Advertisement

ಬಾಲಲೀಲೆಯ ಪ್ರಸಂಗವು

06:00 AM Aug 03, 2018 | Team Udayavani |

ಬಾಲ್ಯವೆಂದರೆ ಅದೇನು ಚೆಂದ ! ಆಗ ತಿಳಿಯದ ಅದರ ಮಹತ್ವ ಈಗ ತಿಳಿಯುತ್ತಿದೆ. ಆಡಿದ್ದೇ ಆಟ, ಮಾಡಿದ್ದೇ ತರಲೆ ಕೆಲಸಗಳು, ಕಣ್ಣ ಮುಂದೆ ನೆನಪನ್ನು ತರಿಸುತ್ತಲೇ ಇರುತ್ತವೆ. ಆಗ ತಾನೇ ಚಿಕ್ಕ ವಯಸ್ಸು . ಮಳೆಗಾಲದಲ್ಲಿ ಬಿಡದ ಮಳೆ ಅಬ್ಟಾ! ವಾರಗಟ್ಟಲೆ ಸುರಿಯುತ್ತಿತ್ತು. ಜಡಿಮಳೆ ಎಂದು ಸುಮ್ಮನೆ ಕೂರುವುದಿಲ್ಲ. ಮಣ್ಣಿನಲ್ಲಿ ಆಟವಾಡುತ್ತ ಪ್ರಕೃತಿಯ ಸೊಬಗು ಬಹಳ ಖುಷಿಕೊಡುತ್ತಿತ್ತು. ಮಳೆಗಾಲದಲ್ಲಿ ಅಂಗಳದ ಮೇಲೆ ಹಾಸಿಡುವ ತೆಂಗಿನಗರಿಗಳು ಒಂದೆಡೆಯಾದರೆ, ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಕೆಲವೊಮ್ಮೆ ಬಿದ್ದು ಓಡುವುದೇ ಒಂದು ಸಂಭ್ರಮ. ಛತ್ರಿ ಇದ್ದರೂ ಮಳೆಯಲ್ಲಿ ನೆನೆಯುವುದು, ಅದಕ್ಕಾಗಿ ಅಮ್ಮನಿಂದ  ಒಂದಿಷ್ಟು  ಬೈಗುಳ. ಚಳಿಗೆ ಒಣಗಿಸಿದ ಹಲಸಿನ ಹಪ್ಪಳ, ಹಲಸಿನ ಬೀಜ, ಮಾವಿನ ಹಣ್ಣಿನ ಸಿಪ್ಪೆ, ಗೇರುಬೀಜ ಸುಟ್ಟು ತಿನ್ನುತ್ತಿದ್ದೆವು. ಅದಕ್ಕಾಗಿ ತಂಗಿಯು ಗಲಾಟೆ ಮಾಡಿದಾಗ ಅಮ್ಮ ನಮ್ಮನ್ನು ಹೊಡೆಯಲು ಒಳಗಿನಿಂದ ಸೌಟು ತರುವ ಮುಂಚೆ ಅಲ್ಲಿಂದ ಕಾಲು ಕೀಳುತ್ತಿದ್ದೆವು. ಚಳಿಗಾಲಕ್ಕೆಂದೇ ಅಮ್ಮ ಕೊಟ್ಟಿಗೆಗೆ ಎಂದು ಬೇರೆಯೇ ತಂದಿದ್ದ ತರಗಲೆಯನ್ನೇ ಸ್ವಲ್ಪ ತೆಗೆದುಕೊಂಡು ಬೆಳಗ್ಗೆ ಒಲೆ ಮಾಡಿ ಚಳಿ ಕಾಯಿಸುತ್ತಿದ್ದೆವು. ಅದೇ ರೀತಿ ಜಾತ್ರೆಯ ಸಮಯದಲ್ಲಿ ಆಟಿಕೆ ವಸ್ತು ತೆಗೆದುಕೊಡಲು ಹಠ ಮಾಡುತ್ತಿದ್ದ ಆ ಸಮಯವನ್ನು ನೆನೆಸಿಕೊಂಡರೆ ಈಗಲೂ ನಗೆಯನ್ನು ತರಿಸುತ್ತದೆ.

Advertisement

ಅಂಗನವಾಡಿಯ ಆ ದಿನದ ನೆನಪಂತೂ ಮರೆಯಲು ಸಾಧ್ಯವೇ ಇಲ್ಲ. ಶಾಲೆಗೆ ಹೋಗಲು ಮನಸ್ಸಿಲ್ಲದೆ  ಪೊದೆಗಳ ನಡುವೆ ಅಡಗಿ ಕುಳಿತದ್ದು , ಅದಕ್ಕಾಗಿ ಅಮ್ಮ ಕೋಲು ಹಿಡಿದು ಗದರಿಸಿ ಕಳುಹಿಸಿದ್ದು,  ನಮ್ಮೂರು ಸಮೀಪದಲ್ಲಿಯೇ ನಾನು ಪ್ರಾಥಮಿಕ ವ್ಯಾಸಂಗ ಮಾಡಿದ್ದು, ಅಲ್ಲದೆ ಆಗಿನ ಮೇಷ್ಟ್ರುಗಳು ಇಂದಿಗೂ ನೆನಪಾಗುತ್ತಾರೆ. ಆಗಿನ ಆಟ ಒಂದೇ ಎರಡೇ. ಅಡಿಕೆ ಹಾಳೆಯಲ್ಲಿ ಕುಳಿತು ಎಳೆಯುವ ಆ ಗೆಳೆಯರ ಗುಂಪಿನ ಮಜಾವೇ ಬೇರೆ. ನಾವು ನಾಲ್ಕು ಮಂದಿ ಗೆಳೆಯರು ಒಟ್ಟಾಗಿ ಶಾಲೆಗೆ ಹೋಗುತ್ತಿದ್ದೆವು. ದಾರಿ ಮಧ್ಯೆ ಲೂಟಿ-ತರಲೆಗಳನ್ನು ಮಾಡುತ್ತ, ಕಾಡಂಚಿನ ಮಧ್ಯದ ದಾರಿ, ಹಕ್ಕಿಗಳ ಕಲರವ, ನವಿಲುಗಳ ನರ್ತನ, ಕಾಡುಕೋಳಿಯ ಆ ಗಾಯನಗಳು ಬಹಳ ಮುದ ನೀಡುತ್ತಿದ್ದವು. ದಾರಿಯಲ್ಲಿ ಮರಳಿನ ಮೇಲೆ ತಮ್ಮ ಹೆಸರುಗಳನ್ನು ಬರೆಯುವುದು, ಕೆಸರಾಟ, ಕ್ಲಾಸ್‌ ಮಧ್ಯೆ ಪಾಠ ಬೋರಾದಾಗ ಬ್ಯಾಗ್‌ನಲ್ಲಿ ತುಂಬಿಸಿದ್ದ ಹಲಸಿನ ಬೀಜ ತಿನ್ನುವುದು, ಕಾಗದದ ದೋಣಿಯಾಟ, ದಾರಿ ಮಧ್ಯೆ ಸಿಗುತ್ತಿದ್ದ ಸಣ್ಣ ಸಣ್ಣ ತೋಡುಗಳಲ್ಲಿ ಬಿಡುವ ಆ ಆಟ, ನೇರಳೆಹಣ್ಣು, ಮಾವಿನ ಹಣ್ಣು ಕೊಯ್ಯಲು ಹೋಗಿ ತೋಟದ ಮಾಲೀಕ ನಮ್ಮನ್ನು ಬೆನ್ನಟ್ಟುವಾಗಿನ ದಿನಗಳು, ಬೇಸಿಗೆ ರಜೆ ಬಂದಾಗ ಅಜ್ಜಿ ಮನೆಗೆ ಹೋಗುವಾಗಿನ ಖುಷಿ, ಅಜ್ಜಿ ಹೇಳುತ್ತಿದ್ದ ಕತೆಗಳು. ಆಗಿನ ಆ ಸಂಭ್ರಮವೇ ನಮಗೊಂಥರ ಹಬ್ಬವಾಗುತ್ತಿತ್ತು. 

ಇನ್ನು ಹಬ್ಬಗಳ ಸಮಯದಲ್ಲಿ ಆಡುವ ದಿನಗಳೇ ಬೇರೆ. ದೀಪಾವಳಿ ಬಂದಾಗ ಎಣ್ಣೆ ಸ್ನಾನ, ಗೋಪೂಜೆ, ಇದಕ್ಕಾಗಿ ಹೂವುಗಳನ್ನು ತರಲು ಕಾಡಿಗೆ ಹೋಗುವುದು, ಪಟಾಕಿ ಸಿಡಿಸುವ ಸಂಭ್ರಮ, ಒಂದಿಷ್ಟು ಬಗೆಯ ತಿಂಡಿತಿನಿಸುಗಳು, ಆಹಾ! ಬಾಯಲ್ಲಿ ನೀರೂರಿಸುತ್ತವೆ. ಈಗ ಬಾಲ್ಯ ಕಳೆದಿದೆ. ಆದರೆ, ಉಳಿದಿರುವುದು ಅಂದರೆ ಆ ಬಾಲ್ಯದ ಸಿಹಿನೆನಪು ಮಾತ್ರ. ಈ ನೆನಪುಗಳೇ ಆಗಾಗ ಮರೀಚಿಕೆಯಂತೆ ನೆನಪಿಸಿ ಮನಸ್ಸನ್ನೂ ಮೃದುವಾಗಿ ನೇವರಿಸುತ್ತವೆ. ಓ ಬಾಲ್ಯವೇ, ನೀ ಮತ್ತೇ ಬರುವಂತಿದ್ದರೆ ಎಷ್ಟೋ ಚೆನ್ನ . ಬಾಲ್ಯದ ಸ್ಮತಿಕೋಶ ಬಿಚ್ಚಿಕೊಂಡಂತೆ ಮನಸ್ಸು ಆಹ್ಲಾದಗೊಳ್ಳುತ್ತದೆ. ಬದುಕಿನ ಉತ್ಸಾಹವೂ ಇಮ್ಮಡಿಗೊಳ್ಳುತ್ತದೆ. ಬಾಲ್ಯವೇ ನೀನೆಷ್ಟು ಚೆಂದ ಅಂತ ಅನಿಸುತ್ತದೆ. 

ಆದರೆ, ಪ್ರಸ್ತುತದಲ್ಲಿ ಬಾಲ್ಯ ಎನ್ನುವುದಕ್ಕೆ  ಅರ್ಥವೇ ಇಲ್ಲದಂತಾಗಿದೆ. ಕೂಸು ಹುಟ್ಟುವ ಮುಂಚೆಯೇ ಪ್ರತಿಷ್ಠಿತ ಶಾಲೆಗಳಿಗೆ ಬುಕ್ಕಿಂಗ್‌ ಮಾಡುವ ಈ ಕಾಲದಲ್ಲಿ ಬಾಲ್ಯವನ್ನೇ ನೋಡದ ಮಕ್ಕಳು ಅವೆಷ್ಟೋ ಇದ್ದಾರೆ. ಅದೊಂದು ಬೇಸರದ ಸಂಗತಿ. ಬಾಲ್ಯದಲ್ಲಿ ಸಿಗುವಂಥ ಗೋಲಿ, ಚೆಂಡು, ಬುಗುರಿ, ಮರಕೋತಿ ಆಟಗಳು ಅಲ್ಲದೆ ಎಳವೆಯಲ್ಲಿಯೇ ಸಿಗುವ ಗೆಳೆಯರು, ತರಲೆಗಳು, ಉತ್ತಮ ಪಾಠಗಳು ಎಲ್ಲಿಯೂ ಸಿಗಲಾರವು. ಮಗುವಿನ ಎಲ್ಲ  ಘಟ್ಟದಲ್ಲೂ  ಬಾಲ್ಯಜೀವನ ಅನ್ನೋದು ಬಹಳ ಮಹತ್ವವಾದದ್ದು. ಈ ಬಾಲ್ಯದ ಜೀವನವೇ ಬಹಳಷ್ಟು ಪಾಠವನ್ನು ಮಕ್ಕಳಿಗೆ ಕಲಿಸಿಕೊಡುತ್ತದೆ. ಅದನ್ನು ಮಿಸ್‌ ಮಾಡದಿರಿ.       

ಮೋಹನ ಕಾನರ್ಪ
ಪತ್ರಿಕೋದ್ಯಮ ವಿಭಾಗ ಎಸ್‌ಡಿಎಂ ಕಾಲೇಜು, ಉಜಿರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next