Advertisement

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

04:04 PM Apr 06, 2024 | Team Udayavani |

ಬೇಗನೆ ದೊಡ್ಡವರಾಗುವುದು ಮಕ್ಕಳು ಮತ್ತು ಅವರ ಹೆತ್ತವರಿಬ್ಬರಿಗೂ ಅನೇಕ ಸವಾಲುಗಳನ್ನು ಒಡ್ಡಬಲ್ಲುದಾಗಿದೆ. ಹೆತ್ತವರು ಈ ಬದಲಾವಣೆಗೆ ಸಿದ್ಧರಿಲ್ಲದಿರಬಹುದು, ಜತೆಗೆ ತಮ್ಮ ಮಕ್ಕಳ 10ರಿಂದ 14 ವರ್ಷ ವಯಸ್ಸಿನ ನಡುವಣ ಅವಧಿಯನ್ನು ಅವರು ಈ ಬದಲಾವಣೆಯನ್ನು ಎದುರಿಸುವ ಅವಧಿಯಾಗಿ ಪರಿಗಣಿಸಬಹುದು. ಹದಿಹರಯದ ಈ ಆರಂಭಿಕ ವರ್ಷಗಳಲ್ಲಿ ಹೆತ್ತವರು ತಮ್ಮ ಮಕ್ಕಳ ಬೆಳವಣಿಗೆ ಮತ್ತು ಪ್ರಗತಿಯ ಮೇಲೆ ಅಪಾರವಾದ ಪರಿಣಾಮವನ್ನು ಬೀರುತ್ತಾರೆ.

Advertisement

ವಯಸ್ಸಿಗೆ ಬರುವುದು ಮಕ್ಕಳಲ್ಲಿ ಒಂದು ಸಂಕೀರ್ಣ ಪರಿವರ್ತನೆಯ ಘಟ್ಟವಾಗಿದ್ದು, ಬೆಳವಣಿಗೆಯ ವೇಗವರ್ಧನೆ ಮತ್ತು ದೈಹಿಕವಾದ ಲೈಂಗಿಕ ಗುಣಲಕ್ಷಣಗಳ ಬೆಳವಣಿಗೆಯನ್ನು ಒಳಗೊಂಡಿರುತ್ತದೆ. ಇದು ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಘಟ್ಟವಾಗಿದೆ. ದೊಡ್ಡವರಾಗುವುದಕ್ಕೆ ಸನ್ನಾಹ ಮತ್ತು ದೊಡ್ಡವರಾಗುವುದರಲ್ಲಿ ಆನುವಂಶೀಯ, ಪರಿಸರಕ್ಕೆ ಸಂಬಂಧಿಸಿದ ಮತ್ತು ಪೌಷ್ಟಿಕಾಂಶ ಸಂಬಂಧಿಯಾದ ಅನೇಕ ಅಂಶಗಳು ಪ್ರಾಮುಖ್ಯ ಪಾತ್ರವನ್ನು ಹೊಂದಿರುತ್ತವೆ.

ಬಾಲಕಿಯರಿಗೆ 7-8 ವರ್ಷ ವಯಸ್ಸಿನಲ್ಲಿ ಸ್ತನ ಬೆಳವಣಿಗೆಯಾಗುವುದನ್ನು “ಗ್ರೇ ಝೋನ್‌’ ಎಂಬುದಾಗಿ ವ್ಯಾಖ್ಯಾನಿಸಲಾಗುತ್ತಿದ್ದು, ಈ ವೈದ್ಯಕೀಯ ವಿದ್ಯಮಾನವನ್ನು “ಋತುಮತಿಯಾಗುವುದರ ವೇಗವರ್ಧನೆ, ಸಹಜ ಆದರೆ ಬೇಗನೆ ಋತುಮತಿಯಾಗುವುದು ಅಥವಾ ಕ್ಷಿಪ್ರವಾಗಿ ಸ್ತನ ಬೆಳವಣಿಗೆ ವಿಧ (ರ್ಯಾಪಿಡ್‌ ಪ್ರೊಗ್ರೆಸಿವ್‌ ಥೆಲಾರ್ಕ್‌ ವೇರಿಯೆಂಟ್‌)’ ಎಂಬುದಾಗಿ ಕರೆಯಲಾಗುತ್ತದೆ. ಇಂತಹ ಬಹುತೇಕ ಬಾಲಕಿಯರಿಗೆ ಚಿಕಿತ್ಸೆಯ ಅಗತ್ಯವಿರುವುದಿಲ್ಲ ಮತ್ತು ಅವರ ವಯಸ್ಸಿಗೆ ಸರಿಯಾದ ಅಂತಿಮ ಎತ್ತರವನ್ನು ಗಳಿಸಿಕೊಳ್ಳುತ್ತಾರೆ. ವಯಸ್ಸಿಗೆ ಬರುವ ಅಥವಾ ಋತುಮತಿಯಾಗುವ ಬೆಳವಣಿಗೆಯ ವಿವಿಧ ಹಂತಗಳ ಬಗ್ಗೆ ವೈದ್ಯರು ತಿಳಿದಿರುವುದು ಮುಖ್ಯ.

ಹದಿಹರಯದವರ ಪಾಲನೆ-ಪೋಷಣೆ ಸುಲಭವಲ್ಲ. ನಮ್ಮ ಮಕ್ಕಳನ್ನು ಅನೇಕ ಬಾಹ್ಯ ಅಂಶಗಳು, ವಿಷಯಗಳು ದಿಕ್ಕುತಪ್ಪಿಸಬಲ್ಲವು ಮತ್ತು ನಮ್ಮ ಪ್ರಯತ್ನಗಳಿಗೆ ಸವಾಲು ಒಡ್ಡಬಲ್ಲವು. ಸಾಕಾಗುವುದು, ದಣಿವು, ಉದ್ವಿಗ್ನತೆ, ಬೆಂಬಲದ ಕೊರತೆ ಮತ್ತು ಸಂಪನ್ಮೂಲಗಳ ಕೊರತೆಯು ನಮ್ಮ ಮಕ್ಕಳಿಗೆ ನಾವು ಏನನ್ನು ಒದಗಿಸಬೇಕೋ ಅದನ್ನು ಒದಗಿಸಲಾಗದಂತೆ ಮಾಡುತ್ತವೆ. ಆದರೆ ಸವಾಲುಗಳು ಏನೇ ಇದ್ದರೂ ನಮ್ಮ ಗುರಿ ಒಂದೇ; ಹೆತ್ತವರಾಗಿ ನಮ್ಮಿಂದ ಎಷ್ಟು ಉತ್ಕೃಷ್ಟವಾದುದು ಸಾಧ್ಯವೋ ಅದನ್ನು ಮಾಡುವುದು.

2012ರ ಮಾರ್ಚ್‌ 19ರಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ ಬಾಲಕಿಯರು ಅವಧಿಪೂರ್ವ ಋತುಮತಿಯಾಗುವುದು ಹೆಚ್ಚುತ್ತಿದೆ. ಕೋವಿಡ್‌ -19 ಇದಕ್ಕೆ ಕಾರಣವಾಗಿರಬಹುದು. ಕೋವಿಡ್‌ ಕಾಲದಲ್ಲಿ ಮಕ್ಕಳು ಹಲವು ತಿಂಗಳುಗಳ ಕಾಲ ಮನೆಯಲ್ಲಿಯೇ ಇದ್ದು ದೈಹಿಕ ಚಟುವಟಿಕೆಗಳಿಂದ ವಂಚಿತರಾಗಿದ್ದರು, ಅಲ್ಲದೆ ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿ ಪಡೆಯುವ ಅನಾರೋಗ್ಯಕರ ಆಹಾರಗಳನ್ನು ಸೇವಿಸಿ ದೇಹತೂಕ ಹೆಚ್ಚಿಸಿಕೊಂಡಿದ್ದರು.

Advertisement

2020-2021ರಲ್ಲಿ ದಿಲ್ಲಿ ಒಂದರಲ್ಲಿಯೇ ಇಂತಹ 67 ವರದಿಯಾದ ಪ್ರಕರಣಗಳಿದ್ದವು. ಹೆತ್ತವರು ಮತ್ತು ಮಕ್ಕಳನ್ನು ಇನ್ನೂ ಹೆಚ್ಚಾಗಿ ಕಾಡುವ ವಿಚಾರ ಎಂದರೆ ಮಕ್ಕಳ ಎತ್ತರ. ಋತುಚಕ್ರ ಆರಂಭವಾದ ಬಳಿಕ ಎತ್ತರ ಬೆಳೆಯುವುದು ನಿಲ್ಲುತ್ತದೆ. ಹೀಗಾಗಿ ಬಾಲಕಿ ಅಥವಾ ಬಾಲಕ 7ರ ವಯಸ್ಸಿಗೆ ಪ್ರೌಢನಾಗಲು ಆರಂಭಿಸಿದರೆ ಅವರಲ್ಲಿ ಕ್ಷಿಪ್ರ ಬೆಳವಣಿಗೆ 7ರ ಹರಯದಲ್ಲಿ ಆರಂಭವಾಗಿ ಅವರು ಎತ್ತರ ಬೆಳೆದುಬಿಡುತ್ತಾರೆ; ಆದರೆ ಬಳಿಕ ಅದು ನಿಂತುಬಿಡುತ್ತದೆ.

ಮುಂದಿನ ವರ್ಷಗಳಲ್ಲಿ ಅವರು ಸಣ್ಣವರಾಗಿ ಕಾಣಿಸಬಹುದು. ಹೀಗಾಗಿ ಅವಧಿಪೂರ್ವ ವಯಸ್ಸಿಗೆ ಬರುವುದನ್ನು ಬೇಗನೆ ಗುರುತಿಸಿ ಚಿಕಿತ್ಸೆಗೊಳಪಡಿಸುವುದು ಮುಖ್ಯವಾಗುತ್ತದೆ.

ಚೆನ್ನಾಗಿ ತರಬೇತಾದ ಶಿಕ್ಷಕರನ್ನು ಹೊಂದಿ ಅಧ್ಯಯನಗಳನ್ನು ಆಧರಿಸಿದ ಬೋಧನೆಯಿಂದ ಅತ್ಯುತ್ತಮ ಬೋಧನ ವಿಧಾನಗಳನ್ನು ಮತ್ತು ಯೋಜನೆಗಳನ್ನು ಎಲ್ಲ ವಯಸ್ಸಿನ ಮಕ್ಕಳಿಗೆ ಅನ್ವಯವಾಗುವಂತೆ ಅಳವಡಿಸಿಕೊಳ್ಳುವ ಮೂಲಕ ಯಾವುದೇ ಮಗು ಹಿಂದುಳಿಯದಂತೆ ನೋಡಿಕೊಳ್ಳಬಹುದಾಗಿದೆ. ಇತ್ತೀಚೆಗಿನ ಅಧ್ಯಯನಗಳು ಮತ್ತು ಪ್ರಾಯೋಗಿಕ ಮಾಹಿತಿಗಳನ್ನು ಆಧರಿಸಿ ಮನೆ ಮತ್ತು ಶಾಲೆಯಲ್ಲಿ “ಹದಿಹರಯದ ಆರಂಭಿಕ ಹಂತದಲ್ಲಿ ನಮ್ಮ ಮಕ್ಕಳಿಗೆ ನೆರವಾಗುವುದು’ ಹೆತ್ತವರ ಗುರಿಯಾಗಬೇಕು.

ದೈಹಿಕ ಬದಲಾವಣೆಗಳು

ಮಕ್ಕಳು ಗಾತ್ರ ಮತ್ತು ಆಕಾರದಲ್ಲಿ ಮಾತ್ರವಲ್ಲದೆ ಅನೇಕ ದೈಹಿಕ ಬದಲಾವಣೆಗಳಿಗೆ ಒಳಗಾಗುತ್ತಾರೆ. ಇವುಗಳಲ್ಲಿ ಕಂಕುಳಲ್ಲಿ ಹಾಗೂ ಜನನಾಂಗ ಪ್ರದೇಶದಲ್ಲಿ ಕೂದಲು ಬೆಳವಣಿಗೆ ಮತ್ತು ದೇಹಗಂಧ ಹೆಚ್ಚುವುದು ಸೇರಿವೆ. ಬಾಲಕಿಯರಲ್ಲಿ ಈ ಬದಲಾವಣೆಗಳಲ್ಲಿ ಸ್ತನಗಳ ಬೆಳವಣಿಗೆ ಮತ್ತು ಋತುಚಕ್ರದ ಆರಂಭ ಸೇರಿರುತ್ತವೆಯಾದರೆ ಬಾಲಕರಲ್ಲಿ ವೃಷಣಗಳು ಬೆಳವಣಿಗೆ ಹೊಂದುತ್ತವೆ. ಈ ಬದಲಾವಣೆಗಳು ಬಾಲಕ ಮತ್ತು ಬಾಲಕಿಯರಲ್ಲಿ ಒಂದೇ ವಯಸ್ಸಿನಲ್ಲಿ ಉಂಟಾಗಲು ಆರಂಭವಾಗುವುದಿಲ್ಲ.

ಬಾಲಕಿಯರಿಗೆ 8ರಿಂದ 13 ವರ್ಷಗಳ ನಡುವೆ ಯಾವುದೇ ವಯಸ್ಸಿನಲ್ಲಿ ಇದು ನಡೆಯಬಹುದು; ಬಾಲಕರಲ್ಲಿ ಸರಿಸುಮಾರು 2 ವರ್ಷಗಳ ಬಳಿಕ ಇದು ನಡೆಯುತ್ತದೆ. ವಿದ್ಯಾರ್ಥಿಗಳ ದೈಹಿಕ ಚಹರೆಗಳು ತಮ್ಮ ತಮ್ಮ ತರಗತಿ ಮತ್ತು ಸಹಪಾಠಿಗಳ ನಡುವೆ ವಿಭಿನ್ನವಾಗಿ ಕಂಡುಬರುವ ವಯಸ್ಸು ಇದು; ಅವರು ಎಷ್ಟು ಬೇಗನೆ ಬೆಳೆದುಬಿಡಲು ಸಾಧ್ಯ ಎಂದರೆ ಕೆಲವರಿಗೆ ವರ್ಷಾರಂಭದಲ್ಲಿ ಕುಳಿತಿದ್ದ ಬೆಂಚು-ಡೆಸ್ಕಾಗಳ ವರ್ಷದ ಅಂತ್ಯದಲ್ಲಿ ಸಣ್ಣದಾಗಬಹುದು; ಇನ್ನು ಕೆಲವರಲ್ಲಿ ಈ ಬದಲಾವಣೆಗಳು ನಿಧಾನಗತಿಯಲ್ಲಿರಬಹುದು.

ಇತರ ಬದಲಾವಣೆಗಳು ಎಂದರೆ: ­

 • ಕ್ಷಿಪ್ರವಾದ ಬೆಳವಣಿಗೆ ­
 • ಆಹಾರ ಸೇವನೆ ಹೆಚ್ಚಳ ­
 • ಕೂದಲು ಬೆಳವಣಿಗೆ ­
 • ಮೊಡವೆಗಳು ­
 • ಭಾವನಾತ್ಮಕ ಬದಲಾವಣೆಗಳು, ಕಿರಿಕಿರಿ
 • ಗೆಳೆತನಕ್ಕೆ ಹೆಚ್ಚು ಪ್ರಾಮುಖ್ಯ
 • ಆಗಾಗ ಹೆತ್ತವರ ಬಗ್ಗೆ ಕಡಿಮೆ ಗೌರವ ­
 • ದೇಹ ಗಂಧ
 • ಹಾರ್ಮೋನ್‌ ಬದಲಾವಣೆಗಳು
 • ವಿರುದ್ಧ ಲಿಂಗಿಗಳ ಬಗ್ಗೆ ಆಸಕ್ತಿ
 • ಸ್ತನ ಬೆಳವಣಿಗೆ ­
 • ಜನನಾಂಗ ಭಾಗ ಮತ್ತು ಕಂಕುಳಲ್ಲಿ ಕೂದಲು ಬೆಳವಣಿಗೆ

ಇಂತಹ ದೈಹಿಕ ಬದಲಾವಣೆಗಳು ಮಾತ್ರವಲ್ಲದೆ ಭಾವನಾತ್ಮಕ ಬದಲಾವಣೆಗಳು ಕೂಡ ಉಂಟಾಗುತ್ತವೆ. ಮನೋಭಾವ ಬದಲಾವಣೆ, ಕಿರಿಕಿರಿಗೊಳ್ಳುವಿಕೆ ಮತ್ತು ಹವ್ಯಾಸ, ಆಸಕ್ತಿಗಳಲ್ಲಿ ಬದಲಾವಣೆಗಳು ಕೂಡ ಹದಿಹರಯ ಪೂರ್ವದ ಬೆಳವ ಣಿಗೆ ಮತ್ತು ಪ್ರಗತಿಯ ಅವಿಭಾಜ್ಯ ಅಂಗವಾಗಿದೆ. ಇಂತಹ ಭಾವನಾತ್ಮಕ ಬದಲಾವಣೆಗಳು ಕಾಣಿಸಿಕೊಂಡಾಗ ಹೆತ್ತವರು ಚಿಂತಿತರಾಗುವುದು ಸ್ವಾಭಾವಿಕವಾದರೂ ಇದು ತಾತ್ಕಾಲಿಕ ಹಂತ ಮತ್ತು ಮಕ್ಕಳು ದೊಡ್ಡವರಾಗುತ್ತ ಹೋದಂತೆ ಪ್ರೌಢರಾಗುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ವೈದ್ಯಶಾಸ್ತ್ರೀಯ ಚಿಹ್ನೆಗಳು ­

 • ವೇಗಯುತ ದೈಹಿಕ ಬೆಳವಣಿಗೆ, ಎಲುಬುಗಳು ಮಾಗುತ್ತ ಬರುವುದು, ದೈಹಿಕ ಲೈಂಗಿಕ ಗುಣಲಕ್ಷಣಗಳ ಬೆಳವಣಿಗೆ ಮತ್ತು ಎಪಿಫ‌ಸಿಸ್‌ ಬೇಗನೆ ಮುಕ್ತಾಯವಾಗುವುದು ಅವಧಿಪೂರ್ವ ವಯಸ್ಸಿಗೆ ಬರುವುದರ ಜತೆಗೆ ಸಂಬಂಧ ಹೊಂದಿವೆ. ­
 • ಅಂತರ್ಗತವಾಗಿರಬಹುದಾದ ಅನಾರೋಗ್ಯದ ನಿರ್ವಹಣೆಗೆ ರೋಗಶಾಸ್ತ್ರೀಯ ಕಾರಣವನ್ನು ವ್ಯಾಖ್ಯಾನಿಸುವುದು ಮುಖ್ಯವಾಗಿರುತ್ತದೆ. ­
 • ಕಳೆದ 6-12 ತಿಂಗಳುಗಳಲ್ಲಿ ಬೆಳವಣಿಗೆಯ ದರ, ಪ್ರಗತಿಯ ದರ, ಚಿಹ್ನೆಗಳ ಆರಂಭ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕು. ಜತೆಗೆ ದೈಹಿಕವಾದ ಲೈಂಗಿಕ ಲಕ್ಷಣಗಳ ಬೆಳವಣಿಗೆ (ಮೊಡವೆಗಳು, ಎಣ್ಣೆಜಿಡ್ಡು ಸಹಿತ ಚರ್ಮ, ನಿಗುರುವಿಕೆ, ರಾತ್ರಿ ಸ್ಖಲನ ಮತ್ತು ಯೋನಿಯಲ್ಲಿ ರಕ್ತಸ್ರಾವ ಇತ್ಯಾದಿ) ಗಳ ಜತೆಗೆ ವಯಸ್ಸಿಗೆ ಬರುವುದರ ಲಕ್ಷಣಗಳು. ­
 • ಅವಧಿಪೂರ್ವ ವಯಸ್ಸಿಗೆ ಬರುವುದು ಕೌಟುಂಬಿಕವಾಗಿದೆಯೇ ಎಂದು ನಿರ್ಧರಿಸಲು ಕುಟುಂಬದಲ್ಲಿ ಇಂತಹ ಪ್ರಕರಣಗಳಿದ್ದರೆ ಅದರ ವಿವರ ಸಂಗ್ರಹ. ­
 • ದೈಹಿಕ ಪರೀಕ್ಷೆಯ ಆಧಾರದಲ್ಲಿ ಟ್ಯಾನರ್‌-ಮಾರ್ಶಲ್‌ ವಿಧಾನದಿಂದ ವಯಸ್ಸಿಗೆ ಬಂದಿರುವ ಹಂತವನ್ನು ನಿಷ್ಕರ್ಷೆ ಮಾಡಬೇಕು ಮತ್ತು ಎತ್ತರ, ತೂಕ ಮತ್ತು ದೈಹಿಕ ಅಳತೆಗಳ ಆಧಾರದಲ್ಲಿ ಜನಾಂಗಶಾಸ್ತ್ರೀಯ ಮಾಪನಗಳನ್ನು ವ್ಯಾಖ್ಯಾನಿಸಬೇಕು. ­
 • ಗ್ರೋಥ್‌ ಚಾರ್ಟ್‌ನಲ್ಲಿ ಎಲ್ಲ ಹಳೆಯ ಮತ್ತು ಹೊಸ ದತ್ತಾಂಶಗಳನ್ನು ನಮೂದಿಸಬೇಕು. ಬೆಳವಣಿಗೆಯ ದರವನ್ನು ವಾರ್ಷಿಕವಾಗಿ ಲೆಕ್ಕ ಹಾಕಬೇಕು. ­
 • ಹಳೆಯ ಯಾವುದೇ ದತ್ತಾಂಶಗಳು ಲಭ್ಯವಿಲ್ಲದಿದ್ದರೆ ಮಗುವಿನ 6 ತಿಂಗಳು ಹಿಂದಿನ ವಿವರಗಳನ್ನು ಆಧಾರವಾಗಿರಿಸಿಕೊಳ್ಳಬೇಕು.

ಬೇಗನೆ ದೊಡ್ಡವರಾಗುವುದಕ್ಕೆ ಕಾರಣಗಳು

 • ­ಜಂಕ್‌ ಆಹಾರಗಳು/ ಅನಾರೋಗ್ಯಕರ ಆಹಾರಗಳು (ಜಂಕ್‌ ಆಹಾರಗಳು- ಆಳವಾಗಿ ಕರಿದ ಆಹಾರಗಳು, ಕ್ಯಾನ್ಡ್ ಪಾನೀಯಗಳು, ಕೇಫೀನ್‌, ಚಿಪ್ಸ್‌ ಇತ್ಯಾದಿ) ­
 • ಹಾರ್ಮೋನ್‌ ಅಸಮತೋಲನ (ಬೇಗನೆ ದೊಡ್ಡವರಾಗುವ ಸಂದರ್ಭ ಉಂಟಾಗುವ ದೈಹಿಕ ಬದಲಾವಣೆಗಳಿಗೆ ಹಾರ್ಮೋನ್‌ಗಳು ಕಾರಣವಾಗಿರುತ್ತವೆ) ­
 • ಬೊಜ್ಜು (ಎಣ್ಣೆಜಿಡ್ಡಿನ, ಆಳವಾಗಿ ಕರಿದ ಆಹಾರಪದಾರ್ಥಗಳ ಸೇವನೆ, ಕರಿಯಲು ಮತ್ತೆ ಮತ್ತೆ ಅದೇ ಎಣ್ಣೆಯನ್ನು ಉಪಯೋಗಿಸುವುದು)
 • ಬೇಗನೆ ದೊಡ್ಡವರಾಗುವುದಕ್ಕೆ ಇವು ಕೆಲವು ಸಾಮಾನ್ಯ ಕಾರಣಗಳು. ಈ ಕಾರಣಗಳು ನಿಮ್ಮ ಮಕ್ಕಳ ಮನಸ್ಸನ್ನು ಪದೇ ಪದೆ ತೊಂದರೆಗೀಡು ಮಾಡಬಹುದು. ದೈಹಿಕ ಬದಲಾವಣೆಗಳಿಂದಾಗಿ ಚಟುವಟಿಕೆಗಳು ಬದಲಾಗಬಹುದು ಮತ್ತು ಅವುಗಳನ್ನು ಸ್ವೀಕರಿಸಲು ಕಷ್ಟವಾಗಬಹುದು.

ಪತ್ತೆ/ ವಿಶ್ಲೇಷಣೆ

ಈ ಬದಲಾವಣೆಗಳನ್ನು ಗುರುತಿಸುವುದು ಹೇಗೆ?

ಇತರ ಪತ್ತೆ ವಿಧಾನಗಳು

 • ದೇಹದಲ್ಲಿ ಯಾವುದೇ ಬದಲಾವಣೆಗಳು ಉಂಟಾಗಿವೆಯೇ ಎಂದು ತಿಳಿದುಕೊಳ್ಳಲು ದೈಹಿಕ ಪರೀಕ್ಷೆ
 • ಹಾರ್ಮೋನ್‌ ಬದಲಾವಣೆಗಳನ್ನು ಗುರುತಿಸಲು ರಕ್ತ ಪರೀಕ್ಷೆ ­
 • ಮೊದಲ ಎಂಡೊಕ್ರೈನಲಾಜಿಕಲ್‌ ವಿಶ್ಲೇಷಣೆಯು ಗೊನಡೊಟ್ರೊಪಿನ್‌ಗಳು (ಲುಟೆನಿಜಿಂಗ್‌ ಹಾರ್ಮೋನ್‌, ಫಾಲಿಕಲ್‌ ಸ್ಟಿಮ್ಯುಲೇಟಿಂಗ್‌ ಹಾರ್ಮೋನ್‌) ಮತ್ತು ಇತರ ಸಂಬಂಧಿ ಲಿಂಗತ್ವ ಸ್ಟಿರಾಯ್ಡಗಳ ಮಾಪನವನ್ನು ಒಳಗೊಳ್ಳುತ್ತದೆ. ­
 • ಸೆಂಟ್ರಲ್‌ ಪ್ರಿಕೋಶಿಯಸ್‌ ಪ್ಯೂಬರ್ಟಿ ಪತ್ತೆಯು ಹಾರ್ಮೋನ್‌ ದತ್ತಾಂಶವನ್ನು ಆಧರಿಸಿ ನಡೆಯದೆ ವೈದ್ಯಕೀಯ ಚಿಹ್ನೆಗಳನ್ನು ಮತ್ತು ಫಾಲೊಅಪ್‌ಗ್ಳನ್ನು ಸಂಯೋಜಿಸಿರಬೇಕು. ­
 • ಬಾಲಕಿಯರಿಗಾಗಿ ಪೆಲ್ವಿಕ್‌ ಅಲ್ಟ್ರಾಸೊನೊಗ್ರಫಿ ಎಂಬ ಇನ್ನೊಂದು ಪರೀಕ್ಷೆಯನ್ನು ನಡೆಸಬೇಕು. ಗರ್ಭಾಶಯ ಮತ್ತು ಮೂತ್ರಾಂಗ ಗಾತ್ರಗಳನ್ನು ಆಯಾ ವಯಸ್ಸಿನ ಮಾನದಂಡ ಪ್ರಮಾಣದೊಂದಿಗೆ ಹೋಲಿಸಬೇಕು. ­
 • ಮಗುವನ್ನು ಜಿಎನ್‌ಆರ್‌ಎಚ್‌ ಸ್ಟಿಮ್ಯುಲೇಶನ್‌ ಪರೀಕ್ಷೆಗೊಳಪಡಿಸಬೇಕು.

ಪ್ರಸ್ತುತ ಚಾಲ್ತಿಯಲ್ಲಿರುವ ನಿರ್ವಹಣ ವಿಧಾನಗಳು

ನಿಮ್ಮ ಮಗು ಸಹಜ ಪ್ರೌಢವಯಸ್ಕನಾ/ಳಾಗಿ ಬೆಳೆವಣಿಗೆ ಹೊಂದುವಂತೆ ಮಾಡುವುದೇ ಚಿಕಿತ್ಸೆಯ ಪ್ರಧಾನ ಗುರಿಯಾಗಿದೆ. ಚಿಕಿತ್ಸೆಯು ಅನಾರೋಗ್ಯಕ್ಕೆ ಕಾರಣವನ್ನು ಆಧರಿಸಿರುತ್ತದೆ. ಚಿಕಿತ್ಸೆಯ ಆಯ್ಕೆಗಳು ಮನಶಾÏಸ್ತ್ರೀಯ/ ವರ್ತನಾತ್ಮಕ ತೊಂದರೆಗಳು, ಎತ್ತರದ ಬಗ್ಗೆ ಆತಂಕ ಮತ್ತು ಬೇಗನೆ ಋತುಮತಿಯಾಗುವ ಸಾಧ್ಯತೆಗಳನ್ನು ಆಧರಿಸಿರುತ್ತವೆ.

ಕುಟುಂಬ ಮತ್ತು ವೈದ್ಯರು ಜತೆಗೂಡಿ ಅಪಾಯಗಳ ಬಗ್ಗೆ ಸಮಾಲೋಚನೆ ನಡೆಸಬೇಕು ಮತ್ತು ಚಿಕಿತ್ಸೆಯನ್ನು ಜತೆಗೂಡಿ ನಿರ್ಧರಿಸಬೇಕು. ಅವಧಿಪೂರ್ವ ದೊಡ್ಡವರಾಗುವುದರ ಮಾನಸಿಕ ಪರಿಣಾಮಗಳ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲವಾದರೂ ಲೈಂಗಿಕ ಶೋಷಣೆ ಮತ್ತು ಬೇಗನೆ ಗರ್ಭಿಣಿಯಾದ ಕೆಲವು ಪ್ರಕರಣಗಳು ವರದಿಯಾಗಿವೆ. ಮನಶ್ಶಾಸ್ತ್ರೀಯ ಪರಿಣಾಮಗಳ ವಿಶ್ಲೇಷಣೆಯು ರೋಗಿ ನಿರ್ದಿಷ್ಟವಾಗಿ ನಡೆಯಬೇಕು.

ನಿರ್ವಹಣೆ ಮತ್ತು ತಡೆ

ಮಗುವಿಗೆ ಈ ಕೆಳಗಿನ ವಿಷಯಗಳು ಮುಖ್ಯವಾಗಿ ಅಗತ್ಯವಾಗಿರುತ್ತವೆ:

 • ಶಿಕ್ಷಣವು ಸಂಕೀರ್ಣ ಸಮಸ್ಯೆಗಳನ್ನು ತಡೆಯಬಲ್ಲುದಾಗಿದೆ.
 • ­ಬದಲಾವಣೆಗಳನ್ನು ಸ್ವೀಕರಿಸಲು ಮಗುವಿಗೆ ಸಹಾಯ ಮಾಡಿ. ­
 • ಸಕಾರಾತ್ಮಕ ಆಲೋಚನೆಗಳು ­
 • ಸಮಸ್ಯೆಗಳನ್ನು ಸರಳವಾಗಿ ನಿಭಾಯಿಸಲು ಮತ್ತು ಎದುರಿಸಲು ಹೇಳಿಕೊಡಿ. ­
 • ಮಗು ಒತ್ತಡದಲ್ಲಿದ್ದರೆ, ಬಗೆಹರಿಸಲಾಗದ ವರ್ತನಾತ್ಮಕ ಬದಲಾವಣೆಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ. ­
 • ಮಗು/ಮಕ್ಕಳ ಜತೆಗೆ ಹೆತ್ತವರು ಸ್ನೇಹಪೂರ್ಣ ಸಂಬಂಧ ಇರಿಸಿಕೊಳ್ಳಬೇಕು. ­
 • ಹೆತ್ತವರು ಮತ್ತು ಶಿಕ್ಷಕರಿಂದ ಮಕ್ಕಳಿಗೆ ಬೆಂಬಲ ಸಿಗಬೇಕು. ­
 • ಮಕ್ಕಳ ನಿಯತಕಾಲಿಕಗಳು, ಟಿವಿ ಕಾರ್ಯಕ್ರಮಗಳಂತಹ ಮಾಹಿತಿಯುಕ್ತ ಸಂಪನ್ಮೂಲಗಳು ಮಕ್ಕಳಿಗೆ ಲಭಿಸಬೇಕು.

ತಮ್ಮ ಬೆಳೆಯುತ್ತಿರುವ ಮಕ್ಕಳ ಜತೆಗೆ ವಯಸ್ಕರಾಗುವ ಸಂದರ್ಭದಲ್ಲಿ ಸಂಭವಿಸುವ ಬದಲಾವಣೆಗಳ ಬಗ್ಗೆ ಹೆತ್ತವರು ಬಹಳ ಸರಳವಾಗಿ ಮಾತುಕತೆ ನಡೆಸುವ ಬಗ್ಗೆ ಹೆತ್ತವರ ಗಮನ ಹರಿಸಬೇಕು. ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ, ದೈಹಿಕ ಬದಲಾವಣೆಗಳ ಬಗ್ಗೆ ಹೆತ್ತವರು ತಿಳಿಸಿಕೊಡಬಹುದು; ಮಕ್ಕಳು ಪ್ರಶ್ನೆಗಳನ್ನು ಕೇಳಿ ಸಂದೇಹಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡಬೇಕು, ಮಕ್ಕಳ ಜತೆಗೆ ಸ್ನೇಹಪೂರ್ಣ ಸಂಬಂಧವನ್ನು ಇರಿಸಿಕೊಳ್ಳಬೇಕು.

ಮಕ್ಕಳು, ಹೆತ್ತವರಿಗೆ ಪ್ರಾಮುಖ್ಯ ಸಲಹೆಗಳು

ಮೊದಲ ಬಾರಿಗೆ ಋತುಮತಿಯರಾದಾಗ ಮನೆ ಅಥವಾ ಶಾಲೆಯಲ್ಲಿ ನಿಭಾಯಿಸುವುದು ಹೇಗೆ?

ಮುಟ್ಟಿನ ಸಮಯದಲ್ಲಿ ಏನೇನಾಗುತ್ತದೆ ಎಂಬುದು ಮೊತ್ತಮೊದಲಾಗಿ ನಿಮ್ಮ ಮಗುವಿಗೆ ತಿಳಿದಿರಬೇಕು.

ದೇಹದಲ್ಲಿ ಆಗಿರುವ ಬದಲಾವಣೆಗಳನ್ನು ಸ್ವೀಕರಿಸಲು ನಿಮ್ಮ ಮಗುವಿಗೆ ಸಹಾಯ ಮಾಡಿ. ­

ಋತುಸ್ರಾವ ಉಂಟಾಗುವುದು ನೈಸರ್ಗಿಕ, ಅದು ಅಸಹಜವಾದುದಲ್ಲ ಎಂದು ತಿಳಿಸಿಕೊಡುವ ಮೂಲಕ ನಿಮ್ಮ ಮಗುವನ್ನು ಸಮಾಧಾನಿಸಿ. ­

ಸ್ಯಾನಿಟರಿ ಪ್ಯಾಡನ್ನು ತೆರೆದು ತೋರಿಸಿ ಅದನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಹೇಳಿಕೊಡಿ.

ನಿಮ್ಮ ಅನುಭವಗಳನ್ನು ಮಗುವಿಗೆ ತಿಳಿಸಿಕೊಡಿ, ಋತುಮತಿಯರಾಗಿರುವ ಗೆಳತಿಯರು, ಅಕ್ಕಂದಿರ ಜತೆಗೆ ಈ ಬಗ್ಗೆ ಮಾತನಾಡಿ ಅನುಭವ ಹಂಚಿಕೊಳ್ಳಲು ಪ್ರೋತ್ಸಾಹಿಸಿ.

ಋತುಸ್ರಾವ ಉಂಟಾದ ಮೊದಲ ದಿನವನ್ನು ನೆನಪಿಟ್ಟುಕೊಳ್ಳಲು ಹೇಳಿ, ಋತುಚಕ್ರ ಅಭ್ಯಾಸವಾಗುವವರೆಗೆ ಮುಂದಿನ ಋತುಸ್ರಾವ ಆಗಬಹುದಾದ ದಿನಾಂಕವನ್ನು ಡೈರಿ/ಕ್ಯಾಲೆಂಡರ್‌ ನಲ್ಲಿ ಬರೆದಿಟ್ಟುಕೊಳ್ಳುವಂತೆ ತಿಳಿಸಿ. ­

ಅಗತ್ಯ ಬಿದ್ದಾಗ ಉಪಯೋಗಿಸಿಕೊಳ್ಳುವುದಕ್ಕಾಗಿ ಹೆಚ್ಚುವರಿ ಸ್ಯಾನಿಟರಿ ಪ್ಯಾಡನ್ನು ಕಾಗದದ ಹಾಳೆಯಲ್ಲಿ ಸುತ್ತಿ ಶಾಲಾಚೀಲದಲ್ಲಿ ಇರಿಸಿಕೊಳ್ಳಲು ಹೇಳಿ. ­

ಪ್ರತೀ 4/6 ತಾಸಿಗಳಿಗೆ ಒಮ್ಮೆ ಅಥವಾ ಅಗತ್ಯ ಬಿದ್ದಾಗ ಸ್ಯಾನಿಟರಿ ಪ್ಯಾಡ್‌ ಬದಲಿಸುವಂತೆ ತಿಳಿಸಿ. ­

ಶಾಲೆಯಲ್ಲಿ ಇರುವಾಗ ಉಪಯೋಗಿಸಿದ ಸ್ಯಾನಿಟರಿ ಪ್ಯಾಡನ್ನು ಕಾಗದದಲ್ಲಿ ಸುತ್ತಿ ಶೌಚಾಲಯದಲ್ಲಿ ಇರುವ ಕಸದ ಬುಟ್ಟಿಯಲ್ಲಿ ಹಾಕುವಂತೆ ಮತ್ತು ಮನೆಯಲ್ಲಿಯೂ ಇದೇ ಪ್ರಕ್ರಿಯೆಯನ್ನು ಅನುಸರಿಸುವಂತೆ ಮಗುವಿಗೆ ತಿಳಿಹೇಳಿ. ­ ಮನೆಯಲ್ಲಿ ಉಪಯೋಗಿಸಿದ ಸ್ಯಾನಿಟರಿ ಪ್ಯಾಡ್‌ ಗಳನ್ನು ನೆಲದಲ್ಲಿ ಆಳವಾಗಿ ಹೂಳಬೇಕು ಅಥವಾ ಉರಿಸಬೇಕು ಅಥವಾ ಸರಿಯಾದ ವಿಧಾನದಲ್ಲಿ ಸ್ಥಳೀಯಾಡಳಿತದ ಕಸ ವಿಲೇವಾರಿಯವರಿಗೆ ಹಸ್ತಾಂತರಿಸಬೇಕು. ­

ಮನೆ/ ಶಾಲೆಯಲ್ಲಿ ಉಪಯೋಗಿಸಿದ ಪ್ಯಾಡ್‌ಗಳನ್ನು ಶೌಚಾಲಯಕ್ಕೆ ಹಾಕಿ ಫ್ಲಶ್‌ ಮಾಡಬಾರದು; ಹಾಗೆ ಮಾಡಿದರೆ ಬ್ಲಾಕ್‌ ಆಗಬಹುದು. ­

ಮುಟ್ಟಿನ ಸಮಯದಲ್ಲಿ ನಿಮ್ಮ ಮಗು ಕೆಳಹೊಟ್ಟೆ ನೋವು ಅಥವಾ ಬೆನ್ನುನೋವು ಎಂದು ಹೇಳಿಕೊಂಡರೆ ಹಾಟ್‌ ವಾಟರ್‌ ಬ್ಯಾಗ್‌ ಇರಿಸಿಕೊಳ್ಳಲು/ ಬಿಸಿ ನೀರು ಕುಡಿಯಲು ಹೇಳಿ. ಸಾಕಷ್ಟು ವಿಶ್ರಾಂತಿ ಪಡೆಯಲು ತಿಳಿಸಿ. ­

ಕೆಲವು ಸರಳ ಯೋಗಾಸನಗಳಿಂದಲೂ ಮುಟ್ಟಿನ ಅವಧಿಯ ನೋವುಗಳಿಂದ ಉಪಶಮನ ಪಡೆಯಬಹುದು. ­ ಕೆಲವು ಪ್ರಕರಣಗಳಲ್ಲಿ ಸಾಕಷ್ಟು ನೀರು ಕುಡಿಯು ವುದರಿಂದಲೂ ನೋವು ಉಪಶಮನವಾಗುತ್ತದೆ. ­

ಗುಪ್ತಾಂಗಗಳನ್ನು ಶುಚಿಯಾಗಿ ಇರಿಸಿಕೊಳ್ಳು ವುದರಿಂದ ಸೋಂಕುಗಳನ್ನು ತಡೆಯಬಹುದು. ­

ದಿನವೂ ಒಳ ಉಡುಪುಗಳನ್ನು ಬದಲಾಯಿಸಿಕೊಳ್ಳ ಬೇಕು ಮತ್ತು ಶುದ್ಧವಾದ ಹತ್ತಿಬಟ್ಟೆಯ ಒಳಉಡುಪು ಗಳನ್ನು ಧರಿಸಬೇಕು. ­

ಋತುಸ್ರಾವದ ಅವಧಿಯಲ್ಲಿ ಆದಷ್ಟು ಬಟ್ಟೆ ಉಪಯೋಗಿಸುವುದರಿಂದ ದೂರವಿರಬೇಕು. ಈ ಬಟ್ಟೆಗಳನ್ನು ಸರಿಯಾಗಿ ಒಗೆದು ಒಣಗಿಸದೆ ಇದ್ದಲ್ಲಿ ಸೋಂಕು ಉಂಟಾಗುವ ಅಪಾಯ ಇದೆ. ­

ಮಗುವಿನ ಜತೆಗೆ ಸ್ನೇಹಪರ ಸಂಬಂಧ ಹೊಂದಿ, ಆಕೆ ತನಗನಿಸಿದ್ದು, ತನ್ನ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತಹ ವಾತಾವರಣ ಇರಲಿ.

ಕೊನೆಯದಾಗಿ

ಬೆಳೆದು ದೊಡ್ಡವರಾದಂತೆ ದೇಹ ಮತ್ತು ಮನಸ್ಸಿ ನಲ್ಲಿ ಉಂಟಾಗುವ ನೈಸರ್ಗಿಕ ಬದಲಾವಣೆಗಳ ಬಗ್ಗೆ ತಮ್ಮ ಮಕ್ಕಳಿಗೆ ಮಾಹಿತಿ ಒದಗಿಸುವುದು ಹೆತ್ತವರ ಜವಾಬ್ದಾರಿಯಾಗಿರುತ್ತದೆ, ಈ ನಿಟ್ಟಿನಲ್ಲಿ ಅವರು ತಾವಾಗಿಯೇ ಕಾರ್ಯಪ್ರವೃತ್ತರಾಗಬೇಕು. ವಯಸ್ ರಾಗುವ ಸಂದರ್ಭದ ಬದಲಾವಣೆಗಳ ಬಗ್ಗೆ ಹೆತ್ತವರು ತಮ್ಮ ಮಕ್ಕಳಿಗೆ ಮೊದಲ ಗುರುವಾಗಿರಬೇಕು ಮತ್ತು ಈ ವಿಚಾರದಲ್ಲಿ ಹೆತ್ತವರ ಜತೆಗೆ ಮಕ್ಕಳು ಮುಕ್ತ ವಾತಾ ವರಣ ಹೊಂದಿರಬೇಕು.

ಈ ಮಾಹಿತಿಗಳು ಮಕ್ಕಳಲ್ಲಿ ಗಾಬರಿಯನ್ನು ಉಂಟುಮಾಡದೆ ಆರೋಗ್ಯಪೂರ್ಣ ಬೆಳವಣಿಗೆಗೆ ಹಾಗೂ ಪ್ರಗತಿಗೆ ಅಗತ್ಯವಾದ ಸಕಾರಾ ತ್ಮಕ ಮಾಹಿತಿಯಾಗುವಂತೆ ಇರಬೇಕು. ಹೀಗಾಗಿ ಅವಧಿಪೂರ್ವ ದೊಡ್ಡವರಾಗುವ ಬಗೆಗೆ ಈ ಲೇಖನ ದಲ್ಲಿ ಒದಗಿಸಿರುವ ಮಾಹಿತಿಗಳು ಎಲ್ಲ ಹೆತ್ತವರು ಮತ್ತು ಮಕ್ಕಳಿಗೆ ಉಪಯುಕ್ತವಾಗಿದ್ದು, ಇಬ್ಬರಲ್ಲೂ ಮಾನಸಿಕ ಮತ್ತು ವರ್ತನಾತ್ಮಕ ಒತ್ತಡವನ್ನು ದೂರ ಮಾಡಲಿ. ನಮ್ಮ ಮಕ್ಕಳು ಹದಿಹರಯಕ್ಕೆ ಪ್ರವೇಶವನ್ನು ಆರೋಗ್ಯಪೂರ್ಣವಾಗಿ ಆನಂದಿಸಲಿ.

ವಯೊಲೆಟ್‌ ಎಲ್ವೀರಾ ಮಿನೇಜಸ್‌

ಸೀನಿಯರ್‌ ಪೀಲ್ಡ್‌ ಇನ್‌ವೆಸ್ಟಿಗೇಟರ್‌

-ಡಾ| ಸುಶ್ಮಿತಾ ಆರ್‌. ಕರ್ಕಡ

ಅಸಿಸ್ಟೆಂಟ್‌ ಪ್ರೊಫೆಸರ್‌,

ಒಬಿಜಿ ನರ್ಸಿಂಗ್‌ ವಿಭಾಗ

ಮಣಿಪಾಲ್‌ ಕಾಲೇಜ್‌ ಆಫ್ ನರ್ಸಿಂಗ್‌,

ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next