ಬಾಲ್ಯದ ದಿನಗಳು ಎಂದಿಗೂ ಅವಿಸ್ಮರಣೀಯ, ಆಗಿನ ಆಟ ಪಾಠ, ಅಜ್ಜಿ ಮನೆಯ ನೆನಪು ಎಂದಿಗೂ ಮರೆಯಲಾಗದಂತಹ ಭಾವನೆಗಳು. ಶಾಲೆಗೆ ರಜೆ ಬಂತೆಂದರೆ ಅಜ್ಜಿಯ ಮನೆಗೆ ಹೋಗಿ ಅಜ್ಜ, ಅಜ್ಜಿಯ ಜತೆ ಕೂತು ಹರಟೆ ಹೊಡೆಯುತ್ತಾ, ಸಂಜೆಯಾಗುತ್ತಿದ್ದಂತೆ ಬಿಸಿ ಬಿಸಿ ಚಾ, ತಿನ್ನಲು ಅಜ್ಜಿ ಭರಣಿಯಲ್ಲಿಟ್ಟ ತಿಂಡಿ ಎಲ್ಲದರ ಜತೆಗೆ ಅಜ್ಜನ ಕಥೆ ಹೀಗೆ ದಿನ ಕಳೆದದ್ದೆ ತಿಳಿಯುತ್ತಿರಲಿಲ್ಲ.
ಬೆಳಿಗ್ಗೆ ಆಗುವುದೇ ತಡ ತಿಂಡಿ ತಿಂದು ಆಚೆ ಮನೆ ಈಚೆ ಮನೆ ಸುತ್ತಿ ಎಲ್ಲರೊಂದಿಗೆ ಆಟವಾಡಿ ಹಾಗೇ ಊರು ಕೇರಿ ಸುತ್ತಿ ಆಟವಾಡುತ್ತಾ ಇದ್ದರೆ ಸಂಜೆಯಾಗುವುದು ತಿಳಿಯುವುದೆಲ್ಲಿಗೆ. ಇಲ್ಲಿ ನಮ್ಮದೆ ದರ್ಬಾರು. ಹೇಳುವವರಿಲ್ಲ, ಕೇಳುವವರಿಲ್ಲ. ಆದರೆ ಇವೆಲ್ಲಾ ಈಗಿನ ಮಕ್ಕಳಿಗೆ ಬಲು ಅಪರೂಪ. ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಅವರ ಜೀವನ. ನಾವು ಸಣ್ಣವರಿದ್ದಾಗ ದೊಡ್ಡ ಕುಟುಂಬ ಮನೆಯವರೆಲ್ಲಾ ಒಟ್ಟಿಗೆ ಇರುತ್ತಿದ್ದರು. ನಾವು ಬೆಳೆಯುತ್ತಾ ಬೆಳೆಯುತ್ತಾ ಸಂಬಂಧಗಳು ಕ್ಷೀಣಿಸುತ್ತಾ ಬಂದವು. ಈಗಂತೂ ಚಿಕ್ಕ ಕುಟುಂಬಗಳೇ ಜಾಸ್ತಿ.
ಆದರೆ ನಮ್ಮ ಬಾಲ್ಯದ ನೆನಪುಗಳು ಮಾತ್ರ ನಮ್ಮ ಜೀವನದುದ್ದಕ್ಕೂ ಸಾಕ್ಷಿಯಾಗಿರುತ್ತದೆ. ಈಗಲೂ ನಾವು ಆಟವಾಡಿದ ಆಟಿಕೆ ಮನೆಯ ಅಟ್ಟದಲ್ಲಿ ಸಿಗುವಾಗ ಆ ಆಟಿಕೆಯ ಹಿಂದೆ ನಮಗೆ ಒಂದು ದೊಡ್ಡ ಕಥೆಯೇ ಇರುತ್ತದೆ. ಆಗ ಹಾಕುತ್ತಿದ್ದ ಬಟ್ಟೆಗಳನ್ನು ಇನ್ನು ಇಟ್ಟುಕೊಳ್ಳುವವರು ಇದ್ದಾರೆ. ಅದರ ಜತೆ ನಮಗೆ ಎಂದಿಗೂ ಒಂದು ಭಾಂದವ್ಯವಿರುತ್ತದೆ. ಮನೆಯಲ್ಲಿ ಅಕ್ಕ, ತಂಗಿ, ತಮ್ಮ ಹೀಗೆ ಹತ್ತಾರು ಮಕ್ಕಳು ಅವರ ಜಗಳ ಸುಧಾರಿಸಲು ಮನೆಯವರೆಲ್ಲಾ ಬರಬೇಕಿತ್ತು. ಸ್ವಲ್ಪ ಹತ್ತಿನ ಬಳಿಕ ಅವರೆಲ್ಲಾ ಒಂದೇ ಅವರ ಮಧ್ಯೆ ಹೋದವರು ಕೆಟ್ಟರು ಎಂದೇ ಲೆಕ್ಕ.
ನನ್ನ ಬಾಲ್ಯವೂ ಹಾಗೇ ತುಂಬಾ ಸುಂದರವಾಗಿತ್ತು. ಅದರಲ್ಲಂತೂ ಅಜ್ಜನೊಂದಿಗೆ ಕಳೆದ ನೆನಪು ಎಂದಿಗೂ ಮರೆಯಲು ಸಾಧ್ಯವಿಲ್ಲ ಆಗ ಅವರು ಬೆಣ್ಣೆ ಬಿಸ್ಕತ್ತು ತಿನ್ನಲು ಕದ್ದು ಮುಚ್ಚಿ ನೀಡುತ್ತಿದ್ದ ಹಣ, ಅದನ್ನು ನಾನು ಅಮ್ಮನಿಗೂ, ಅಕ್ಕನಿಗೂ ತೋರಿಸದೆ ಮೆಲ್ಲಗೆ ತಿನ್ನುತ್ತಿದ್ದದ್ದು, ಸಂಜೆಯಾಗುತ್ತಿದ್ದಂತೆ ನಾನು ಅಕ್ಕ ಅಜ್ಜನೊಂದಿಗೆ ಭಗವದ್ಗೀತೆ ಕೇಳುವುದು ಹೀಗೆ ವಿವರಿಸುತ್ತಾ ಹೋದರೆ ವರ್ಣೀಸಲು ಸಾಧ್ಯವಿಲ್ಲದಷ್ಟು ನೆನಪುಗಳಿವೆ. ಎಲ್ಲರಿಗೂ ಅವರವರ ಬಾಲ್ಯ ಒಂದು ರೀತಿಯ ವಿಶೇಷ ನೆನಪುಗಳೊಂದಿಗೆ ಬೇಸುಗೆಗೊಂಡಿರುತ್ತದೆ. ಅದನ್ನು ನೆನದಾಗಲೆಲ್ಲಾ ಮೊಗದಲ್ಲಿ ಮಂದಹಾಸ ಮೂಡುತ್ತದೆ.
ರಮ್ಯಾ ಆರ್. ಭಟ್
ಎಸ್‌ಡಿಎಂ ಕಾಲೇಜು ಹೊನ್ನಾವರ