಕೂಡಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸ್ವಚ್ಛತೆಯ ಅರಿವು: ಮಕ್ಕಳು ಪ್ರತಿನಿತ್ಯ ಸ್ನಾನ ಮಾಡುವುದು, ತಮ್ಮ ಕೈ ಬೆರಳುಗಳ ಉಗುರಗಳನ್ನು ಸಮರ್ಪಕವಾಗಿ ಕಟ್ ಮಾಡಿಕೊಳ್ಳುವುದು, ಸೂಕ್ಷ್ಮ ಅಂಗವಾಗಿರುವ ಕಿವಿಗೆ ಬಡ್ಸ್‌ಗಳನ್ನು ಬಳಸುವುದು, ಹಲ್ಲುಗಳನ್ನು ಪೇಸ್ಟ್‌-ಬ್ರಷ್‌ ಬಳಸಿ ಶುಚಿಗೊಳಿಸಿಕೊಳ್ಳುವುದು. ಕೂದಲಿಗೆ ಕೊಬ್ಬರಿ ಎಣ್ಣೆ ಬಳಸುವುದರೊಂದಿಗೆ ಸಾಮಾನ್ಯ ಸ್ವಚ್ಛತೆಯ ಅರಿವು ಮೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪರಿಸರ ಕಾಳಜಿ: ಚಿಕ್ಕ ವಯಸ್ಸಿನಲ್ಲಿಯೇ ಶುಚಿತ್ವದ ಅರಿವು ಮೂಡಿಸಿಕೊಳ್ಳುವ ಜೊತೆಗೆ ತಮ್ಮ ಕುಟುಂಬದ ಸದಸ್ಯರಿಗೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಮನೆ ಹಾಗೂ ಹಳ್ಳಿಗಳ ಒಳಭಾಗದಲ್ಲಿ ಸ್ವಚ್ಛತೆ ಕಾಪಾಡುವಂತೆ ತಿಳಿವಳಿಕೆ ಮೂಡಿಸಿದಾಗ ಹಳ್ಳಿಗಳೂ ಸುಂದರಗೊಳ್ಳುತ್ತವೆ. ಮುಖ್ಯವಾಗಿ ಮನೆಗಳ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವುದು. ಮನೆಯಂಗಳ, ಹಿತ್ತಲಲ್ಲಿ ಸ್ಥಳವಿದ್ದರೆ ತರಕಾರಿ, ಸೊಪ್ಪು, ಹೂವಿನ ಗಿಡ ಬೆಳೆಸಿ ಪರಿಸರ ಕಾಳಜಿ ವಹಿಸುವಲ್ಲಿಯೂ ಆಸಕ್ತಿ ಮೂಡಿಸಬೇಕು ಎಂದು ಹೇಳಿದರು. .

ಬಂಡೂರು ಪಂಚಾಯಿತಿ ಸರ್ಕಾರಿ ಶಾಲೆಗೆ ಹೊಸ ಕೊಠಡಿಗಳನ್ನು ನಿರ್ಮಿಸಿಕೊಡುವುದಲ್ಲದೆ, ಕಂಪ್ಯೂಟರ್‌ ಹಾಗೂ ಯುಪಿಎಸ್‌ ಸೌಲಭ್ಯಗಳನ್ನೂ ದೊರಕಿಸಿ ಕೊಡ ಲಾಗುತ್ತದೆ. ಈಗಾಗಲೇ ಬಂಡೂರು, ದಡದಪುರ ಸೇರಿದಂತೆ ಹಲವು ಗ್ರಾಮಗಳು ಸಂಪೂರ್ಣವಾಗಿ ಶೌಚಾಲಯ ಹೊಂದಿ ರುವುದಲ್ಲದೆ, ಅಡುಗೆ ಅನಿಲ ಬಳಕೆಯೊಂದಿಗೆ ಹೊಗೆಮುಕ್ತ ಗ್ರಾಮಗಳಾಗಿ ರೂಪುಗೊಂಡಿವೆ ಎಂದರು.

Advertisement

ಉಚಿತ ಬಸ್‌ ಪಾಸ್‌: ಈಗಾಗಲೇ ತಾಲೂಕಿನ ಹಲವಾರು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ನ್ನು ಉಚಿತವಾಗಿ ವಿತರಿಸುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.

ಶಾಲೆಗಳಿಗೆ ವಿವಿಧ ಸವಲತ್ತು: ಮಳವಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ ಮಾತನಾಡಿ, ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹಲವು ಅನುಕೂಲಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳಿಲ್ಲದೆ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವ ಇಂದಿನ ದಿನಗಳಲ್ಲಿ ಶಾಲೆಗಳಿಗೆ ಅವಶ್ಯವಿರುವ ಕೊಠಡಿಗಳು, ಕಂಪ್ಯೂಟರ್‌, ಯುಪಿಎಸ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಯೋಗೇಶ್‌, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸಿದ್ದರಾಜು, ಬೆಳಗಾವಿ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ಡಾ.ಅಶ್ವಿ‌ನ್‌, ವಕೀಲ ಅವಿನಾಶ್‌, ಶಿಕ್ಷಕ ಜಯರಾಂ, ರಮೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next