ದೀಪಾವಳಿ ಎಂದಾಗ ಪಟಾಕಿ, ಹಣತೆಗಳು ನೆನಪಾಗುವುದು ಸಾಮಾನ್ಯ. ದೀಪಾವಳಿ ಪ್ರತಿ ವರ್ಷ ಹೊಸತನ ತುಂಬುವ ಹಬ್ಬ. ಪ್ರತಿಯೊಬ್ಬರಿಗೂ ಕಾತುರದ ಹಬ್ಬ. ಯಾವುದೇ ಭೇದ ಭಾವವಿಲ್ಲದೆ ಸಂಭ್ರಮಿಸುವ ಹಬ್ಬ ದೀಪಾವಳಿ. ದೀಪಾವಳಿ ಸಮೀಪಿಸುತ್ತಿದ್ದಂತೆ ಹಲವರಿಗೆ ಹಬ್ಬ ಹೇಗೆ ಆಚರಿಸಬೇಕು ಎನ್ನುವ ಆಸೆ ಗರಿಗೆದರುವುದಕ್ಕೆ ಆರಂಭ. ಪ್ರತಿ ವರ್ಷ ದೀಪಾವಳಿ ಎಲ್ಲರ ಬದುಕಿನಲ್ಲಿಯೂ ಅಚ್ಚಳಿಯದ ನೆನಪುಗಳನ್ನು ಸೃಷ್ಟಿಸುತ್ತದೆ. ಪಟಾಕಿ, ಹಣತೆ ದೀಪಗಳ ಜೊತೆಗಿನ ದೀಪಾವಳಿ ಎಲ್ಲರಿಗೂ ಅಚ್ಚು ಮೆಚ್ಚು.
ದೀಪಾವಳಿಗೆ ವಾರ ಬಾಕಿ ಇರುವಾಗಲೇ ನಮ್ಮ ಕಾಯುವಿಕೆ ಆರಂಭ. ಹಬ್ಬದ ಮೂರು ದಿನವೂ ಹಿಂದೂ ಸಂಸ್ಕೃತಿಯಲ್ಲಿ ವಿಶೇಷ ಆಚರಣೆಗಳು ನಡೆಯುತ್ತದೆ. ಅದೆಷ್ಟೇ ಆಧುನಿಕತೆ ಸೋಗು ನಮ್ಮ ಹಬ್ಬಗಳಿಗೆ ಸೋಕಿದರೂ ದೀಪಾವಳಿ ಹಬ್ಬ ಇಂದಿಗೂ ಹಳೆತನದ ಬೇರಿನ ಜೊತೆಗೆ ಹೊಸತನದ ಸೊಗಡನ್ನು ಸಾಗಿಕೊಂಡು ಮುಂದೆ ಸಾಗುತ್ತಿರುವುದು ಖುಷಿಯ ವಿಚಾರ.
ದೀಪಾವಳಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬ ಮಾತ್ರವಲ್ಲ, ಅದೊಂದು ಹಲವು ಕುಟುಂಬಗಳ ಸಂಭ್ರಮದ ದಿನ. ನನಗೆ ದೀಪಾವಳಿ ಎಂದಾಗ ಮೊದಲು ನೆನಪಾಗುವುದು ಪಟಾಕಿ ಸದ್ದು, ಅಕ್ಕಂದಿರ ಜೊತೆಗಿನ ಹುಸಿ ಮುನಿಸು, ಸುರು ಸುರು ಕಡ್ಡಿಯ ಪ್ರಿಯರಾಗಿರುವ ನಮ್ಮ ಮನೆಯಲ್ಲಿ ಪಟಾಕಿ ದೀಪಾವಳಿಗೆ ಅಪರೂಪ ಎನ್ನುವ ಅತಿಥಿ. ಆದರೆ, ಊರಿನ ಕೆಲವು ಮನೆಯಲ್ಲಿನ ಪಟಾಕಿ ಸದ್ದು ಪ್ರತಿ ವರ್ಷ ದೀಪಾವಳಿ ದಿನ ಕಿವಿಗೆ ಬೀಳುತ್ತಿರುತ್ತದೆ. ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸುವುದೇ ಊರಿನ ಕೆಲವು ಮನೆಗಳಲ್ಲಿ ಕೇಳಿಸುವ ಪಟಾಕಿ ಸದ್ದು.
ಇದನ್ನೂ ಓದಿ:ದೀಪಾವಳಿಯು ಸ್ವದೇಶಿ ಚಿಂತನೆಯ ದೀಪೋತ್ಸವವಾಗಲಿ
ದೀಪಾವಳಿ ಮನೆ ಮಂದಿಗೆಲ್ಲ ರಜೆ ಸಿಗುತ್ತಿದ್ದ ದಿನ. ಅಪ್ಪನಿಗೆ ಬೋನಸ್ ಸಿಗುವ ದಿನ ಕೂಡ. ಬಾಲ್ಯ ದಿಂದಲೂ ಅಪ್ಪನ ಬೋನಸ್ ಗಿಂತ ಹೆಚ್ಚಾಗಿ ನನ್ನ, ಅಕ್ಕಂದಿರ ಕಣ್ಣು ಬೋನಸ್ ಜೊತೆ ಇರುವ ಸ್ವೀಟ್ ಬಾಕ್ಸ್ ಕಡೆ. ಸ್ವೀಟ್ ಗಳ ಹಂಚಿಕೆಯಲ್ಲಿ ವ್ಯತ್ಯಾಸವಾದರೆ ಕೆಲವೊಮ್ಮೆ ಮಿನಿ ಸಮರವೇ ನಡೆಯುತಿತ್ತು.
ಅಪ್ಪ ಅದೇಷ್ಟೇ ಮೇಣದ ಬತ್ತಿ, ಹಣತೆ ತಂದರೂ ಮತ್ತೆ ಮತ್ತೆ ದೀಪಗಳು ಬೇಕು ಎಂದೆನಿಸುವ ಹಬ್ಬ ದೀಪಾವಳಿ. ವರ್ಷಕೊಮ್ಮೆ ಮನೆಯ ಎದುರು ಸಿಂಗಾರಗೊಳ್ಳುವ ಗೂಡು ದೀಪ. ಸಂಜೆ ಹಣತೆಗೆ ದೀಪ ಹಚ್ಚುವ ಸಮಯದಲ್ಲಿ ಅಕ್ಕಂದಿರ ಜೊತೆಗಿನ ಅದೇ ಹುಸಿ ಮುನಿಸು ಮತ್ತೆ ರಾಜಿ ಸಂಧಾನ. ಇದು ಮನೆಯಲ್ಲಿ ಪ್ರತಿ ವರ್ಷ ತಪ್ಪದ ದೀಪಾವಳಿಯ ದಿನಚರಿ.
ವರ್ಷದ ಪ್ರತಿ ದಿನ ಕೆಲಸದಲ್ಲಿ ಮಗ್ನರಾಗಿ ಇರುವ ಅಮ್ಮನಿಗೆ ದೀಪಾವಳಿ ಕೊಂಚ ವಿರಾಮದ ದಿನ. ಮೂರು ದಿನ ಕೆಲವು ಕೆಲಸಗಳಿಂದ ಅವಳಿಗೆ ಬಿಡುವು. ದೀಪಾವಳಿ ಕೆಲವು ಕಾರಣಗಳಿಂದ ಅಮ್ಮನಿಗೆ ಅತಿ ಖುಷಿ ಕೊಡುವ ದಿನ ಕೂಡ ಹೌದು. ಅಮ್ಮ ಮಕ್ಕಳಂತೆ ಬಹು ಪ್ರೀತಿಸುವ ಗೋವುಗಳ ಪೂಜೆ ಅವಳಿಗೆ ಇಷ್ಟದ ಕೆಲಸ. ಹೊಸ ಬಟ್ಟೆ ತೆಗೆದುಕೊಂಡು ಖುಷಿ ಹಂಚಿಕೊಳ್ಳುವ ಸ್ನೇಹಿತರು, ನಾವು ಹೊಸ ಬಟ್ಟೆ ತೆಗೆದುಕೊಂಡಿಲ್ಲ ಎನ್ನುವ ಬೇಸರ ಬಾಲ್ಯದ ದಿನಗಳಲ್ಲಿ.
ಬಾಲ್ಯದಲ್ಲಿ ಬಲಿ ಪಾಡ್ಯಮಿ ದಿನ ಅಣ್ಣ, ಮಾವಂದಿರ ಜೊತೆ ಗದ್ದೆಗೆ ಹೂವು ಹಾಕಲು ಹೋಗುತ್ತಿದ್ದದ್ದು, ಸಂಜೆ ತುಳಸಿ ಕಟ್ಟೆ, ಮನೆಯ ಜಗುಲಿಯ ತುಂಬೆಲ್ಲ ಹಚ್ಚುವ ಹಣತೆ, ಮೇಣದ ಬತ್ತಿಗಳು. ಅಕ್ಕಂದಿರ ಜೊತೆಗೆ ಗದ್ದೆ ಪೂಜೆಗೆ ತೆಗೆದುಕೊಂಡು ಬರುವ ಕಾಡು ಹೂವುಗಳು, ಮನೆಯಲ್ಲಿನ ಆಯುಧ, ಗಾಡಿ ಪೂಜೆ. ಚಿಕನ್ ಸಾರು, ಸ್ವೀಟ್, ಗೊಡ್ಡಿಟ್ಟು, ಪಟಾಕಿ, ಸುರುಸುರು ಬತ್ತಿ, ಗೋವು ಪೂಜೆ ಇವು ಎಂದಿಗೂ ದೀಪಾವಳಿಗೆ ಮಾಸದ ನೆನಪುಗಳು ಹಾಗೂ ಪ್ರತಿ ವರ್ಷ ಹಬ್ಬದ ದಿನ ತಪ್ಪದ ದಿನಚರಿ.
ಇತ್ತೀಚೆಗೆ ಹಬ್ಬಗಳ ಜಮಾನ ಫಾರ್ವಡ್ ಸಂದೇಶಗಳ ನಡುವೇನೆ ಮುಳುಗಿ ಹೋಗುತ್ತಿದೆ. ಈ ನಡುವೆ ಕೂಡ ದೀಪಾವಳಿ ಹಬ್ಬ ಅಷ್ಟಕ್ಕೇ ಮಾತ್ರ ಸೀಮಿತವಾಗಿಲ್ಲ ಅನ್ನುವುದು ಖುಷಿ ಸಂಗತಿ. ಹಬ್ಬದ ದಿನ ಅದೆಷ್ಟೇ ಜನರ ಸಾಮಾಜಿಕ ಜಾಲತಾಣಗಳ ಸ್ಟೇಟಸ್ ಗಳಲ್ಲಿ ದೀಪಗಳ ಫೋಟೋ, ಹಬ್ಬಗಳ ಸಂದೇಶ ರಾರಾಜಿಸಿದರೂ ಕೂಡ, ಪ್ರತಿ ಮನೆಗಳಲ್ಲಿ ಹಬ್ಬದ ದಿನ ದೀಪಗಳ ಸಾಲು ಬೆಳಗುತ್ತದೆ. ದೀಪಾವಳಿಗೆ ಧರ್ಮಗಳ ಹಂಗಿಲ್ಲ. ಆಸ್ತಿಕ, ನಾಸ್ತಿಕರ ಹಬ್ಬ ಎನ್ನುವ ತಾರತಮ್ಯವಿಲ್ಲ. ಎಲ್ಲರೂ ಮೆಚ್ಚುವ, ಪ್ರತಿಯೊಬ್ಬರ ನೆಚ್ಚಿನ ಬೆಳಕಿನ ಹಬ್ಬ ಕಟ್ಟಿಕೊಡುವ ನೆನಪುಗಳಿಗೆ ಸರಿಸಾಟಿ ಬೇರೆ ಯಾವುದಿಲ್ಲ.
ದೀಪಾವಳಿ ಪ್ರತಿಯೊಬ್ಬರೂ ಬದುಕಿಗೆ ಬೆಳಕಿನ ಆಗಮನದ ನಿರೀಕ್ಷೆ ಹೊಂದುವ ದಿನ. ಬೆಳಕಿನ ಹಬ್ಬದಿಂದ ನೆಮ್ಮದಿ, ಆರೋಗ್ಯ ಜೀವನ ನಮ್ಮದಾಗಬೇಕು ಎಂದು ಬಯಸುವ ದಿನ. ಸಡಗರ, ಸಂಭ್ರಮ ತರುವ ದೀಪಗಳ ಹಬ್ಬ ಎಲ್ಲರಿಗೂ ಒಳಿತಾಗುವಂತೆ ಇರಲಿ. ಹಬ್ಬದ ಆಚರಣೆ, ಪಟಾಕಿ ಹಚ್ಚುವ ಉತ್ಸಾಹದಲ್ಲಿ ಮೈ ಮರೆಯದಿರೋಣ. ಅರ್ಥಪೂರ್ಣವಾಗಿ ಹಬ್ಬ ಆಚರಿಸೋಣ. ಪರಿಸರಕ್ಕೆ, ಜೀವಕ್ಕೆ ಹಾನಿಯಾಗದ ರೀತಿಯಲ್ಲಿ ನಮ್ಮ ಹಬ್ಬಗಳ ಸಂಭ್ರಮ ಇರಲಿ. ಅಂಧಕಾರ ಓಡಿಸಿ, ಬೆಳಕನ್ನು ತರುವ ದೀಪಗಳ ಹಬ್ಬಗಳ ಪ್ರತಿಯೊಬ್ಬರ ಬದುಕಿಗೆ ಹೊಸತನದ ಹುರುಪನ್ನು ತರಲಿ.
ನವ್ಯಶ್ರೀ ಶೆಟ್ಟಿ
ತೃತೀಯ ಬಿ. ಎ (ಪತ್ರಿಕೋದ್ಯಮ ವಿಭಾಗ), ಎಂಜಿಎಂ ಕಾಲೇಜು ಉಡುಪಿ