Advertisement

ಬಾಲ್ಯದ ನೆನಪೇ ಅತೀ ಮಧುರ

04:54 PM Jul 19, 2021 | Team Udayavani |

ಬಾಲ್ಯದ ನೆನಪೆಂದರೆ ಶಾಲೆಯಲ್ಲಿ ನಡೆದ ಘಟನೆಗಳೇ ಮನಸ್ಸಿನಲ್ಲಿ ಚಿರವಾಗಿರುವುದು. ನಾನು ಕಲಿತದ್ದು ಸರಕಾರಿ ಶಾಲೆಯಲ್ಲಿ. ಆದ್ದರಿಂದ ಸಣ್ಣ ಪುಟ್ಟ ಕ್ಷಣಗಳೂ ನೆನಪುಗಳೇ. ಖಾಸಗಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗಿಂತ ಹೆಚ್ಚು ಮಧುರ ಕ್ಷಣಗಳು ಸರಕಾರಿ ಶಾಲೆಗಳಲ್ಲಿ ಓದಿರುವ ವಿದ್ಯಾರ್ಥಿಗಳಿಗಿರುತ್ತವೆ ಎನ್ನುವುದು ತಪ್ಪಲ್ಲ. ಹೇಳಿ ಕೇಳಿ ಸರಕಾರಿ ಶಾಲೆಯಲ್ಲಿ ಓದಿರುವ ವಿದ್ಯಾರ್ಥಿಗಳಲ್ಲವೇ. ಶಿಕ್ಷಕರು ಎಷ್ಟೇ ಬೈದರೂ ಹೊಡೆದರೂ ಅದು ನಮಗೆ ಅವಮಾನವೆಂದು ಎಂದೂ ಅಂದುಕೊಂಡಿದ್ದಿಲ್ಲ. ಆ ಪೆಟ್ಟು ದೇಹದಿಂದ ಎಷ್ಟು ಬೇಗ ದೂರವಾಗುತ್ತಿತ್ತೋ ಅಷ್ಟೇ ಬೇಗ ಮನಸ್ಸಿನಿಂದಲೂ ದೂರವಾಗಿ ಬಿಡುತ್ತಿತ್ತು.

Advertisement

ಆಗಿನ ಬಾಲ್ಯದ ನೆನಪು ಬಹುಶಃ ಈಗಿನ ಮಕ್ಕಳಿಗೆ ಸಿಗುವುದಿಲ್ಲ. ತರಗತಿಯಲ್ಲಿ ಪಾಠ ನಡೆಯುತ್ತಿರುವಾಗಲೇ ನಮ್ಮ ಬಾಯಿಗೆ, ಹೊಟ್ಟೆಗೆ ಕೆಲಸವಿರುತ್ತಿತ್ತು. ಮಾವಿನಕಾಯಿ, ಹುಣಸೆಹಣ್ಣು ಇವೆಲ್ಲವನ್ನೂ ಬಾಯಿ ಚಪ್ಪರಿಸಿ ತಿನ್ನುತ್ತಿದ್ದೆವು. ಮಾತು ಬಿಡುವುದು, ಜಗಳವಾಡುವುದು ಇವೆಲ್ಲವನ್ನೂ ಈಗ ನೆನಪಿಸಿಕೊಂಡರೆ ಎಷ್ಟು ಚಿಕ್ಕ ವಿಷಯಕ್ಕೆ ಜಗಳವಾಡುತ್ತಿದ್ದೆವೆಂದು ನಗುಬರುತ್ತದೆ. ಸಾಯಂಕಾಲ ಘಂಟೆಯ ಸದ್ದು ಮೊಳಗುವ ಐದು ನಿಮಿಷ ಮೊದಲೇ ನಮ್ಮ ಬ್ಯಾಗ್‌ ಮನೆಗೆ ಓಡಲು ತಯಾರಾಗಿ ನಿಂತಿರುತ್ತಿತ್ತು.  ಶಾಲೆಯ ಗೇಟಿನಿಂದ ಹೊರಬೀಳುತ್ತಿದ್ದಂತೆ ಅಂಗಡಿಯಿಂದ ಬರುವ ಕರಿದ ತಿಂಡಿಗಳ ಘಮ ಘಮ ಪರಿಮಳ ನಮ್ಮನ್ನು ಕರೆಯುತ್ತಿತ್ತು. ಆ ಸಮಯದಲ್ಲಿ ಒಂದೆರಡು ರೂ. ಸಿಕ್ಕರೂ ಅದೇ ಖುಷಿ. ಚಿಕ್ಕವರಿದ್ದಾಗ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಹುರುಪು, ಉತ್ಸಾಹ ಈಗ ಮರೆಯಾಗಿದೆ. ಯಾರಾದರೂ ಬಾಲ್ಯ ಸ್ನೇಹಿತರು ಅಪರೂಪಕ್ಕೆ ಸಿಕ್ಕಾಗ, ಆ ದಿನಗಳು ಮತ್ತೆ ಮರುಕಳಿಸಬಾರದೇ ಎಂದೆನಿಸುತ್ತದೆ. ಸಮಯ ಎನ್ನುವುದು ಎಷ್ಟು ಬೇಗ ಕಳೆಯಿತೆಂದು ಅನಿಸುತ್ತದೆ.

ಬಾಲ್ಯದ ಆಟ, ಪಾಠ ಎಲ್ಲ ಕ್ಷಣವೂ ಒಮ್ಮೊಮ್ಮೆ ನೆನಪಾದಾಗಲೆಲ್ಲ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡುತ್ತದೆ. ಮೊಬೈಲ್‌ನಲ್ಲಿ ಬರುವ ಆನ್‌ಲೈನ್‌ ಆಟಗಳು ಕಣ್ಣಾಮುಚ್ಚಾಲೆ, ಲಗೋರಿ ಇಂತಹ ಆಟಗಳಿಗೆ ಎಂದೂ ಸರಿಸಾಟಿ ಅಲ್ಲ.  ಆಗ ಕಲಿತಿದ್ದು ಈಗಲೂ ಹಚ್ಚೆಯಂತೆ ಅಳಿಸದೇ ಮನಸ್ಸಿನಲ್ಲಿದೆ. ಎಲ್ಲ ಸ್ನೇಹಿತರೂ ಬೇರೆ ಬೇರೆ ಉನ್ನತ ವ್ಯಾಸಂಗ, ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೆಲವರನ್ನು ಅಪರೂಪಕ್ಕೆ ನೋಡಿದಾಗ ಅವರು ಯಾರೆಂದು ಗುರುತು ಹಿಡಿಯುವುದೇ ಕಷ್ಟವಾಗಿ ಬಿಡುತ್ತದೆ.

 

ಸುವರ್ಣಾ ಹೆಗಡೆ

Advertisement

ಎಸ್‌.ಡಿ.ಎಂ. ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next