ಮುಂಬಯಿ: ಇಲ್ಲಿನ ಸ್ಥಳೀಯ ರೈಲುಗಳಲ್ಲಿ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಪ್ರಯಾಣಿಸುತ್ತಿರುವುದನ್ನು ಗಮನಿಸಿದ ರೈಲ್ವೇ ಆಡಳಿತವು ಮಕ್ಕಳಿಗೆ ಲೋಕಲ್ ರೈಲುಗಳಲ್ಲಿ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದೆ.
ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಜನಸಂದಣಿಯನ್ನು ನಿಯಂತ್ರಿಸುವ ಉದ್ಧೇಶದಿಂದ ಸ್ಥಳೀಯ ರೈಲುಗಳಲ್ಲಿ ಸಾರ್ವಜನಿಕರಿಗೆ ಪ್ರಯಾಣಿಸಲು ಅನುಮತಿ ನೀಡಿಲ್ಲ. ಆದರೂ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಅನೂಕೂಲಕ್ಕಾಗಿ ಸ್ಥಳೀಯ ರೈಲುಗಳಲ್ಲಿ ನಿರ್ದಿಷ್ಟ ಅವಧಿಯಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಆದರೆ ಅನೇಕ ಮಹಿಳೆಯರು ಮಕ್ಕಳೊಂದಿಗೆ ಪ್ರಯಾಣಿಸುವುದರಿಂದ ಸ್ಥಳೀಯ ಜನಸಂದಣಿ ಹೆಚ್ಚಾಗಿದೆ. ಇದರಿಂದ ತಡ ರಾತ್ರಿಯವರೆಗೆ ಮಹಿಳೆಯರ ಬೋಗಿಗಳಲ್ಲಿ ದಟ್ಟನೆಯು ಹೆಚ್ಚಾಗಿವೆ. ಈ ದಟ್ಟಣೆಯನ್ನು ತಪ್ಪಿಸಲು ರೈಲ್ವೆ ಇಲಾಖೆ ಈ ಕಠಿಣ ಕ್ರಮ ಕೈಗೊಂಡಿದೆ.
ಲಾಕ್‌ಡೌನ್ ಅವಧಿಯಲ್ಲಿ ಪೊಲೀಸ್, ವೈದ್ಯಕೀಯ ಸಿಬ್ಬಂದಿ, ಪುರಸಭೆ ಮತ್ತು ಸರಕಾರಿ ನೌಕರರಿಗೆ ಮಾತ್ರ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶವಿತ್ತು. ಅನಂತರ ರಾಜ್ಯ ಸರಕಾರ ಮತ್ತು ರೈಲ್ವೆ ಆಡಳಿತವು ಕ್ರಮೇಣ ವಿವಿಧ ವರ್ಗದ ಉದ್ಯೋಗಿಗಳಿಗೆ ಸ್ಥಳೀಯವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿತು. ಅದರಲ್ಲಿ, ಎಲ್ಲಾ ಮಹಿಳೆಯರಿಗೆ ಅಕ್ಟೋಬರ್ 21 ರಿಂದ ನಿಗದಿತ ಸಮಯದಲ್ಲಿ ಸ್ಥಳೀಯವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು.
ಅಗತ್ಯ ಸೇವೆಗಳಲ್ಲಿ ಮಹಿಳಾ ಉದ್ಯೋಗಿಗಳನ್ನು ಹೊರತುಪಡಿಸಿ ಮಹಿಳೆಯರಿಗೆ ಬೆಳಗ್ಗೆ 11.00 ರಿಂದ ಮಧ್ಯಾಹ್ನ 3.00 ರವರೆಗೆ ಮತ್ತು ಸಂಜೆ 7.00 ರ ನಂತರ ಪ್ರಯಾಣಿಸಲು ಸರಕಾರ ಅವಕಾಶ ನೀಡಿದೆ. ಆದರೆ ಕೆಲವು ಮಹಿಳೆಯರು ಶಾಪಿಂಗ್ ಅಥವಾ ಸಂಬಂಧದಿಕರನ್ನು ಭೇಟಿ ಮಾಡುವ ಸಲುವಾಗಿ ತಮ್ಮ ಮಕ್ಕಳೊಂದಿಗೆ ಪ್ರಯಾಣಿಸುತ್ತಿರುವುದು ಕಂಡುಬರುತ್ತದೆ.
ಕೋವಿಡ್-19 ಅವಧಿಯಲ್ಲಿ ಮಹಿಳೆಯರು ಅನಗತ್ಯವಾಗಿ ಮಕ್ಕಳೊಂದಿಗೆ ಪ್ರಯಾಣಿಸುವುದರಿಂದ ಅಪಾಯವು ಹೆಚ್ಚಾಗುವ ಸಾಧ್ಯತೆಯಿದೆ ಎಂದು ರೈಲ್ವೆ ಆಡಳಿತ ತಿಳಿಸಿದೆ.