ಒಂಬತ್ತು ತಿಂಗಳ ಪ್ರತೀಕ್ಷೆಯ ನಂತರ ಕೂಸೊಂದು ಕೈಗೆ ಬಂದಿತ್ತು. ಅದರ ಬೆಣ್ಣೆಯಂತಹ ಕೈ ಬೆರಳನ್ನು ನನ್ನ ಕೈ ಬೆರಳ ನಡುವೆ ಹಿಡಿದುಕೊಂಡಾಗ ಸಿಕ್ಕ ಅನುಭೂತಿ “ಈ ಜನುಮಕೆ ಇನ್ನೇನು ಬೇಡ ಇದೊಂದೇ ಸಾಕು’ ಅನ್ನುವ ಹಾಗಿತ್ತು. ಆರು ತಿಂಗಳವರೆಗೆ ಮಗುವಿನ ಲಾಲನೆ-ಪಾಲನೆಯಲ್ಲಿ ಹೊತ್ತು ಹೋಗಿದ್ದೇ ತಿಳಿಯಲಿಲ್ಲ. ನಿಜದ ಪರಿಸ್ಥಿತಿಯ ಅರ್ಥವಾಗಿದ್ದು ಆರು ತಿಂಗಳ ಬಳಿಕ ಅದು ಮಗುವಿಗೆ ಊಟ ಕೊಡಿಸುವಾಗ. ಅಲ್ಲಿಯ ತನಕ ಮೆಂತೆ ಗಂಜಿ, ಜೀರಿಗೆ ಗಂಜಿ, ಸೋರೆಕಾಯಿ ಪಲ್ಯ, ಹಲ್ವಾ , ಚೂರ್ಣ- ಹೀಗೆ ತಿಂದುಂಡು ಕೊಬ್ಬಿದ ದೇಹವನ್ನು ನನ್ನ ಮಗರಾಯ ಯಾವುದೇ ಜಿಮ್, ಏರೋಬಿಕ್ಸ್‌ಗಿಂತಲೂ ಬೇಗವಾಗಿ ಕರಗಿಸಿದ.
“”ನಿನಗೆ ಮೊದಲೇ ಹೇಳಿದ್ದೆ , ತಿಂಗಳಿಗೆ ಒಂದು ಅಗಳು ಎಂಬಂತೆ ಒಂದೊಂದೇ ಅಗಳು ಅನ್ನವನ್ನು ಮಗುವಿನ ಬಾಯಿಗೆ ಹಾಕು. ನೀನೆಲ್ಲಿ ಮಾತು ಕೇಳ್ತಿಯಾ?” ಎಂದು ಅಮ್ಮ ಅವರ ವರಾತ ಹಚ್ಚಿಕೊಂಡರು. ಆಗೆಲ್ಲಾ ಅಮ್ಮನಿಗೆ,
“”ಆರು ತಿಂಗಳ ತನಕ ಮಗುವಿಗೆ ತಾಯಿ ಎದೆಹಾಲು ಬಿಟ್ಟು ಬೇರೆ ಏನನ್ನೂ ಬಾಯಿಗೆ ಹಾಕಬಾರದು”’ ಎಂದು ಬರುತ್ತಿದ್ದ ಟೀವಿ ಜಾಹೀರಾತನ್ನು ತುಸು ಜಾಸ್ತಿಯೇ ವಾಲ್ಯೂಮು ಇಟ್ಟು ಕೇಳಿಸುತ್ತಿದ್ದೆ. “”ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲ. ನೀರು, ಹಸುವಿನ ಹಾಲು, ಅನ್ನ ಎಲ್ಲವನ್ನು ಕೊಡುತ್ತಿದ್ದೆವು. ನಿಮ್ಮ ತರಹ ನೂರೊಂದು ಕೊಡುವುದಕ್ಕೆ ನಮ್ಮ ಕೈಯಲ್ಲಿ ಆಗುತ್ತಿರಲಿಲ್ಲ, ಅದಕ್ಕೆಲ್ಲಾ ಸಮಯವೂ ಇರುತ್ತಿರಲಿಲ್ಲ. ನಾವು ತಿಂದಿದ್ದೇ ಮಕ್ಕಳಿಗೂ ಕೊಡುತ್ತಿದ್ದೆವು” ಅನ್ನುತ್ತಿದ್ದರು.
ಮಗುವನ್ನು ನೋಡಲು ಮನೆಗೆ ಬಂದವರೆಲ್ಲಾ “”ನೀನು ಅವಳ ಮಗುವನ್ನು ನೋಡಿದ್ದಿಯಾ ಎಷ್ಟು ಮುದ್ದಾಗಿದೆ ಗೊತ್ತಾ…? ಎತ್ತಿಕೊಳ್ಳುವುದಕ್ಕೆ ಆಗುವುದಿಲ್ಲ ಅಷ್ಟು ಭಾರವಿದೆ, ನೋಡುವುದಕ್ಕೂ ದಷ್ಟಪುಷ್ಟವಾಗಿದೆ” ಎಂದಾಗ ನನಗೋ ನನ್ನ ಈ ಸ್ವಲ್ಪ ಸಪೂರವಿರುವ ಮಗನನ್ನು ದಪ್ಪಮಾಡುವ ಹಂಬಲ. “”ನೀನು ಅದು ಕೊಡು, ಇದು ಕೊಡು, ಹಾಗೆ ತಿನ್ನಿಸು, ಹೀಗೆ ತಿನ್ನಿಸು” ಎಂಬುವವರ ಪುಕ್ಕಟೆ ಸಲಹೆ ಬೇರೆ. ಮಗು ಏನು ತಿಂದರೆ ದಪ್ಪಆಗುತ್ತೆ, ಅದಕ್ಕೆ ಯಾವ ಆಹಾರ ಕೊಟ್ಟರೆ ಪ್ರೀತಿಯಿಂದ ತಿನ್ನುತ್ತೆ ಎಂದು ಗೂಗಲ್ ಅಣ್ಣನ ಕೇಳಿದ್ದರೆ ಅವನೋ ನೂರೊಂದು ದಾರಿ ತೋರಿಸಿದ. ಇದೆಲ್ಲಾ ಹೋಗಲಿ ಎಂದು ನನಗಿಂತ ಮೊದಲು ಹೆತ್ತು ಅಮ್ಮನಾಗಿ ಬೀಗುತ್ತಿರುವವರಿಗೆ ಪೋನಾಯಿಸಿದರೆ, ಅಲ್ಲೂ ನಮ್ಮನೇಯದೇ ಗೋಳು. ಇನ್ನು ಕೆಲವರು, “”ರಾಗಿ ಮಣ್ಣಿ ಕೊಡು ಅದಕ್ಕೆ ಎಲ್ಲ ಧಾನ್ಯಗಳನ್ನು ಹಾಕಿ ಪುಡಿಮಾಡಿಟ್ಟುಕೊಂಡು ಹಾಲು ತುಪ್ಪಸೇರಿಸಿ ಬೇಯಿಸಿ ಕೊಡು” ಎಂದವಳೊಬ್ಬಳು. ಆಯ್ತು, ತಗೋ ಎಂದು ಮಾರನೇ ದಿನವೇ ಹೋಗಿ ರಾಗಿ, ಕಡಲೆ, ಹೆಸರು, ಬಾದಾಮಿ, ಅವಲಕ್ಕಿ , ಬಾರ್ಲಿಯನ್ನೆಲ್ಲಾ ತಂದು ಒಣಗಿಸಿ ಮೊಳಕೆ ಬರಿಸುವುದನ್ನೆಲ್ಲಾ ಬರಿಸಿ ಎರಡು-ಮೂರು ಬಿಸಿಲು ಕಾಯಿಸಿ ಪುಡಿಮಾಡಿಟ್ಟುಕೊಂಡು ಒಂದೇ ಒಂದು ತುಂಡು ಬೆಲ್ಲ ಹಾಕಿ ಮೇಲೆ ಒಂದು ಚಮಚ ತುಪ್ಪಹಾಕಿ ಮಗನ ಬಾಯಿ ಬಳಿ ಚಮಚ ಇಟ್ಟರೆ “ಪೂ…’ ಎಂದು ಉಗಿದೇ ಬಿಟ್ಟ.
ಮೊದಲನೇ ದಿನ ಅಲ್ವಾ ಏನೋ ಹದತಪ್ಪಿರಬೇಕು ಎಂದು ಸುಮ್ಮನಾದೆ! “”ಮಕ್ಕಳನ್ನು ಸಾಕುವುದು ಅಷ್ಟು ಸುಲಭವಲ್ಲ, ಒಂದು ವಾರ ಕೊಟ್ಟುನೋಡು” ಎಂದು ಪಕ್ಕದ ಮನೆಯವರದು ಮತ್ತದೇ ಬಿಟ್ಟಿ ಉಪದೇಶ. ಒಂದು ವಾರ ಅಲ್ಲ 15 ದಿನ ಆದರೂ ಮಗನ ಮುಷ್ಕರ ಮುಗಿಯಲಿಲ್ಲ. ಮತ್ತೂಬ್ಟಾಕೆ ಹೇಳಿದಳು, “”ನೀನ್ಯಾಕೆ ಮೊಳಕೆ ಬರಿಸಿದೆ. ಕೆಲವು ಮಕ್ಕಳು ಮೊಳಕೆ ಬರಿಸಿದ್ದು ತಿನ್ನಲ್ಲ. ಮೊಳಕೆ ಬರಿಸದೇ ಬರಿ ಕಾಳುಗಳನ್ನೇ ಸೇರಿಸಿ ಪುಡಿ ಮಾಡು”. ಸರಿ ತಗೋ ಇದನ್ನು ಒಮ್ಮೆ ನೋಡೆ ಬಿಡೋಣ ಎಂದು ಶುರುಮಾಡಿದೆ. ಸುತಾರಾಂ ಒಪ್ಪಲಿಲ್ಲ ನನ್ನ ಕುಮಾರ ಕಂಠೀರವ, ನಾಲ್ಕೈದು ಚಮಚ ತಿಂದು ಮತ್ತೆ ಬಾಯಿ ತೆರೆಯುತ್ತಿರಲಿಲ್ಲ. ಪುಡಿ ಮಾಡಿಟ್ಟುಕೊಂಡ ಕಾಳುಗಳೆಲ್ಲಾ ನನ್ನ ಹೊಟ್ಟೆ ಸೇರಿದವು! ಅಂಗಳದ ಚಂದಮಾಮ, ಕೊಟ್ಟಿಗೆಯ ಅಂಬಾ- ಬೂಚಿ, ಮೊಬೈಲ್‌ನ ಬೇಬಿ ರೈಮ್ಸ್, ಟೀವಿಯ ಟಾಮ್ ಆ್ಯಂಡ್ ಜರ್ರಿ ಯಾವುದೂ ತೋರಿಸಿದರೂ ಬಾಯಲ್ಲಿ ಊಟ ಮಾತ್ರ ಹಾಗೆ ಇರುತ್ತಿತ್ತು.
“”ಸಿರಿಲೆಕ್ಸ್ ತಿಂದರೆ ಮಕ್ಕಳು ಗುಂಡು ಗುಂಡಾಗುತ್ತವೆ ಕೊಡು ಏನಾಗಲ್ಲ. ಈಗ ಕೆಮಿಕಲ್ಸ್ ಇಲ್ಲದೇ ಇರುವುದು ಯಾವುದಿದೆ” ಎಂದು ಇನ್ನೋರ್ವ ಗೆಳತಿಯ ಸಂದೇಶ ಇನ್‌ಬಾಕ್ಸ್‌ಗೆ ಬಂದು ಬಿಡು¤. “”ಆಯ್ತು” ಅಂದೇ ಮಾರುಕಟ್ಟೆಗೆ ಹೋಗಿ ಸಿರಿಲೆಕ್ಸ್ ತಂದಾಯ್ತು. ಪ್ಯಾಕೆಟ್ ತೆಗೆದು ನೋಡಿದರೆ ನನಗೇನೆ ತಿನ್ನಬೇಕು ಅನ್ನಿಸುವ ಹಾಗೆ ಪರಿಮಳ ಬೀರುತ್ತಿತ್ತು. ಹದ ಬೆಚ್ಚಗಿನ ನೀರಿನಲ್ಲಿ ಗಂಟಿಲ್ಲದಂತೆ ಕಲಸಿ ಮಗನ ಮುಂದೆ ಹಿಡಿದರೆ ಅಲ್ಲೂ ಭ್ರಮನಿರಸನ. ಮೊದಲ ಒಂದು ಚಮಚ ಸಿಹಿ ಎಂದು ಬಾಯಿ ಚಪ್ಪರಿಸಿದ, ಎರಡನೇ ಚಮಚಕ್ಕೆ ಹೊಟ್ಟೆಯೊಳಗಿದ್ದ ಸಿರಿಲೆಕ್ಸ್ ಕೂಡ ಹೊರಗೆ ಬಂತು.
“”ಹಣ್ಣು ಕೊಟ್ಟು ನೋಡು” ಎಂದರು ಕೆಲವರು. ದಾಳಿಂಬೆ, ಸೇಬು, ಮೂಸಂಬಿ ಬಗೆಬಗೆ ಹಣ್ಣು ತಂದರೂ ಎರಡು ತುತ್ತು ತಿಂದು ಮತ್ತೆ ತೆಪ್ಪಗಾಗುತ್ತಿದ್ದ. “”ಇದೆಲ್ಲಾ ಹೋಗಲಿ ಇನ್ನು ಮುಂದೆ ಹಣ್ಣುಗಳ ಪ್ಯೂರಿ ಮಾಡಿ ಕೊಡು ಅದನ್ನು ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ ನೋಡು” ಎಂದು ನನ್ನ ದೂರದ ಸಂಬಂಧಿಕರೊಬ್ಬರು ಹೇಳಿದರು. ಬಾಳೆಹಣ್ಣು, ಚಿಕ್ಕು ಹಣ್ಣು , ಸೇಬು ಹಣ್ಣು ನಮ್ಮನೆಯಲ್ಲಿ ಅಲಂಕರಿಸಿಬಿಟ್ಟವು.
ಒಂದು ದಿನ ಸೇಬು ಹಣ್ಣಿನ ಪ್ಯೂರಿ ಮಾಡಿಕೊಟ್ಟರೆ, ಇನ್ನೊಂದು ದಿನ ಚಿಕ್ಕು ಹಣ್ಣನ್ನು ಕೊಡುತ್ತಿದ್ದೆ. ದಿನಾ ದಿನಾ ಟಾಯ್ಲೆಟ್ ಮಾಡುತ್ತಿದ್ದ ನನ್ನ ಮಗ ಈ ಹಣ್ಣುಗಳ ಪ್ಯೂರಿ ಯಾವುದೋ ಅವನ ಹೊಟ್ಟೆ ಪರಿಣಾಮ ಬೀರಿ ಎರಡು, ಮೂರು ದಿನ ಆದರೂ ಟಾಯ್ಲೆಟ್ ಮಾಡಲಿಲ್ಲ. ಮತ್ತೆ ಬಾಳೆಹಣ್ಣಿನ ಸರದಿ. ಒಂದು ಬಾರಿ ಅವನು ಟಾಯ್ಲೆಟ್ ಮಾಡಿದರೆ ಸಾಕು ಎಂದು ಪುಟ್ಟು ಬಾಳೆಹಣ್ಣಿನ ಗೊನೆಯನ್ನೇ ತಂದಿದ್ದಾಯಿತು. ಕೊನೆಗೆ ಬೆಚ್ಚಗಿನ ನೀರು ಕೂಡ ಕುಡಿಸಿದ್ದಾಯಿತು. ಹೇಗೋ ಕಷ್ಟಪಟ್ಟು ಕೊನೆಗೆ ನನ್ನ ಮಗ ಟಾಯ್ಲೆಟ್ ಮಾಡಿದ. ಇನ್ನು ಈ ಹಣ್ಣುಗಳ ಗುಣ-ಅವಗುಣ ಗೊತ್ತಿಲ್ಲದೇ ಮಗುವಿಗೆ ಕೊಡಬಾರದು ಎಂದು ಸುಮ್ಮನಾದೆ.
ಅವನಿಗೆ ಬೇಕಾಗುವಷ್ಟು ಅವನು ತಿನ್ನುತ್ತಿದ್ದ. ಆದರೆ ನನಗೆ ಮಾತ್ರ ಅವನು ಎಷ್ಟು ತಿಂದರೂ ಅದು ಕಡಿಮೆಯೇ ಅನಿಸುತ್ತಿತ್ತು. ಮತ್ತೆ ಮತ್ತೆ ಅವನ ಗಂಟಲಿಗೆ ಒಲ್ಲದ ಕಡುಬನ್ನು ತುರುಕಿದಂತೆ ಆಹಾರವನ್ನು ತುರುಕುತ್ತಿದ್ದೆ. ಕೊನೆಗೆ ಯಾರ ಮಾತೂ ಬೇಡ, ಅವನು ಎಷ್ಟು ತಿನ್ನುತ್ತಾನೋ ಅಷ್ಟು ತಿನ್ನಲಿ ಎಂದು ಸುಮ್ಮನಾಗುವ ಸರದಿ ನನ್ನದಾಗಿತ್ತು.
– ಪವಿತ್ರಾ ಶೆಟ್ಟಿ