ಚೆನ್ನೈ: ಮಕ್ಕಳಲ್ಲಿ ಮುಗ್ಧತೆ ಇರುತ್ತದೆ. ಬೆಳೆಯುತ್ತಾ ಹೋದಂತೆ ಮಕ್ಕಳಲ್ಲಿ ಪ್ರಾಮಾಣಿಕತೆ ಹಾಗೂ ಮಾನವೀಯ ಗುಣಗಳು ಕಾಣಸಿಗುತ್ತದೆ. ಇಲ್ಲೊಬ್ಬ ಬಾಲಕ ತನ್ನ ಮುಗ್ಧ ಹಾಗೂ ಮಾನವೀಯ ಗುಣದಿಂದ ಇಂಟರ್ ನೆಟ್ ನಲ್ಲಿ ವೈರಲ್ ಆಗಿದ್ದಾನೆ.
ಮದ್ರಾಸ್ ಮೂಲದ ವಿ.ಬಾಲಜಿ ಅವರ ಮಗ ಅಂಕಿತ್ ಅವರು ತನ್ನ ಮಾನವೀಯ ಗುಣದಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾನೆ. ತನ್ನ ಮನೆಯ ಅಡುಗೆ ಕೆಲಸಕ್ಕೆ ಬರುವ ಮಹಿಳೆಗೆ ತಾನು ಕೂಡಿಟ್ಟ ಹಣದಿಂದ ಮೊಬೈಲ್ ಫೋನ್ ಉಡುಗೊರೆಯಾಗಿ ಕೊಟ್ಟಿದ್ದಾನೆ.
ಈ ಬಗ್ಗೆ ಅಂಕಿತ್ ತಂದೆ ವಿ.ಬಾಲಜಿ ಅವರು ಟ್ವಿಟರ್(ಎಕ್ಸ್) ನಲ್ಲಿ ಫೋಟೋ ಹಂಚಿಕೊಂಡು, ಬರೆದುಕೊಂಡಿದ್ದಾರೆ. “ಅಂಕಿತ್ ವಾರಾಂತ್ಯದಲ್ಲಿ ಬ್ಯಾಡ್ಮಿಂಟನ್ ಟೂರ್ನಮೆಂಟ್ ಗಳನ್ನು ಆಡಿ ಅದರಿಂದ ಬಂದ ಹಣವನ್ನು ಕೂಡಿಟ್ಟಿದ್ದಾನೆ. ಇದುವರೆಗೆ 7 ವರೆಗೆ ರೂ.ಗಳನ್ನು ಆತ ಕೂಡಿಟ್ಟಿದ್ದಾನೆ. ಇವತ್ತು ನಮ್ಮ ಮನೆಯ ಅಡುಗೆ ಕೆಲಸದಾಕೆ ಸರೋಜಾಳಿಗೆ 2000 ಬೆಲೆಯ ಮೊಬೈಲ್ ಫೋನ್ ನ್ನು ತನ್ನ ಹಣದಿಂದಲೇ ತಂದು ಉಡುಗೊರೆಯಾಗಿ ನೀಡಿದ್ದಾನೆ. ಸರೋಜಾ ಅಂಕಿತ್ 6 ತಿಂಗಳು ಇರುವಾಗಿನಿಂದ ಆತನನ್ನು ಆರೈಕೆ ಮಾಡುತ್ತಿದ್ದಳು” ಎಂದು ಬಾಲಜಿ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. “”ಅದ್ಭುತ… ನೀವು ಪೋಷಕರಾಗಿ ದೊಡ್ಡ ಮೆಚ್ಚುಗೆಗೆ ಅರ್ಹರು..” ಎಂದು ಒಬ್ಬರು ಬರೆದುಕೊಂಡಿದ್ದಾರೆ.
“ನನ್ನ ಪೋಷಕರು ಕೊಡುವುದರ ಬಗ್ಗೆ ನನಗೆ ಹೆಚ್ಚಿನದನ್ನು ಕಲಿಸಿದ್ದಾರೆ. ಈ ಟ್ವೀಟ್ ನನಗೆ ಕೃತಜ್ಞತೆ ಮತ್ತು ಸಂತೋಷವನ್ನು ತುಂಬಿದೆ. ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ಕೊಡುವವರ ಮತ್ತು ಸ್ವೀಕರಿಸುವವರ ಸಂತೋಷವು ಟನ್ ಗಳಷ್ಟು ಆಶೀರ್ವಾದಗಳನ್ನು ಹೇಳುತ್ತದೆ. ಇದನ್ನೇ ನಮ್ಮ ಸಂಸ್ಕೃತಿ ಕಲಿಸುತ್ತದೆ ಮತ್ತು ಜವಾಬ್ದಾರಿಯುತ ಮತ್ತು ದಯೆಯುಳ್ಳ ನಾಗರಿಕರಾಗಿ ಬೆಳೆಯಲು ನಮಗೆ ಇದು ಸಹಾಯ ಮಾಡುತ್ತದೆ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.