Advertisement

ಬಾಲ್ಯ ವಿವಾಹ ಪ್ರೇರೇಪಿಸುವವರಿಗೆ ಶಿಕ್ಷೆ ಖಚಿತ

11:50 AM Dec 25, 2021 | Team Udayavani |

 ದಾವಣಗೆರೆ: ಮಕ್ಕಳು ಮತ್ತು ಮಹಿಳೆಯರು ಅನೈತಿಕ ಸಾಗಾಣಿಕೆಗೆ ಒಳಗಾಗದಂತೆ ಕಾಯಿದೆಯ ಬಲದಿಂದ ಅವರನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಹೇಳಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್‌ ಇಲಾಖೆ, ಮಕ್ಕಳ ರಕ್ಷಣಾ ಘಟಕ ಇವರುಗಳ ವತಿಯಿಂದ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದರೂ ವರ್ಷದಲ್ಲಿ ಒಂದೆರಡು ಪ್ರಕರಣಗಳು ದಾಖಲಾಗುತ್ತಿವೆ. ಬಾಲ್ಯವಿವಾಹ, ಬಾಲಕಾರ್ಮಿಕತೆ, ಮಹಿಳೆ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಮುಂತಾದವುಗಳ ಬಗೆಗೆ ಅರಿವು ಮೂಡಿಸಲು ಆಯೋಜಿಸಿರುವ ಕಾರ್ಯಾಗಾರ ಬಹಳ ಅವಶ್ಯವಾಗಿವೆ ಎಂದರು. ಹೆಣ್ಣು ಮಕ್ಕಳಿಗೆ 16-17 ವರ್ಷಕ್ಕೆ ಬಾಲ್ಯ ವಿವಾಹ ಮಾಡಲಾಗುತ್ತದೆ. ಯಾರೊಬ್ಬರಿಗೂ ತಾವು ಮಾಡುತ್ತಿರುವ ತಪ್ಪಿನ ಅರಿವಾಗುವುದಿಲ್ಲ. ಎಲ್ಲರೂ ಹಗುರವಾಗಿ ತೆಗೆದುಕೊಳ್ಳುತ್ತಾರೆ. ಆ ಹುಡುಗಿಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಅಂತಹ ಪ್ರಕರಣಗಳನ್ನು ಯಾರೂ ವರದಿ ಮಾಡುವುದಿಲ್ಲ. ಆ ಹುಡುಗಿ ಗರ್ಭಿಣಿ ಆದ ನಂತರ ಹೊರಗೆ ಗೊತ್ತಾಗುತ್ತದೆ.

ಇಂತಹ ಕೃತ್ಯ ಎಸಗುವವರಿಗೆ 10 ವರ್ಷಗಳ ಶಿಕ್ಷೆ ಇದೆ. ಬಾಲ್ಯ ವಿವಾಹ ಮಾಡುವವರಿಗೆ ಹಾಗೂ ಪ್ರೇರೇಪಿಸುವವರಿಗೆ ಶಿಕ್ಷೆ ಆಗಬೇಕು. ಶಿಕ್ಷೆ ಆಗಿದ್ದನ್ನು ಹೆಚ್ಚು ಪ್ರಚಾರ ಮಾಡಬೇಕು. ಅದರಿಂದ ಉಳಿದವರಿಗೂ ಭಯ ಹುಟ್ಟುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಅಂತಹ ತಪ್ಪು ಮಾಡಲು ಹೆದರುತ್ತಾರೆ ಎಂದರು. ಮಕ್ಕಳನ್ನು ಬಾಲ ಕಾರ್ಮಿಕತೆಗೆ ದೂಡುವುದು ಕೂಡ ಅಪರಾಧವಾಗಿದ್ದು, ಹೀಗೆ ಮಾಡುವುದರಿಂದ ಅವರು ಉನ್ನತ ಮಟ್ಟಕ್ಕೆ ಹೋಗುವುದನ್ನು ತಡೆದಂತಾಗುತ್ತದೆ. ಮಕ್ಕಳು ಬಾಲ್ಯದಲ್ಲಿ ಆಟ ಪಾಠಗಳಲ್ಲಿ ತೊಡಗಿಕೊಳ್ಳಬೇಕು, ಅವರನ್ನು ದುಡಿಮೆಗೆ ಹಚ್ಚಬಾರದು ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಆಗೊಮ್ಮೆ ಈಗೊಮ್ಮೆ ಇಂತಹ ಪ್ರಕರಣಗಳು ಕಂಡುಬರುತ್ತಿದ್ದು, ಇಂತಹ ಯಾವೊಂದು ಪ್ರಕರಣಗಳೂ ನಡೆಯದಂತೆ ಎಲ್ಲ ಇಲಾಖೆಗಳು ಪರಸ್ಪರ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೊಪ್ಪಳ ವಿಭಾಗದ ಯುನಿಸೆಫ್‌ನ ಕೆ.ರಾಘವೇಂದ್ರ ಭಟ್‌ ಕಾಯ್ದೆ ಬಗ್ಗೆ ಶಿಬಿರಾರ್ಥಿಗಳಿಗೆ ಅರಿವು ಮೂಡಿಸಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್‌ ಇದ್ದರು. ಪೊಲೀಸ್‌ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next