ಚೆನ್ನೈ: ಸಮರ್ಪಕವಾದ ರಸ್ತೆ ಇಲ್ಲದ ಪರಿಣಾಮ ಹಾವು ಕಚ್ಚಿದ್ದ ಒಂದೂವರೆ ವರ್ಷದ ಮಗುವೊಂದು ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಅಸುನೀಗಿರುವ ಘಟನೆ ತಮಿಳುನಾಡಿನ ವೆಲ್ಲೂರ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Canada ಮದುವೆಯಲ್ಲಿ ಪಂಜಾಬ್ ಮೂಲದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ
18 ತಿಂಗಳ ಮಗುವಿಗೆ ಹಾವು ಕಚ್ಚಿದ್ದು, ಪೋಷಕರು ಮತ್ತು ಸಂಬಂಧಿಕರು ಮಗುವನ್ನು ಸುಮಾರು ಆರು ಕಿಲೋ ಮೀಟರ್ ವರೆಗೆ ನಡೆದುಕೊಂಡು ಬಂದು ವೆಲ್ಲೂರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಗು ದಾರಿ ಮಧ್ಯೆದಲ್ಲಿ ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದರು.
ಸಮರ್ಪಕವಾದ ರಸ್ತೆ, ವಾಹನ ವ್ಯವಸ್ಥೆ ಇಲ್ಲದ ಕಾರಣ, ಆಸ್ಪತ್ರೆಗೆ ತಲುಪಲು ವಿಳಂಬವಾಗಿದ್ದರಿಂದ ಮಗು ಕೊನೆಯುಸಿರೆಳೆಯುವಂತಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಆ ಪ್ರದೇಶದಲ್ಲಿ ಮಿನಿ ಆಂಬುಲೆನ್ಸ್ ವ್ಯವಸ್ಥೆ ಇದ್ದಿದ್ದು, ಮಗುವಿನ ಪೋಷಕರು ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿದ್ದರೆ, ಮಗುವನ್ನು ಆಸ್ಪತ್ರೆಗೆ ದಾಖಲಿಸಬಹುದಾಗಿತ್ತು ಎಂದು ವೆಲ್ಲೂರ್ ಜಿಲ್ಲಾಧಿಕಾರಿ ಎನ್ ಡಿಟಿವಿಗೆ ತಿಳಿಸಿದ್ದಾರೆ. ಸುಮಾರು 1,500 ಜನರು ವಾಸಿಸುವ ಆ ಪ್ರದೇಶದಲ್ಲಿನ ರಸ್ತೆಯನ್ನ ನಿರ್ಮಿಸಲು ಪ್ರಯತ್ನಿಸಲಾಗುತ್ತಿದ್ದು, ಅರಣ್ಯ ಇಲಾಖೆಯ ಒಪ್ಪಿಗೆಗಾಗಿ ಕಾಯುತ್ತಿರುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡಿನ ಬಿಜೆಪಿ ಮುಖಂಡ ಕೆ.ಅಣ್ಣಾಮಲೈ, ಹಾವು ಕಡತದಿಂದ ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಸಂತಾಪ ವ್ಯಕ್ತಪಡಿಸಿದ್ದು, ಪೋಷಕರಿಗೆ ಸಾಂತ್ವಾನ ತಿಳಿಸಿದ್ದಾರೆ.