ಬೆಂಗಳೂರು: ಮಕ್ಕಳಾಗಲಿಲ್ಲ ಎಂಬ ಕೊರಗಿನಿಂದ ಮನನೊಂದಿದ್ದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಶಾಲಾ ಕೊಠಡಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಮ್ಮಗೊಂಡನಹಳ್ಳಿಯಲ್ಲಿ ನಡೆದಿದೆ. ಚೆನ್ನೈ ಮೂಲದ ಸುಮತಿ (21) ಆತ್ಮಹತ್ಯೆ ಮಾಡಿಕೊಂಡವರು.
ಕಮ್ಮಗೊಂಡನಹಳ್ಳಿಯ ಅಶೋಕ್ ಇಂಟರ್‌ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸುಮತಿ ನ.20ರಂದು ಎಂದಿನಂತೆ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಂಜೆ ಎಲ್ಲ ಶಿಕ್ಷಕರು ಹೊರಡುವಾಗ ನನಗೆ ಸ್ವಲ್ಪ ಕೆಲಸವಿದೆ ಎಂದು ಹೇಳಿ ಅಲ್ಲಿಯೇ ಉಳಿದುಕೊಂಡು ತಾನು ಪಾಠ ಮಾಡುತ್ತಿದ್ದ ಎಲ್‌ಕೆಜಿ ಕ್ಲಾಸ್ ಕೊಠಡಿಯಲ್ಲಿ ಉಳಿದುಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ಯಾರೂ ಇಲ್ಲ ಎಂದುಕೊಂಡು ಶಾಲೆಯ ಗೇಟ್ ಬೀಗ ಹಾಕಿದ್ದಾರೆ.
ಬುಧವಾರ ಈದ್ ಮಿಲಾದ್ ಪ್ರಯುಕ್ತ ರಜೆ ಇದ್ದುದ್ದರಿಂದ ಯಾರೂ ಗಮನಿಸಿಲ್ಲ. ಗುರುವಾರ ಬೆಳಿಗ್ಗೆ 8.30ರ ಸುಮಾರಿಗೆ ಸ್ವತ್ಛತಾ ಸಿಬ್ಬಂದಿ ಹಾಗೂ ಮಕ್ಕಳು ಎಲ್‌ಕೆಜಿ ಕೊಠಡಿಯತ್ತ ತೆರಳಿದಾಗ ಶಿಕ್ಷಕಿ ಸುಮತಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಚೆನ್ನೈನಲ್ಲಿ ಇಂಟೀರಿಯರ್ ಡಿಸೈನರ್ ನಾಗರಾಜ್ ಎಂಬಾತನನ್ನು ಐದು ವರ್ಷಗಳ ಹಿಂದೆ ವಿವಾಹವಾಗಿದ್ದ ಸುಮತಿ, ಕೆಲ ಕಾಲ ಅಲ್ಲಿಯೇ ನೆಲೆಸಿದ್ದರು. ಬಳಿಕ ಕೆಲಸ ಸಿಕ್ಕಿದ್ದರಿಂದ ಬೆಂಗಳೂರಿಗೆ ಬಂದು ಒಂದು ವರ್ಷದಿಂದ ಅಶೋಕ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಕಮ್ಮಗೊಂಡನಹಳ್ಳಿಯಲ್ಲಿ ಮನೆ ಮಾಡಿಕೊಂಡು ಒಬ್ಬರೇ ವಾಸಿಸುತ್ತಿದ್ದರು. ಪತಿ ನಾಗರಾಜ್, ಆಗಾಗ ಬಂದು ಹೋಗುತ್ತಿದ್ದರು.
ವಿವಾಹವಾಗಿ ಐದು ವರ್ಷಗಳಾದರೂ ಮಕ್ಕಳಾಗಲಿಲ್ಲ ಎಂದು ಪೋಷಕರ ಬಳಿ ಹಲವು ಬಾರಿ ಹೇಳಿಕೊಂಡಿದ್ದ ಸುಮತಿ, ಅದೇ ಕಾರಣಕ್ಕೆ ಖನ್ನತೆಗೆ ಒಳಗಾಗಿದ್ದರು ಎಂದು ಅವರ ತಂದೆ ಪುರುಷೋತ್ತಮ್ ತೊಳಿಸಿದ್ದು, ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.