Advertisement

ಬೇಕೇ ಬೇಕು… : ಕೇಳಿದ್ದನ್ನೆಲ್ಲಾ ಕೊಡಿಸುವುದೇ ಪ್ರೀತಿಯಾ?

06:14 PM Feb 10, 2021 | Team Udayavani |

ವರ್ಷಗಳ ಹಿಂದಿನ ಮಾತು. ನಮ್ಮ ಹತ್ತಿರದ ಸಂಬಂಧಿಕರ ಪುಟ್ಟ ಮಗಳು ಶಾಲೆಗೆ ಹೋಗುತ್ತಿದ್ದಳು. ಓದಿನಲ್ಲಿ, ಆಟದಲ್ಲಿ ಆಕೆಗೆ ಆಸಕ್ತಿ ಇತ್ತು ನಿಜ. ಆದರೆ, ದಿನಾಲೂ ಒಂದಿಲ್ಲೊಂದು ವಸ್ತುಗಳನ್ನು ಶಾಲೆಯಲ್ಲಿ ಕಳೆದುಕೊಂಡು ಬಂದು, ಮತ್ತೆ ಹೊಸ ವಸ್ತುಗಳನ್ನು ಕೊಡಿಸುವಂತೆ ತಾಯಿಯನ್ನು ಪೀಡಿಸುತ್ತಿದ್ದಳು. ಆ ವಸ್ತುವನ್ನು ತಗೊಂಡು ಹೋಗದಿದ್ದರೆ, ಕ್ಲಾಸ್‌ಗೆ ಸೇರಿಸುವುದಿಲ್ಲ ಎಂದೂ ಹೇಳುತ್ತಿದ್ದಳು. ಹಾಗಾಗಿ, ಕೊಡಿಸದೇ ವಿಧಿಯಿರಲಿಲ್ಲ. ಹಾಗಂತ ಪ್ರತಿವಾರವೂ ಹೊಸ ಹೊಸ ವಸ್ತುಗಳನ್ನು ಕೊಡಿಸಲು ಸಾಧ್ಯವೆ? ಮಗಳು ಪದೇಪದೆ ಪೆನ್ಸಿಲ್‌, ರಬ್ಬರ್‌, ಶಾರ್ಪನರ್‌, ಕ್ರೆಯಾನ್ಸ್ಗಳನ್ನು ಕಳೆದುಕೊಂಡು ಬರುವುದು ತಾಯಿಗೆ ತಲೆನೋವಾಗಿ ಪರಿಣಮಿಸಿತ್ತು. ಬೇಸತ್ತ ತಾಯಿ ಒಂದು ದಿನ ಮಗಳಿಗೆ ಎಚ್ಚರಿಕೆ ಕೊಟ್ಟಳು. “ದಿನಾಲೂ ಶಾಲೆಯಿಂದ ಬಂದ ತಕ್ಷಣ ಬ್ಯಾಗ್‌ನಲ್ಲಿರುವ ಪೆನ್ಸಿಲ್ ರಬ್ಬರ್‌, ಶಾರ್ಪನರ್‌ ಮತ್ತು ಕ್ರೆಯಾನ್ಸ್ ಗಳನ್ನು ತಪ್ಪದೇ ತೋರಿಸಬೇಕು, ಕಳೆದುಕೊಂಡು ಬಂದರೆ ಹೊಸ ವಸ್ತುಗಳನ್ನು ಕೊಡಿಸುವುದಿಲ್ಲ; ಬದಲಾಗಿ,ಶಾಲೆಗೇ ಬಂದು ಟೀಚರ್‌ ಬಳಿ ದೂರುಕೊಡುವೆ’ ಅಂದರು! ಅಕಸ್ಮಾತ್‌ ತಾಯಿ ಏನಾದರೂ ಶಾಲೆಗೇ ಬಂದರೆ, ಟೀಚರ್‌ಗಳು ತನಗೇ ಬಯ್ಯುವುದು ಗ್ಯಾರಂಟಿ ಎಂಬುದನ್ನು ತಕ್ಷಣ ಅರ್ಥಮಾಡಿಕೊಂಡ ಮಗಳು, ಅವತ್ತಿನಿಂದ ದಿನಾಲೂ ತಪ್ಪದೆ ವಸ್ತುಗಳನ್ನು ತೋರಿಸತೊಡಗಿದಳು. ಹೀಗೆ, ಕಳೆದುಕೊಂಡು ಬರುವ ಅಥವಾ ಶಾಲೆಯಲ್ಲಿ ಎಲ್ಲೋ ಇಟ್ಟು ಮರೆತು ಬರುವ ಪದ್ಧತಿ ಕೊನೆಗೊಂಡಿತು.

Advertisement

ಒಂದು ಕೇಳಿದ್ರೆ ಎರಡು ಕೊಡಿಸೋದು! :

ಈಗಿನ ಪಾಲಕರು, ಮಕ್ಕಳು ಕೇಳುವ ಮೊದಲೇ ಅವರಿಗೆ ಬೇಕಿರುವುದು ಮತ್ತು ಬೇಡದ್ದು ಎರಡನ್ನೂ ತಂದುಕೊಡುತ್ತಾರೆ.  ನಾವು ಓದುತ್ತಿದ್ದ ದಿನಗಳಲ್ಲಂತೂ ಹೆಚ್ಚು ಪೆನ್‌, ಪೆನ್ಸಿಲ್, ನೋಟ್‌ಬುಕ್‌ ತಗೊಳ್ಳುವ ಅನುಕೂಲ ಇರಲಿಲ್ಲ. ನಮ್ಮ ಮಕ್ಕಳಿಗೆ ಅಂಥಾ ಕೊರತೆ ಕಾಡಬಾರದು ಎನ್ನುತ್ತಾ ಸಮರ್ಥನೆಯನ್ನೂ ಮಾಡಿಕೊಳ್ಳುತ್ತಾರೆ. ಅದೇ ಪೋಷಕರು ಮಾಡುತ್ತಿರುವ ತಪ್ಪು. ವಾಸ್ತವವಾಗಿ, ವರ್ಷದುದ್ದಕ್ಕೂ 4-5 ಪೆನ್ಸಿಲ್ ಅಷ್ಟೇ ಸಂಖ್ಯೆಯ ರಬ್ಬರ್‌, ಒಂದು ಶಾರ್ಪನರ್‌, ಒಂದು ಕ್ರೆಯಾನ್‌ ಬಾಕ್ಸ್ ಇದ್ದರೆ ಸಾಕು. ಆದರೆ ಪಾಲಕರು ಡಜನ್‌ಗಟ್ಟಲೆ ವಸ್ತುಗಳನ್ನು ತಂದಿಟ್ಟಿರುತ್ತಾರೆ. ಮೊದಲಿಗೆ ಒಂದೊಂದು ವಸ್ತುವನ್ನು ಮಕ್ಕಳಿಗೆ ಕೊಡುತ್ತಾರೆ ಸರಿ; ಎಕ್ಸ್ಟ್ರಾ ಆಗಿ ಉಳಿದಿರುವ ವಸ್ತುಗಳನ್ನು ಎಲ್ಲಿ ಇಡಲಾಗಿದೆ ಎಂದು ಮಕ್ಕಳಿಗೂ ತೋರಿಸಿಬಿಟ್ಟಿರುತ್ತಾರೆ! ತನಗೆ ಅಗತ್ಯವಿರುವ ವಸ್ತು ಎಕ್ಸ್ಟ್ರಾ ರೂಪದಲ್ಲಿ ಮನೆಯಲ್ಲೇ ಇದೆ ಎಂದು ತಿಳಿದಾಗ, ಈಗಾಗಲೇ ತನ್ನಲ್ಲಿರುವ ವಸ್ತುವನ್ನು ಜೋಪಾನ ಮಾಡಿಕೊಳ್ಳದೇ ಇದ್ದರೂನಡೆಯುತ್ತದೆ ಎಂಬ ಭಾವನೆ ಮಗುವಿನ ಮನಸ್ಸಿಗೆ ಬಂದುಬಿಡುತ್ತದೆ. ಅಷ್ಟೆ: ಆ ನಂತರದಲ್ಲಿ ಮಕ್ಕಳ ಪೆನ್ನು, ಪೆನ್ಸಿಲ್, ರಬ್ಬರ್‌… ಇತ್ಯಾದಿಗಳು ಹಾಳಾಗುವುದು ಸಾಮಾನ್ಯವಾಗುತ್ತದೆ. ಅವರು, ಪಾಲಕರಿಗೆ ಹೇಳದೆಯೇಹೊಸದನ್ನು ಪ್ಯಾಕೆಟ್‌ನಿಂದ ಒಡೆದು ಉಪಯೋಗಿಸಲು ಪ್ರಾರಂಭಿಸುತ್ತಾರೆ. ಪರಿಣಾಮ; ಸ್ಟಾಕ್‌ ಇದ್ದ ವಸ್ತುಗಳು ತಿಂಗಳೊಪ್ಪತ್ತಿನಲ್ಲಿ ಮಾಯವಾಗಿರುತ್ತವೆ. ಮತ್ತೆ ಬೇಕು ಎಂದು ಮಕ್ಕಳು ಹಟ ಹಿಡಿದಾಗ ಮಾತ್ರ,

ಏಕ ರೂಪದಲ್ಲಿ ಇಡಲಾಗಿದ್ದ ವಸ್ತುಗಳೆಲ್ಲಾ ಖಾಲಿಯಾಗಿವೆ ಎಂಬ ಅರಿವು ಪಾಲಕರದಾಗುತ್ತದೆ. ಅಲ್ಲಿಯವರೆಗೂ ಎಷ್ಟಿತ್ತು? ಹೇಗೆ ಖಾಲಿಯಾಯಿತು? ಎಂಬುದು ಗೊತ್ತೇ ಆಗಿರುವುದಿಲ್ಲ.

ವರ್ಷ ಪೂರ್ತಿ ಬಳಸಬೇಕಿತ್ತು… : 30 ವರ್ಷದ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳಿ. ಆಗೆಲ್ಲಾ ಪೆನ್ನು, ಪೆನ್ಸಿಲ್, ನೋಟ್‌ಬುಕ್‌ನಂಥ ವಿಚಾರಕ್ಕೆ ಹಠ ಮಾಡುವಂತಿರಲಿಲ್ಲ. ಪಾಲಕರು ಕೊಡಿಸಿದ ವಸ್ತುಗಳನ್ನು ಅವಿನ್ನು ಉಪಯೋಗಕ್ಕೆ ಬರಲ್ಲ ಎನ್ನುವವರಿಗೆ ಬಳಸಲೇಬೇಕಿತ್ತು. ಜೂನ್‌ ತಿಂಗಳಲ್ಲಿ ಅಗತ್ಯವಿರುವ ಪೆನ್‌, ಪೆನ್ಸಿಲ್‌ ಮುಂತಾದ ವಸ್ತುಗಳನ್ನು ಕೊಡಿಸಿದರೆ ಮುಗಿಯಿತು; ಮತ್ತೆ ದಸರಾ ರಜೆ ಕಳೆದ ನಂತರ ಅಥವಾ ಮುಂದಿನ ಜೂನ್‌ನಲ್ಲಿ ಶಾಲೆ ಆರಂಭದ ಸಮಯದಲ್ಲಿ ಹೊಸದಾಗಿ ಶಿಕ್ಷಣ ಸಾಮಗ್ರಿಗಳನ್ನು

Advertisement

ಖರೀದಿಸಲಾಗುತ್ತಿತ್ತು. ಅವುಗಳನ್ನು ಮಕ್ಕಳು ಕಳೆದುಕೊಂಡು ಬರುತ್ತಿದ್ದ ಉದಾಹರಣೆಗಳು ತುಂಬಾ ಕಡಿಮೆ. ಜೊತೆಗೆ ವರೈಟಿ, ವರೈಟಿ ವಸ್ತುಗಳನ್ನು ಉಪಯೋಗಿಸಬೇಕೆಂಬ ಹಟವೂ ಮಕ್ಕಳಿಗೆ ಇರಲಿಲ್ಲ. ಮೇಲಾಗಿ ಆಗಿನ ಪಾಲಕರು ಎಷ್ಟು ಬೇಕೋ ಅಷ್ಟನ್ನು ಮಾತ್ರ ತಂದುಕೊಡುತ್ತಿದ್ದರು. ವರ್ಷಕ್ಕೆ ಇಂತಿಷ್ಟೇ ಎಂಬ ಕಟ್ಟುನಿಟ್ಟು ಇದ್ದುದರಿಂದ ವಸ್ತುಗಳ ಉಪಯೋಗ ಮತ್ತು ರಕ್ಷಣೆ ಸರಿಯಾಗಿಯೇ ಆಗುತ್ತಿತ್ತು.

ಕಾಲ ಬದಲಾದಂತೆ… :

ಕಾಲ ಬದಲಾದಂತೆ ಪಾಲಕರ ಮನಸ್ಥಿತಿಯೂ ಬದಲಾಗಿದೆ. ಮಕ್ಕಳು ಬೇಡಿದೆಲ್ಲವನ್ನು ಕೊಡಿಸುವುದು ತಮ್ಮ ಧರ್ಮ ಎಂದು ಈಗಿನ ಪಾಲಕರು ಭಾವಿಸಿದ್ದಾರೆ. ಕೇಳಿದ್ದನ್ನು ಮಾತ್ರವಲ್ಲ, ಕೇಳದೆ ಇದ್ದುದನ್ನೂ ಕೊಡಿಸುತ್ತಿದ್ದಾರೆ. ಹೀಗೆ ಮಾಡದಿದ್ದರೆ ಪೋಷಕರಿಗೆ ತಮ್ಮ ಮೇಲೆ ಪ್ರೀತಿ ಇಲ್ಲ ಎಂದು ಮಕ್ಕಳು ಭಾವಿಸಬಹುದು ಎಂದೆಲ್ಲಾ ಯೋಚಿಸುತ್ತಾರೆ. ಒಂದು ಸಂಗತಿ ಎಲ್ಲ ಪೋಷಕರಿಗೆ ತಿಳಿದಿರಬೇಕು. ಮಕ್ಕಳಿಗೆ ಯಾವುದೇ ವಸ್ತುವಿನ ಅಗತ್ಯ, ಅದಕ್ಕಿರುವ ಬೆಲೆ, ಆ ಹಣ ಸಂಪಾದಿಸಲು ಆಗುವ ಶ್ರಮಹಾಗೂ ದುಡಿಮೆಯ ಮಹತ್ವವನ್ನು ತಿಳಿಸಿಕೊಡಬೇಕು. ಹೀಗೆ ಮಾಡದೇ ಹೋದರೆ ಮಕ್ಕಳು ಹಠಮಾರಿಗಳಾಗಿ ಬದಲಾಗಿಬಿಡಬಹುದು. ಹಾಗೇನಾದರೂ ಆಗಿಬಿಟ್ಟರೆ ಮನೆಯ ನೆಮ್ಮದಿ ಹಾಳಾಗುತ್ತದೆ. ಮಾತ್ರವಲ್ಲ, ಮಕ್ಕಳ ಭವಿಷ್ಯದ ಮೇಲೂ ಅದು ಪರಿಣಾಮ ಬೀರುತ್ತದೆ.­

 

-ಮಾಲಾ ಮ ಅಕ್ಕಿಶೆಟ್ಟಿ, ಬೆಳಗಾವಿ

Advertisement

Udayavani is now on Telegram. Click here to join our channel and stay updated with the latest news.

Next