ಮಂಗಳೂರು: ನಗರದ ಕುಂಟಿಕಾನ ಸಮೀಪ ಬಾರ್ ಆ್ಯಂಡ್ ರೆಸ್ಟೋರೆಂಟ್ ಉದ್ಘಾಟನೆಗೆ ಶಾಲಾ ಮಕ್ಕಳಿಂದ ವಿರೋಧ ಎದುರಾದ ಕಾರಣ, ಕಾರ್ಯಕ್ರಮದಲ್ಲಿ ಭಾಗವಹಿಸದೆ ಮೇಯರ್ ನಿರ್ಗಮಿಸಿದ ಘಟನೆ ಗುರುವಾರ ನಡೆದಿದೆ. ಶಾಲೆಯಿಂದ 100 ಮೀಟರ್ ಅಂತರ ಕಾಪಾಡದೆ ಬಾರ್ ತೆರೆಯಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದರು.
ಗುರುವಾರ ಮೇಯರ್ ಕವಿತಾ ಸನಿಲ್ ಅವರು ಬಾರ್ ಆ್ಯಂಡ್ ರೆಸ್ಟೋರೆಂಟ್ ಅನ್ನು ಉದ್ಘಾಟಿಸಲಿದ್ದರು. ಆದರೆ ಅನತಿ ದೂರದಿಂದಲೇ ಪ್ರತಿಭಟನೆಯನ್ನು ಕಂಡು, ಕಾರು ನಿಲ್ಲಿಸಿ ವಿದ್ಯಾರ್ಥಿಗಳಿಂದ ಮೊದಲು ಅಹವಾಲು ಸ್ವೀಕರಿಸಿದರು. “ಇಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಆರಂಭಿಸಕೂಡದು’ ಎಂದು ವಿದ್ಯಾರ್ಥಿಗಳು ಮನವಿ ಮಾಡಿದಾಗ, “ಈ ವಿಚಾರ ತಿಳಿದಿರಲಿಲ್ಲ. ವಿರೋಧದ ಬಗ್ಗೆ ನನಗೆ ಈಗ ಗಮನಕ್ಕೆ ಬಂದಿದೆ’ ಎಂದು ಮೇಯರ್ ಹೇಳಿದರು.
ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, “ನಾವು ಕಾನೂನು ಪ್ರಕಾರ ಬಾರ್ ಆರಂಭಿಸುತ್ತಿದ್ದೇವೆ ಎಂದು ಮಾಲಕರು ಹೇಳುತ್ತಿದ್ದಾರೆ. ಆದರೆ ಬಾರ್ ಶಾಲೆಯ 100 ಮೀ. ವ್ಯಾಪ್ತಿಯ ಒಳಗಡೆ ಇದೆ ಎಂದು ಶಾಲೆಯವರು ಆರೋಪಿಸುತ್ತಿದ್ದಾರೆ.
ಸತ್ಯಾಸತ್ಯ ಏನು ಎಂಬುದು ನನಗೆ ಈಗ ತಿಳಿದಿಲ್ಲ. ಸಂಬಂಧಪಟ್ಟ ಇಲಾಖೆಯವರು ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕಿದೆ. ಹೀಗಾಗಿ ಇಲ್ಲಿ ಸ್ವಲ್ಪ ಮಟ್ಟಿನ ಗೊಂದಲ ಉಂಟಾಗಿರುವುದು ನಿಜ. ಅದು ಬಗೆಹರಿಯದೆ ನಾನು ಉದ್ಘಾಟನೆ ನಡೆಸುವುದು ಸರಿ ಅಲ್ಲ ಎಂದು ತೀರ್ಮಾನಿಸಿದ್ದೇನೆ’ ಎಂದರು.
ಮೇಯರ್ ತೆರಳಿದ ಬಳಿಕ ಉಳಿದ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆ ಕಾರ್ಯಕ್ರಮ ಜರಗಿತು. ಶಾಲೆಯ ರಕ್ಷಕ, ಶಿಕ್ಷಕ ಸಂಘದ ಪ್ರತಿನಿಧಿ ಜಾಸ್ಮಿನ್ ಡಿ’ಸೋಜಾ ಸುದ್ದಿಗಾರರ ಜತೆಗೆ ಮಾತನಾಡಿ, “ಶಾಲೆ ಸಮೀಪ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯುತ್ತಿರುವುದರ ವಿರುದ್ಧ ಅಬಕಾರಿ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇವೆ.
ಯಾರಿಂದಲೂ ನ್ಯಾಯ ಸಿಕ್ಕಿಲ್ಲ. ಹೀಗಾಗಿ ನಾವು ಹೋರಾಟ ಮಾಡಿದ್ದೇವೆ’ ಎಂದರು.
“ನಾವು ಕಾನೂನು ಪ್ರಕಾರವೇ ಲೈಸೆನ್ಸ್ ಪಡೆದು ಬಾರ್ ಆ್ಯಂಡ್ ರೆಸ್ಟೋರೆಂಟ್ ಆರಂಭಿಸುತ್ತಿದ್ದೇವೆ. ಸಂಬಂಧಪಟ್ಟ ಇಲಾಖೆಯವರು ಪರಿಶೀಲನೆ ನಡೆಸಿ ಲೈಸೆನ್ಸ್ ನೀಡಿದ್ದಾರೆ. ಆದ್ದರಿಂದ ಇದಕ್ಕೆ ಅಡ್ಡಿಪಡಿಸುವುದು ಸೂಕ್ತವಲ್ಲ’ ಎಂದು ಮಾಲಕರು ಹೇಳಿದ್ದಾರೆ.