Advertisement

Childhood Days Memories: ಆಧುನಿಕತೆಗೆ ಮರೆಯಾದ ಬಾಲ್ಯ

03:16 PM Feb 15, 2024 | Team Udayavani |

ಜನ ಮರುಳೋ ಜಾತ್ರೆ ಮರುಳೋ, ಎಲ್ಲಿ ನೋಡಿದರು ನಾ ಮುಂದು ತಾ ಮುಂದು ಎನ್ನುವ ಹಾಗೆ ಆಧುನಿಕತೆಗೆ ಮರುಳಾಗಿರುವ ಈ ಕಾಲದಲ್ಲಿ ನಾವು ಕಳೆದ ಆ ಬಾಲ್ಯದ ದಿನಗಳ ನೆನಪುಗಳು ಮಾತ್ರ ಅಮರ.

Advertisement

ಇತ್ತೀಚಿನ ದಿನಗಳಲ್ಲಿ ನಾವೆಲ್ಲ ಕೈಗೊಂಬೆಯಂತೆ ಆಡುತ್ತಿದ್ದೇವೆ ಎಂದರೆ ತಪ್ಪಿಲ್ಲ. ಹೇಗೆ ಅನ್ನುತ್ತೀರ! ಅಷ್ಟೆಲ್ಲಾ ಯೋಚಿಸಬೇಡಿ ಅದುವೇ ಜಂಗಮ (ಮೊಬೈಲ್‌). ಈ ಬೊಂಬೆಯಾಟಕ್ಕೆ ಬೀಳದವರಾರೂ ಇಲ್ಲ. ಸಣ್ಣ ಮಕ್ಕಳಿಂದ ಹಿಡಿದು ಹಿರಿ ವಯಸ್ಸಿನವರೂ ಈ ಗೊಂಬೆಯ ಆಟದಿಂದ ತಪ್ಪಿಸಿಕೊಂಡಿಲ್ಲ.

ಪ್ರಸ್ತುತ ಎಷ್ಟೋ ಮಕ್ಕಳ ಬಾಲ್ಯದ ಕ್ಷಣಗಳು ಈ ಉಪಕರಣದಿಂದ ಮಾಸಿ ಹೋಗುತ್ತಿವೆ ಎಂದರೆ ತಪ್ಪಿಲ್ಲ. ಮುಂಜಾವಿನಿಂದ ಇಳಿಸಂಜೆವರೆಗೂ, ನಿದ್ದೆಯಲ್ಲೂ ಈ ಕೈಗೊಂಬೆಯದ್ದೇ ಕನವರಿಕೆ. ಅಷ್ಟರ ಮಟ್ಟಿಗೆ ಅವಲಂಬಿತವಾಗಿದೆ.

ಸ್ವಲ್ಪ ಹಿಂದಕ್ಕೆ ಹೋದರೆ ಸಾಕು ನಾವು ಕಳೆದ ಆ ದಿನಗಳು ಇನ್ನು ಎಂದಾದರು ಮರುಕಳಿಸಿತೇ? ಬೆಳಗ್ಗೆ ಎದ್ದು ದೈನಂದಿನ ದಿನಚರಿ ಮುಗಿಸಿ ಅಮ್ಮ ಪ್ರೀತಿಯಿಂದ ಮಾಡಿಟ್ಟ ತಿಂಡಿ ತಿಂದು ಹೊರಟರೆ ಮತ್ತೆ ಹಸಿವಿನ ನೆನಪೇ ಆಗದು. ಇಡೀ ದಿನ ಮಣ್ಣಿನಲ್ಲಿ ಮನೆ ಕಟ್ಟುವುದು, ಮರದಲ್ಲಿ ಮರಕೋತಿ ಆಟ, ಕಣ್ಣಾಮುಚ್ಚಾಲೆ, ಕಳ್ಳ-ಪೊಲೀಸ್‌, ಹಿಡಿಯುವಾಟ, ರತ್ತೋ ರತ್ತೋ ಹೀಗೆ ಅದೆಷ್ಟು ಆಟಗಳನ್ನು ಆಡುತ್ತಿದ್ದೆವು, ಸುಸ್ತಾಗಿದ್ದೇ ಇಲ್ಲ.

ಅಯ್ಯೋ ಕತ್ತಲಾಯಿತಲ್ಲ ಎಂದು ಮನೆಕಡೆ ನಡೆಯುವುದರ ಜತೆಗೆ ಕೈಯಲ್ಲಿ ಬೆತ್ತ ಹಿಡಿದು ಹಿಟ್ಲರ್‌ನಂತೆ ನಿಂತಿರುತ್ತಿದ್ದ ಅಮ್ಮನ ಓಲೈಸಲು ಉಪಾಯಗಳ ಮಾಲೆಯನ್ನೇ ಹೆಣೆಯುತ್ತಿದ್ದೆವು. ಆದರೆ ಬೀಳುತ್ತಿದ್ದ ಪೆಟ್ಟು ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದರಲ್ಲೂ ಎನೋ ಒಂದು ರೀತಿಯ ಹಿತ ಇತ್ತು. ಆ ಮುಗ್ದ ಪ್ರೀತಿ, ಕಾಳಜಿ ಇನ್ನು ನೋಡಲು ಸಾಧ್ಯವಿಲ್ಲ.

Advertisement

ಮಗು ಅತ್ತರೆ, ಕೋಪ ಬಂದರೆ, ಊಟ ಮಾಡದಿದ್ದರೆ ನಾವು ಕೇಳುತ್ತಿದ್ದ ಅಮ್ಮನ ಲಾಲಿ ಹಾಡು, ಅಜ್ಜಿಯ ಕಥೆ, ಕೋಪ ಬಂದರೆ ಗುಮ್ಮನ ಭಯ ಈಗ ಕಣ್ಮರೆಯಾಗಿ ಎಷ್ಟೋ ಕಾಲವಾಗಿದೆ. ಬರೀ ಮೊಬೈಲ್‌ ಒಂದೇ ಪರಿಹಾರ ಎನ್ನುವಂತಾಗಿದೆ.

ಆಧುನಿಕತೆಯ ಒಲವು, ಕೆಲಸದ ಒತ್ತಡ ಎಲ್ಲವನ್ನೂ ಕಣ್ಮರೆಯಾಗಿಸಿದೆ. ಮಕ್ಕಳ ಮನಸ್ಸು ಎಷ್ಟು ವಿಚಲಿತವಾಗಿದೆ ಎಂದರೆ ತಮ್ಮನ್ನು ತಾವು ನಿಯಂತ್ರಿಸದಷ್ಟು, ಸಣ್ಣ ಪುಟ್ಟ ವಿಷಯಗಳಿಗೆ ಮನಸ್ತಾಪ, ಆತ್ಮಹತ್ಯೆ ಹೀಗೆ ಇನ್ನೂ ಹಲವು ಮಾನಸಿಕ ಖನ್ನತೆಗೆ ಒಳಗಾಗುವಷ್ಟು ಅದೆಷ್ಟೋ ಮುಗ್ಧ ಜೀವಗಳು ಬಲಿಯಾಗುತ್ತಿವೆ.

ಜೀವನದಲ್ಲಿ ಎಲ್ಲವೂ ಸಾಧ್ಯ ಆದರೆ ಮರೆಯಾದ ಆ ಬಾಲ್ಯದ ದಿನಗಳು, ನಾವು ಕಲಿತ ವಿದ್ಯೆ ಯಾವತ್ತೂ ಮರುಕಳಿಸಲು ಸಾಧ್ಯವಿಲ್ಲ. ಎಲ್ಲರ ಜೀವನದಲ್ಲಿ ಬಾಲ್ಯದ ನೆನಪುಗಳು ಬಹಳಷ್ಟಿವೆ ಆದರೆ ಕುಳಿತೊಮ್ಮೆ ಯೋಚಿಸದಾಗ ಅದೇಕೆ ನಾವು ಇಷ್ಟು ಬೇಗ ದೊಡ್ಡವರಾದೆವು ಅನ್ನುವ ಪ್ರಶ್ನೆ ಕಾಡುತ್ತವೆ. ಅದೇ ಈಗಿನ ಕಾಲದ ಮಕ್ಕಳನ್ನು ನೋಡಿದರೆ ನಾವೇ ವಾಸಿ ಅನ್ನುವಷ್ಟು ತೃಪ್ತಿಯೂ ನಮ್ಮಲ್ಲಿದೆ.

-ಕಾವ್ಯ ಪ್ರಜೇಶ್‌

ಪೆರುವಾಡ್‌, ಕುಂಬಳೆ

 

Advertisement

Udayavani is now on Telegram. Click here to join our channel and stay updated with the latest news.

Next