ಬೆಂಗಳೂರು: ಮನೆಗೆ ನುಗ್ಗಿ ತಾಯಿ ಪಕ್ಕದಲ್ಲಿ ಮಲಗಿದ್ದ 42 ದಿನದ ನವಜಾತ ಶಿಶುವನ್ನು ಅಪಹರಣ ಮಾಡಿದ್ದ ಮಹಿಳೆಯನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಸಾರ್ವಜನಿಕರ ಸಹಾಯದಿಂದ ಬಂಧಿಸಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ ನಂದಿನಿ ಅಲಿಯಾಸ್ ಆಯೆಷಾ ಬಂಧಿತೆ. ಈಕೆ ಅಪಹರಿಸಿದ್ದ ಹೆಣ್ಣು ಮಗುವನ್ನು ರಕ್ಷಣೆ ಮಾಡಿದ್ದು, ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕಲಾಸಿಪಾಳ್ಯದ ದುರ್ಗಮ್ಮ ಟೆಂಪಲ್ ರಸ್ತೆ ಶಂಭುಪಾಳ್ಯ ನಿವಾಸಿ ಫಾಹಿìನ್ ಬೇಗಂ(27) ಎಂಬವರು ಶನಿವಾರ ಬೆಳಗ್ಗೆ ತಮ್ಮ ಮನೆಯಲ್ಲಿ 42 ದಿನದ ಮಗಳಿಗೆ ಹಾಲುಣಿಸಿ ಪಕ್ಕದಲ್ಲಿ ಮಲಗಿಸಿಕೊಂಡು, ತಾವು ಮಲಗಿದ್ದರು. ಮನೆ ಬಾಗಿಲು ತೆರೆದಿತ್ತು. ಈ ವೇಳೆ ಮನೆಗೆ ನುಗ್ಗಿದ ಆಯೆಷಾ ಏಕಾಏಕಿ ಮನೆಗೆ ನುಗ್ಗಿ, ಫಾರ್ಹೀನ್ ಬೇಗಂರ ಮೊಬೈಲ್ ಮತ್ತು ಪಕ್ಕದಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದಾಳು. ಕೆಲ ಹೊತ್ತಿನ ಬಳಿಕ ಎಚ್ಚರಗೊಂಡ ಫಾರ್ಹೀನ್ ಬೇಗಂ ಗಾಬರಿಗೊಂಡು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ.
ನಂತರ ಪತಿಗೆ ಮಾಹಿತಿ ನೀಡಿ ಕಲಾಸಿಪಾಳ್ಯ ಠಾಣೆಗೆ ದೂರು ನೀಡಿದ್ದರು. ಇತ್ತ ಪೊಲೀಸರು ಕೂಡಲೇ ಕ್ಷಿಪ್ರ ಕಾರ್ಯಾ ಚರಣೆ ನಡೆಸಿ ಘಟನಾ ಸ್ಥಳ ಸಮೀಪದ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆಗ ಮಹಿಳೆಯೊಬ್ಬಳ ಸುಳಿವು ಸಿಕ್ಕಿತ್ತು ಎಂದು ಪೊಲೀಸರು ಹೇಳಿದರು.
ಸಾರ್ವಜನಿಕರ ಸಹಾಯ: ಮತ್ತೂಂದೆಡೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಗುವನ್ನು ಎತ್ತಿಕೊಂಡು ಮಾಗಡಿ ರಸ್ತೆಯ ರೈಲ್ವೆ ಕ್ವಾರ್ಟರ್ಸ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಯೆಷಾಳನ್ನು ಸಾರ್ವಜನಿಕರು ಹಿಡಿದು ತಪಾಸಣೆ ನಡೆಸಿದ್ದಾರೆ. ಆಗ ಕಳವು ಮಗು ಎಂಬುದುಗೊತ್ತಾಗಿದೆ. ಕೂಡಲೇ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮಗು ಸಮೇತ ಆಕೆಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಮಗು ಅಪಹರಣ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಮೊಬೈಲ್ ಕಳ್ಳಿ ಆಯಿಷಾ: ಮುಳಬಾಗಿಲು ಮೂಲದ ನಂದಿನಿ ಕೆಲ ವರ್ಷಗಳ ಹಿಂದೆ ಆಯಿಷಾ ಆಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದು, ಶಿವಾಜಿನಗರದಲ್ಲಿ ವಾಸವಾಗಿದ್ದಾಳೆ. ಅಲ್ಲದೆ, ಜೀವನ ನಿರ್ವಹಣೆಗಾಗಿ ಆಕೆ ಮೊಬೈಲ್ ಕಳವು ಮಾಡುತ್ತಿದ್ದಳು. ಈ ಹಿಂದೆ ಹಲಸೂರು ಗೇಟ್ ಠಾಣೆ ಪೊಲೀಸರು ಈಕೆಯನ್ನು ಮೊಬೈಲ್ ಕಳವು ಪ್ರಕರಣದಲ್ಲಿ ಬಂಧಿಸಿದ್ದರು. ಹೀಗೆ ನಗರದ ವಿವಿಧೆ ಮೊಬೈಲ್ ಕಳವು ಮಾಡುತ್ತಿದ್ದಳು. ಕಲಾಸಿಪಾಳ್ಯದಲ್ಲೂ ಮೊಬೈಲ್ ಕಳವು ಮಾಡಲೆಂದು ಫಾರ್ಹೀನ್ ಬೇಗಂ ಮನೆಗೆ ಹೋಗಿದ್ದಾಳೆ. ಆದರೆ, ಪಕ್ಕದಲ್ಲಿ ಮಗು ಮಲಗಿದ್ದನ್ನು ಕಂಡು ಅದನ್ನು ಕಳವು ಮಾಡಿ, ಮಗು ಕದ್ದು ಶಿವಾಜಿನಗರದಲ್ಲಿ 30-40 ಸಾವಿರ ರೂ.ಗೆ ಯಾರಿಗಾದರೂ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಳು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.