Advertisement
ಕಾನೂನು ಬಾಹಿರವಾಗಿ ಹೆತ್ತವರಿಲ್ಲದ ನವಜಾತ ಶಿಶುಗಳನ್ನು ಪಡೆಯುತ್ತಿದ್ದ ಸ್ಟಾಪ್ ನರ್ಸ್ ಜಯಮಾಲಾ ಪಾಟೀಲ (ಬಿಜಾಪುರ) ಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಬೇರೆಯವರಿಗೆ ಹಣ ನೀಡಿ ಮಕ್ಕಳನ್ನು ಪಾಲನೆ ಮಾಡಲಾಗುತ್ತಿದೆ ಎಂಬುದನ್ನು ಪೊಲೀಸರು ಪತ್ತೆ ಹೆಚ್ಚಿದ್ದಾರೆ.
Related Articles
Advertisement
ನರ್ಸ್ ಜಯಮಾಲಾ ಪಾಟೀಲ ಅಕ್ರಮವಾಗಿ ಮಕ್ಕಳನ್ನು ಸಾಕಾಣಿಕೆ ಮಾಡುವ ವಿಷಯ ತಿಳಿಯುತ್ತಲೇ ಮಕ್ಕಳ ಸಹಾಯವಾಣಿ ಕೇಂದ್ರದ ನಿರ್ದೇಶಕಿ ವಿಜಯಪುರ ಮಹಿಳಾ ಪೊಲೀಸ್ ಠಾಣೆಗೆ ಮೇ 20 ರಂದು ದೂರು ನೀಡಿದ್ದು, ಇಬ್ಬರು ಮಕ್ಕಳನ್ನು ಅಕ್ರಮವಾಗಿ ಮಕ್ಕಳನ್ನು ಪಡೆದು, ಪಾಲನೆ ಮಾಡಲು ಬೇರೆಯವರಿಗೆ ನೀಡಿದ್ದಾಗಿ ದೂರಿನಲ್ಲಿ ವಿವರಿಸಲಾಗಿತ್ತು.
ಮೇ 21 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿರುವ ಆರೋಪಿ ನರ್ಸ್ ಜಯಮಾಲಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಬೇರೆಯವರ ಬಳಿ ಪಾಲನೆಗೆ ಬಿಟ್ಟಿರುವ ಇಬ್ಬರು ಮಕ್ಕಳು ಮಾತ್ರವಲ್ಲದೇ ತನ್ನದೇ ಮನೆಯಲ್ಲಿ ಹೆತ್ತವರಿಲ್ಲದ 5 ವರ್ಷದ ಒಂದು ಗಂಡು ಮಗು ಹಾಗೂ 3 ವರ್ಷದ ಒಂದು ಹೆಣ್ಣು ಮಗುವನ್ನು ಪಾಲನೆ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಕೂಡಲೇ ಜಾಗೃತರಾದ ಪೊಲೀಸರು ಮಕ್ಕಳ ಸಹಾಯವಾಣಿ ಕೇಂದ್ರದ ದೂರು ಆಧರಿಸಿ ನಾಲ್ಕು ಮಕ್ಕಳನ್ನು ರಕ್ಷಿಸಿ, ಮಕ್ಕಳ ಸಂರಕ್ಷಣಾ ಘಟಕದ ಮೂಲಕ ನಗರದಲ್ಲಿರುವ ಶ್ರೀಸಿದ್ದೇಶ್ವರ ಮಕ್ಕಳ ದತ್ತು ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.
ನಾಲ್ಕು ಮಕ್ಕಳು ಮಾತ್ರವಲ್ಲದೇ 5 ವರ್ಷದ ಇನ್ನೊಂದು ಹೆಣ್ಣು ಮಗುವನ್ನು ಮಹಾರಾಷ್ಟ್ರದ ಸೋಲಾಪುರ ಪರಿಸರದಲ್ಲಿ ಬೇರೆಯವರಿಗೆ ಪಾಲನೆ ಮಾಡಲು ಅಕ್ರಮವಾಗಿ ತಾನು ನೀಡಿದ್ದಾಗಿ ತಿಳಿದು ಬಂದಿದೆ. ಸದರಿ ಮಗುವಿನ ರಕ್ಷಣೆಗಾಗಿ ಪೊಲೀಸರು ಸೋಲಾಪುರಕ್ಕೆ ತೆರಳಿದ್ದಾರೆ.
ಇದನ್ನೂ ಓದಿ:ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿ
ಈ ಮಧ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ದೂರು ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಲಾಗುತ್ತಿದೆ. ಸದರಿ ಪ್ರಕರಣದ ಹಿಂದೆ ಸ್ಟಾಪ್ ನರ್ಸ್ ಮಾತ್ರ ಇರುವಳೋ, ಬೇರೆಯವರ ಪಾತ್ರದ ದೊಡ್ಡ ಜಾಲವಿದಯೇ ಎಂಬುದನ್ನು ಪತ್ತೆ ಹೆಚ್ಚಲು ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಆನಂದಕುಮಾರ, ದೂರು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಕಾನೂನು ಬಾಹಿರವಾಗಿ ಯಾರೂ ಮಕ್ಕಳನ್ನು ಪಾಲನೆ ಮಾಡುವ, ಮಾರಾಟ ಮಾಡುವ ಕೆಲಸಕ್ಕೆ ಮುಂದಾಗಬಾರದು. ಒಂದೊಮ್ಮೆ ಮಕ್ಕಳು ಇಲ್ಲದವರು ನಿಯಮಾನುಸಾರ ಷರತ್ತಿಗೆ ಒಳಪಟ್ಟು ದತ್ತು ಸ್ವೀಕಾರ ಕೇಂದ್ರದಿಂದ ಮಕ್ಕಳನ್ನು ಕಾನೂನು ಬದ್ಧವಾಗಿ ದತ್ತು ಪಡೆಯಬೇಕು ಎಂದು ಸೂಚಿಸಿದ್ದಾರೆ.