Advertisement
ವೇತನ ಪಡೆದು ಸರ್ಕಾರಿ ಕೆಲಸ ಮಾಡುವವ ರದ್ದು ಸೇವೆಯಲ್ಲ, ಅದು ಕರ್ತವ್ಯ ಅಂತ ಹೆಚ್ಚಿನವರು ಪ್ರತಿಪಾದಿಸುತ್ತಾರೆ. ಇಲ್ಲಿ ಪರಿಚಯಿಸುತ್ತಿರುವ ಶಿಕ್ಷಕರದ್ದು ಸೇವೆಯೋ, ಕರ್ತವ್ಯವೋ ಓದುಗರೇ ನಿರ್ಧರಿಸಬೇಕು.
Related Articles
Advertisement
29 ವರ್ಷಗಳ ಹಿಂದೆ ನೇಣಿಬಸ್ತಿಗೆ ಬಂದಾಗ ಮುಂದೊಂದು ದಿನ ಇಲ್ಲಿಯೇ ನಿವೃತ್ತನಾಗುತ್ತೇನೆಂದು ಏಕನಾಥ್ ಮಾಸ್ತರು ಕಲ್ಪಿಸಿಕೊಂಡಿರಲಿಲ್ಲ. ಮೊನ್ನೆ ಜೂನ್ 29ರಂದು ನೇಣಿಬಸ್ತಿ ಶಾಲೆಯಲ್ಲಿಯೇ ಅವರ ನಿವೃತ್ತಿಯೂ ಆಯಿತು. ಬಹುಶಃ ಇತ್ತೀಚಿನ 25-30 ವರ್ಷಗಳಲ್ಲಿ, ಡ್ನೂಟಿ ರಿಪೋರ್ಟ್ ಮಾಡಿಕೊಂಡ ಶಾಲೆಯಲ್ಲಿಯೇ ಸರ್ವಿಸ್ ಪೂರ್ತಿ ಕಳೆದು ಅದೇ ಶಾಲೆಯಲ್ಲಿಯೇ ರಿಟೈರ್ ಆದ ಶಿಕ್ಷಕರೇನಾದರೂ ಇದ್ದರೆ ಅದು ಏಕನಾಥ ಬೊಂಗಾಳೆಯೊಬ್ಬರೇ ಇದ್ದಿರಬೇಕು.
1985ರಲ್ಲಿ ನೇಣಿಬಸ್ತಿಯಲ್ಲೊಂದು ಸರ್ಕಾರಿ ಶಾಲೆ ಆರಂಭಗೊಂಡ ದಿನದಿಂದ ಮೊದಲ್ಗೊಂಡು ಏಕನಾಥ್ ಮಾಸ್ತರು ಶಿಕ್ಷಕರಾಗಿ ಬರುವವರೆಗೂ ಅಲ್ಲಿ ಖಾಯಂ ಶಿಕ್ಷಕರೇ ಇರಲಿಲ್ಲ. ಬಂದವರೆಲ್ಲಾ ಮೂರು ತಿಂಗಳು, ಆರು ತಿಂಗಳು ನಿಯೋಜನೆಯ ಮೇಲೆ ಬಂದವರೇ. ಈ ಶಾಲೆಯಲ್ಲಿ ಕೆಲಸ ಮಾಡುವಂತೆ ಶಿಕ್ಷಕರನ್ನು ಒಪ್ಪಿಸುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿತ್ತು. ಇಂತಿರ್ಪ ಊರಿನ ಶಾಲೆಗೆ ಏಕನಾಥ ಬೊಂಗಾಳೆ ಖಾಯಂ ಶಿಕ್ಷಕರಾಗಿ ಬಂದರು.
ದೂರದ ಊರಿಂದಲೂ ಮಕ್ಕಳು ಬಂದರು!
ಕಾಡಿನ ನಡುವಿನ, ವಾಹನ ಸಂಚಾರವಾಗಲಿ, ಜನ ಸಂಚಾರವಾಗಲಿ ಇಲ್ಲದ ಕಾಲುದಾರಿಯಲ್ಲಿ ಏಕನಾಥ್ ಮಾಸ್ತರು ಹಲವು ವರ್ಷ ನಡೆದೇ ಶಾಲೆ ತಲುಪಿದರು. ಆರಂಭದ ದಿನಗಳಲ್ಲಿ ಒಂದೆರಡು ಬಾರಿ ದಾರಿ ತಪ್ಪಿ ನೇಣಿಬಸ್ತಿ ಬದಲು ಬೇರಾವುದೋ ಊರು ತಲುಪಿ, ಹಳ್ಳಿಗರ ಸಹಾಯ ಪಡೆದು ಸರಿದಾರಿ ಹಿಡಿದದ್ದೂ ಇದೆ. ಒಂದೆರಡು ಬಾರಿ ದಾರಿ ತಪ್ಪಿಸಿಕೊಂಡ ಮಾಸ್ತರು ಮುಂದೆ ದಾರಿಯ ಆಯಕಟ್ಟಿನ ಜಾಗಗಳಲ್ಲಿ ಬಾಣದ ಗುರುತಿರುವ “ನೇಣಿಬಸ್ತಿ ಶಾಲೆಗೆ…’ ಎಂದು ಬರೆದ ಐದಾರು ಬೋರ್ಡ್ ಗಳನ್ನು ಅಲ್ಲಲ್ಲಿ ತೂಗು ಹಾಕಿದರು. ಏಕನಾಥ್ ಮಾಸ್ತರರು ತೂಗು ಹಾಕಿರುವ ಬೋರ್ಡ್‌ಗಳು ಈಗಲೂ ಇವೆ.
ಏಕನಾಥ್ ನೇಣಿಬಸ್ತಿಗೆ ಬಂದವರೇ ಮನೆ ಮನೆ ತಿರುಗಿ ಮಕ್ಕಳ ಗಣತಿ ಮಾಡಿ ಶಾಲೆಗೆ ಮಕ್ಕಳನ್ನು ಕಳಿಸುವಂತೆ ವಿನಂತಿಸಿಕೊಂಡರು. ಮಾಸ್ತರರ ಪ್ರಯತ್ನ ಫಲಿಸಿತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಮಕ್ಕಳಿಗೆ ಹೊಡೆಯದೇ ಕಲಿಸುವ ಮಾಸ್ತರರೊಬ್ಬರು ಶಾಲೆಯಲ್ಲಿದ್ದಾರೆಂಬ ಸುದ್ದಿ ಊರೆಲ್ಲಾ ಹರಡಿತು. ದೂರದ ಊರುಗಳ ಮಕ್ಕಳೂ ನೇಣಿಬಸ್ತಿಯ ನೆಂಟರ ಮನೆಗಳಲ್ಲಿದ್ದುಕೊಂಡು ಶಾಲೆಗೆ ಬರತೊಡಗಿದರು. ವಿಶೇಷವೇನು ಗೊತ್ತೆ? ಈ ಶಾಲೆ ಯಲ್ಲಿ ಇದ್ದುದು ಅವರೊಬ್ಬರೇ ಶಿಕ್ಷಕರು! ಅನಿ ವಾರ್ಯ ಕಾರಣಗಳಿದ್ದಲ್ಲಿ ಮಾತ್ರ ಅವರು ರಜೆ ಪಡೀ ತಿದ್ರು. ಆ ದಿನಗಳಲ್ಲಿ ಬದಲಿ ಶಿಕ್ಷಕರು ಯಾರಾ ದರೂ ಬರಬೇಕಲ್ಲ, ಅಂಥ ಸಂದರ್ಭಗಳಲ್ಲಿ ಏಕನಾಥ್‌ರವರೇ ತಮ್ಮ ಮಿತ್ರರಲ್ಲಿ ವಿನಂತಿಸಿಕೊಂಡು, “ಇವರನ್ನ ಬದಲಿ ಶಿಕ್ಷಕರಾಗಿ ಬರಲು ಒಪ್ಪಿಸಿದ್ದೇನೆ’ ಅಂತ ಬಿ.ಇ.ಒ.ಗೆ ಹೇಳಿ ರಜೆ ಮಂಜೂರು ಮಾಡಿಸಿಕೊಳ್ಳಬೇಕಿತ್ತು
ಕಣ್ಣ ಹನಿಗಳ ಕಾಣಿಕೆ…
ದಿನಗಳು ಉರುಳಿದಂತೆ ಏಕನಾಥ್ ಮಾಸ್ತರರು ನೇಣಿಬಸ್ತಿಯ ನಿವಾಸಿಯೇ ಆಗಿಬಿಟ್ಟರು. ಮೊದಮೊದಲು ಅವರು ಮನೆಯಿಂದ ಮಧ್ಯಾಹ್ನದ ಲಂಚ್ ಬಾಕ್ಸ್ ತರುತ್ತಿದ್ದರು. ನಂತರದ ದಿನಗಳಲ್ಲಿ ಊರಿನ ಕೆಲವರು “ಅದ್ಯಾಕ್ ಲಂಚ್ ಬಾಕ್ಸ್ ತರ್ತೀರಿ? ನಮ್ಮನೇಗೆ ಬಂದು ಊಟ ಮಾಡಿ’ ಎಂದಿದ್ದರಿಂದ ಮಧ್ಯಾಹ್ನದ ಊಟ ನೇಣಿಬಸ್ತಿಯ ಯಾರಾದರೊಬ್ಬರ ಮನೆಯಲ್ಲಿ ನಡೆಯುತ್ತಿತ್ತು.
ನೋಡನೋಡುತ್ತಿದ್ದಂತೆಯೇ 29 ವರ್ಷಗಳು ಉರುಳಿದವು. ಏಕನಾಥ ಮಾಸ್ತರರು ನೇಣಿಬಸ್ತಿಯಲ್ಲಿಯೇ ನಿವೃತ್ತರಾದರು. ಅವರಿಂದ ಪಾಠ ಹೇಳಿಸಿಕೊಂಡವರು ಈಗ ಉನ್ನತ ಶಿಕ್ಷಣ ಪಡೆದು ದೇಶದ ಮೂಲೆ ಮೂಲೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಏಕನಾಥ್‌ರು ಅದನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ. ಶಿಕ್ಷಕ ವೃತ್ತಿಗೆ ಬರುವ ಮೊದಲು ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಪುಟ ವಿನ್ಯಾಸಗಾರನಾಗಿ ಕಾರ್ಯ ನಿರ್ವಹಿಸಿದ ಬೊಂಗಾಳೆಯವರಿಗೆ ನಾಡಿನ ಅನೇಕ ಹೆಸರಾಂತ ಸಾಹಿತಿಗಳ, ಪತ್ರಕರ್ತರ, ಕಲಾವಿದ, ಅಧಿಕಾರಿಗಳ ನಿಕಟ ಸಂಪರ್ಕವಿತ್ತು. ಮನಸ್ಸು ಮಾಡಿದ್ದರೆ ನಗರ ಪ್ರದೇಶವೊಂದಕ್ಕೆ ವರ್ಗಾವಣೆ ಪಡೆದುಕೊಳ್ಳುವುದು ಅವರಿಗೆ ಕಷ್ಟವೇನಾಗಿರಲಿಲ್ಲ. ಆದರೆ, ಮಕ್ಕಳೇ ದೇವರು ಎಂದು ನಂಬಿದ್ದ ಅವರು ನೇಣಿಬಸ್ತಿ ಬಿಟ್ಟು ಹೊರಹೋಗುವ ಯೋಚನೆಯನ್ನೇ ಮಾಡಲಿಲ್ಲ. ಈ ಊರಿನಲ್ಲಿ ಅತ್ಯಂತ ಸಂತೋಷದಿಂದ ಸಮಯ ಕಳೆದಿದ್ದೇನೆ, ಎಂಬುದು ಅವರ ಮನದ ಮಾತು.
ಮೊನ್ನೆ ಏಕನಾಥ ಬೊಂಗಾಳೆಯವರು ನಿವೃತ್ತರಾ ದಾಗ, ಊರಿನ ಜನ ಕಣ್ಣಲ್ಲಿ ನೀರು ತುಂಬಿಸಿಕೊಂಡು ಅವರನ್ನು ಬೀಳ್ಕೊಟ್ಟ ಹೃದಯಸ್ಪರ್ಶಿ ಸಂದರ್ಭಕ್ಕೆ ನಾನು ಸಾಕ್ಷಿಯಾದೆ. ನಾಳೆಯಿಂದ ಈ ಮಾಸ್ತರರು ನಮ್ಮ ಶಾಲೆಗೆ ಬರುವುದಿಲ್ಲ ಎಂದರಿಯದ ಮಕ್ಕಳು ಟಾ ಟಾ ಹೇಳಿ ಕಳಿಸಿಕೊಟ್ಟರು.
ಶಿಕ್ಷಕರ ವೈದ್ಯಕೀಯ ಸೇವೆ!:
ಆರಂಭದ ದಿನಗಳಲ್ಲಿ ವಿದ್ಯಾರ್ಥಿಗಳ ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಶಾಲೆಯಲ್ಲಿಯೇ ಔಷಧಿ ತಂದಿರಿಸಿಕೊಂಡು ಏಕನಾಥ್ ಮಾಸ್ತರರು ಮದ್ದು ನೀಡುತ್ತಿದ್ದರು. ಕ್ರಮೇಣ ಊರಿನ ಜನರೂ ಸಣ್ಣಪುಟ್ಟ ಖಾಯಿಲೆಗಳಿಗೆ ಶಾಲೆಯಲ್ಲಿಯೇ ಔಷಧಿ ಪಡೆದು ಹೋಗುತ್ತಿದ್ದರು. ಸ್ಥಳೀಯ ಆರೋಗ್ಯ ಕಾರ್ಯಕರ್ತರನ್ನು ಶಾಲೆಗೆ ಕರೆಸಿ ಊರಿನವರಿ ಗೆಲ್ಲಾ ಚಿಕಿತ್ಸೆ ಕೊಡಿಸಿದರು. ಆರೋಗ್ಯದ ತೀವ್ರ ಸಮಸ್ಯೆಗಳಿದ್ದಾಗ ತಮ್ಮ ಪರಿಚಯದ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.
-ನಟರಾಜ ಅರಳಸುರಳಿ