Advertisement

ಮಕ್ಕಳೇ, ಧೈರ್ಯದಿಂದ ಲಸಿಕೆ ಪಡೆದುಕೊಳ್ಳಿ; ನಿರ್ಲಕ್ಷ್ಯ  ಬೇಡ

12:05 AM Jan 03, 2022 | Team Udayavani |

ಸಮಗ್ರ ಅಧ್ಯಯನದ ಬಳಿಕ ಕೇಂದ್ರ ಸರಕಾರ ಮಕ್ಕಳಿಗೆ ಲಸಿಕೆ ನೀಡುವ ನಿರ್ಧಾರವನ್ನು ಕೈಗೊಂಡಿದ್ದು ಅದರಂತೆ ಮೊದಲ ಹಂತದಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಸೋಮವಾರದಿಂದ ಲಸಿಕೆ ನೀಡಲಾಗುವುದು. ಶನಿವಾರದಿಂದಲೇ ಕೋವಿನ್‌ ಆ್ಯಪ್‌ ಮತ್ತು ವೆಬ್‌ಸೈಟ್‌ನಲ್ಲಿ ಈ ವಯೋಮಿತಿಯ ಅರ್ಹ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.

Advertisement

ಮಕ್ಕಳ ಹೆತ್ತವರ ಮೊಬೈಲ್‌, ಪ್ರೌಢಶಾಲೆ- ಕಾಲೇಜುಗಳ ಮುಖ್ಯೋಪಾಧ್ಯಾಯರ, ಪ್ರಾಂಶುಪಾಲರ ಮೊಬೈಲ್‌ನಿಂದ ಮಕ್ಕಳ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ರಾಜ್ಯ ದಲ್ಲಿ 15-18 ವರ್ಷದೊಳಗಿನ 31.75ಲಕ್ಷ ಮಕ್ಕಳಿದ್ದು ಇವರೆಲ್ಲರಿಗೂ ಮುಂದಿನ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ಲಸಿಕೆ ನೀಡುವ ಗುರಿಯನ್ನು ಸರಕಾರ ಹಾಕಿಕೊಂಡಿದೆ. ಇದಕ್ಕಾಗಿ ಆರೋಗ್ಯ ಇಲಾಖೆ ಯಿಂದ ತರಬೇತಿ ಪಡೆದ ಸಿಬಂದಿಯನ್ನು ಆಯ್ದ ಪ್ರೌಢ ಶಾಲೆ- ಕಾಲೇಜು, ಇತರ ಶಿಕ್ಷಣ ಸಂಸ್ಥೆಗಳಲ್ಲಿ ತೆರೆಯಲಾಗಿರುವ ಲಸಿಕಾ ಕೇಂದ್ರಗಳಿಗೆ ನೇಮಿಸಲಾಗಿದೆ. ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶಾಲಾ-ಕಾಲೇಜುಗಳಿಂದ ಹೊರಗುಳಿದಿರುವ ಅಥವಾ ತೊರೆದಿರುವ ಮಕ್ಕಳನ್ನೂ ಗುರುತಿಸಲು ಕಾರ್ಮಿಕ ಇಲಾಖೆ ಮತ್ತು ಇತರ ಸಂಘಸಂಸ್ಥೆಗಳ ಸಹಕಾರವನ್ನು ಪಡೆದುಕೊಳ್ಳಲಾಗುತ್ತಿದ್ದು ಆ ಮಕ್ಕಳಿಗೂ ಲಸಿಕೆ ನೀಡಲು ಅಗತ್ಯ ಏರ್ಪಾಡು ಮಾಡಲಾಗಿದೆ.

15-18 ವಯೋಮಿತಿಯ ಮಕ್ಕಳ ವೈದ್ಯಕೀಯ ಅರ್ಹತೆಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಲಸಿಕೆ ನೀಡುವಂತೆ ಸೂಚನೆ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಜ್ವರದಿಂದ ಬಳಲುತ್ತಿರುವ ಮಕ್ಕಳಿಗೆ ಹಾಗೂ ಟಿಡಿ ಮತ್ತು ಇತರ ಲಸಿಕೆ ಪಡೆದ ಮಕ್ಕಳಿಗೆ 15 ದಿನಗಳ ಬಳಿಕ ಲಸಿಕೆ ನೀಡಲು ನಿರ್ದೇಶನ ನೀಡಲಾಗಿದೆ. ಕೊರೊನಾ ನಿರೋಧಕ ಲಸಿಕೆ ಪಡೆಯುವುದರಿಂದ ಮಕ್ಕಳಲ್ಲಿ ಯಾವುದೇ ತೆರನಾದ ಪಾರ್ಶ್ವ ಪರಿಣಾಮಗಳು ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ತಜ್ಞರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಯಾರಲ್ಲಾದರೂ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಂಡರೂ ಚಿಕಿತ್ಸೆ ನೀಡಲು ಕೇಂದ್ರಗಳಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿರುವುದರಿಂದ ಮಕ್ಕಳು ಲಸಿಕೆ ಪಡೆ ಯಲು ಹಿಂದೇಟು ಹಾಕುವ ಅಗತ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಈಗಾಗಲೇ ಅಭಯ ನೀಡಿದ್ದಾರೆ.

ಇದನ್ನೂ ಓದಿ:ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಪಾಕ್‌ ಸೈನಿಕನ ಹೊಡೆದುರುಳಿಸಿದ ಸೇನೆ

ಏತನ್ಮಧ್ಯೆ ಕಳೆದ 3-4 ದಿನಗಳಿಂದೀಚೆಗೆ ದೇಶದ ಹಲವೆಡೆ ಕೊರೊನಾ ರೂಪಾಂತರಿ ಸಹಿತ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ತುಸು ಆತಂಕಕ್ಕೆ ಕಾರಣವಾಗಿದೆ. ಮುಂಬಯಿ, ದಿಲ್ಲಿ, ಕೋಲ್ಕತಾ, ಬೆಂಗಳೂರು ಸಹಿತ ಹಲವೆಡೆ ಪ್ರಕರಣಗಳು ಹೆಚ್ಚಾಗಿದ್ದು ದೇಶದಲ್ಲಿ 3ನೇ ಅಲೆ ಹರಡುತ್ತಿರುವ ಭೀತಿ ಮೂಡಿಸಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಬಿಗಿ ನಿರ್ಬಂಧಗಳನ್ನು ವಿಧಿಸಲಾಗಿದೆ. ರಾಜ್ಯದಲ್ಲಿಯೂ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈಗ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ ಜತೆಗೆ ಇನ್ನಷ್ಟು ಕಠಿನ ನಿರ್ಬಂಧಗಳನ್ನು ವಿಧಿಸುವ ಕುರಿತಂತೆ ಸರಕಾರ ಚಿಂತನೆ ನಡೆಸಿದೆ. ಸದ್ಯ ಜನರಿಗೆ ನೀಡಲಾಗಿರುವ ಲಸಿಕೆ ಕೊರೊನಾ ವಿರುದ್ಧ ಪ್ರತಿಬಂಧಕ ಶಕ್ತಿ ಹೆಚ್ಚಿಸುತ್ತದೆಯೇ ವಿನಾ ಇದು ಸೋಂಕು ನಿವಾರಕ ಲಸಿಕೆಯಲ್ಲ. ಹೀಗಾಗಿ ಜನತೆ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ, ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next