Advertisement

ಚಂದ್ರಗ್ರಹಣದಂದು ಶಿಶು ಬಲಿ ? ಮನೆ ಟೆರೇಸ್‌ನಲ್ಲಿ ಶಿರೋಭಾಗ ಪತ್ತೆ

03:47 PM Feb 03, 2018 | Team Udayavani |

ಹೈದರಾಬಾದ್‌ : 150 ವರ್ಷಗಳಿಗೆ ಒಮ್ಮೆ ಸಂಭವಿಸುವ ಖಗ್ರಾಸ ಚಂದ್ರಗ್ರಹಣಕ್ಕೆ ಸಂಬಂಧಿಸಿದ ಮೂಢನಂಬಿಕೆಯ ಭಾಗವಾಗಿ ಹಸುಳೆಯೊಂದನ್ನು ಬಲಿ ನೀಡಲಾಗಿದೆಯೇ ಎಂಬ ಬಗ್ಗೆ ಹೈದರಾಬಾದ್‌ ಪೊಲೀಸರು ಈಗ ತೀವ್ರ ತನಿಖೆ ನಡೆಸುತ್ತಿದ್ದಾರೆ.

Advertisement

ಹೈದರಾಬಾದಿನ ಚಿಲುಕಾ ನಗರದಲ್ಲಿನ ಮನೆಯೊಂದರ ಟೆರೇಸ್‌ ಮೇಲೆ ಒಂದೆಡೆ ಮೂಲೆಯಲ್ಲಿ  ಕಸದ ತೊಟ್ಟಿಯಲ್ಲಿ ಅಡಗಿಸಿಡಲಾಗಿದ್ದ ಶಿಶುವಿನ ಛೇದಿತ ಶಿರೋಭಾಗ ಪೆ.1ರ ಗುರುವಾರದಂದು ಪತ್ತೆಯಾಗಿದೆ. 

ಈ ಕಟ್ಟಡದಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಮಹಿಳೆಯೋರ್ವರು ಬಟ್ಟೆ ಒಣಗಿಸಲೆಂದು ಟೆರೇಸ್‌ಗೆ ಹೋಗಿದ್ದಾಗ ಅಲ್ಲಿ ಆಕೆಗೆ ಮಗುವಿನ ಛೇದಿತ ಶಿರೋಭಾಗ ಪತ್ತೆಯಾಯಿತು. ಅದನ್ನು ಕಂಡು ಗಾಬರಿಯಾಗಿ ಮಹಿಳೆಯು ಬೊಬ್ಬಿಟ್ಟಾಗ ನೆರೆಕರೆಯವರೆಲ್ಲ ಧಾವಿಸಿ ಬಂದು ಈ ದೃಶ್ಯವನ್ನು ಕಂಡು ದಿಗಿಲುಗೊಂಡರು. 

ಒಡನೆಯೇ ಪೊಲೀಸರನ್ನು ಎಚ್ಚರಿಸಲಾಗಿ ಅವರು ಸ್ಥಳಕ್ಕೆ ಭೇಟಿಕೊಟ್ಟರು. ಶಿರಚ್ಛೇದನಕ್ಕೆ ಗುರಿಯಾಗಿದ್ದ ಮಗುವ ಎರಡು ಅಥವಾ ಮೂರು ತಿಂಗಳಿನದ್ದಾಗಿರಬಹುದೆಂದು ಅಂದಾಜಿಸಲಾಗಿದೆ. 

ಕ್ಯಾಬ್‌ ಡ್ರೈವರ್‌ ಆಗಿರುವ ಮಹಿಳೆಯ ಅಳಿಯ ರಾಜ್‌ಶೇಖರ್‌ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಆತನನ್ನು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ. ಇದೇ ರೀತಿ ಇನ್ನಿಬ್ಬರು ನರೆಕರೆಯ ನರಹರಿ ಮತ್ತು ಆತನ ಪುತ್ರ ರಂಜಿತ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 

Advertisement

ಪೊಲೀಸ್‌ ಶ್ವಾನವನ್ನು ಕರೆಸಿಕೊಂಡಾಗ ಅದು ನರಹರಿ ಅವರ ಮನೆಯೊಳಗಿನ ಡಸ್ಟ್‌ಬಿನ್‌ ಮೂಸಿ ನೋಡಿದೆ. ನರಹರಿ ಮತ್ತು ರಂಜಿತ್‌ ಆಗೀಗ ಎಂಬಂತೆ ಮೂಢನಂಬಿಕೆಯ ಪೂಜೆಗಳನ್ನು ಮನೆಯಲ್ಲಿ ನಡೆಸಿದವರಾಗಿದ್ದಾರೆ. 

ಟೆರೇಸ್‌ನಲ್ಲಿ ಶಿರಚ್ಛೇದಿತ ಮಗುವಿನ ರಕ್ತದ ಕಲೆಗಳು ಕಂಡುಬಂದಿಲ್ಲ; ಮಗುವನ್ನು ಬೇರೆಲ್ಲೋ ಬಲಿಕೊಟ್ಟ ಬಳಿಕ ಅದರ ತಲೆಯನ್ನು ಇಲ್ಲಿ ತಂದಿಡಲಾಗಿದೆ ಎಂದು ಶಂಕಿಸಲಾಗಿದೆ. ಮೃತ ಮಗುವಿನ ದೇಹದ ಭಾಗಕ್ಕಾಗಿ ಪೊಲೀಸರೀಗ ಹುಡುಕಾಡ ನಡೆಸಿದ್ದಾರೆ. 

ಈ ಕೃತ್ಯಕ್ಕೆ ಮಾಟ-ಮಂತ್ರಗಾರರು ನನ್ನ ಮನೆಯ ಟೆರೇಸನ್ನೇ ಯಾಕೆ ಆಯ್ಕೆ ಮಾಡಿದರು ಎಂದು ಘಟನೆಯಿಂದ ತೀವ್ರ ಆಘಾತಗೊಂಡ ಮನೆಯೊಡತಿ ಬಾಲಲಕ್ಷ್ಮೀ ಕಣ್ಣೀರು ಸುರಿಸುತ್ತಾ ಪೊಲೀಸರಿಗೆ ಪ್ರಶ್ನಿಸುತ್ತಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next