ಕನಕಪುರ: ಸರ್ಕಾರ ಹಲವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದರೂ ದೇಶದಲ್ಲಿ ಬಾಲ್ಯವಿವಾಹ ಪದ್ಧತಿ ಇನ್ನೂ ಜೀವಂತವಾಗಿದೆ ಎಂದು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಸಾತನೂರು ಹೋಬಳಿಯ ಅರೆಕಟ್ಟೆದೊಡ್ಡಿ ಗ್ರಾಮದ ಶ್ರೀ ರಾಮ ಮಂದಿರದ ಆವರಣದಲ್ಲಿ ವೀರಾಂಜನೇಯ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಜಾನಪದ ಸುಗ್ಗಿ, ಸ್ವತ್ಛ ಭಾರತ್ ಮಿಷನ್ ಹಾಗೂ ಬಾಲ್ಯವಿವಾಹ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯವಿವಾಹ ಪದ್ಧತಿಯಿಂದ ಮಕ್ಕಳ ಭವಿಷ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಪೋಷಕರಿಗೆ ಅರಿವಿದ್ದರೂ, ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಕಳೆದ 2020ರಲ್ಲಿ 10ಕ್ಕೂ ಹೆಚ್ಚು ಬಾಲ್ಯವಿವಾಹ ಪ್ರಕರಣಗಳನ್ನು ತಡೆದಿದ್ದೇವೆ. ಮೂರು ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದೆ. ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಎಂಬ ಅರಿವಿದ್ದರೂ, ತಮ್ಮ ಹೆಗಲ ಮೇಲಿನ ಜವಾಬ್ದಾರಿ ಇಳಿಸಿಕೊಳ್ಳು ಪೋಷಕರು ಬಾಲ್ಯವಿವಾಹ ಮಾಡಿ ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ದೂಡುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಹಸು ಮೈ ತೊಳೆಯಲು ಹೋದ ಇಬ್ಬರು ನೀರು ಪಾಲು
ಸ್ವತ್ಛತೆ ಕಾಪಾಡಿಕೊಳ್ಳಿ: ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್ ಮಾತನಾಡಿ, ಪ್ರತಿಯೊಬ್ಬರು ಸರ್ಕಾರದ ಸಹಾಯಧನ ಪಡೆದು ಶೌಚಾಲಯ ನಿರ್ಮಿಸಿಕೊಳ್ಳಬೇಕು. ಚರಂಡಿಯಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಮನೆಯ ಸುತ್ತಮುತ್ತ ಸ್ವತ್ಛತೆಯನ್ನು ಕಾಪಾಡಿಕೊಂಡು ಆರೋಗ್ಯವಂತ ಸಮಾಜಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ವೆಂಕಟಾಚಲ ಮತ್ತು ತಂಡದಿಂದ ಬಾಲ್ಯವಿವಾಹ ಜಾಗೃತಿ ಗೀತೆ, ಗೋವಿಂದರಾಜು ತಂಡದವರು ಸ್ವತ್ಛತೆ ಜಾಗೃತಿ ಗೀತೆ ಹಾಗೂ ಜಾನಪದ ಗೀತೆ ಹಾಡಿದರು.
ಟ್ರಸ್ಟ್‌ನ ಅಧ್ಯಕ್ಷ ಪಲ್ಲವಿ ಗೋವಿಂದರಾಜು, ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಸುಚಿತ್ರ, ಕಗ್ಗಲೀಪುರ ಶಾಂತಿ ನಿಕೇತನ ಗ್ರಾಮಾಭಿವೃದ್ದಿ ಸಂಸ್ಥೆ ಅಧ್ಯಕ್ಷೆ ಶಾಂತ, ಗ್ರಾಪಂ ಸದಸ್ಯ ಜ್ಯೋತಿ ಮಹೇಶ್, ಸುನಿತ ಅನಿಲ್‌ಕುಮಾರ್, ಗ್ರಾಮದ ಮುಖಂಡ ಪುಟ್ಟಸ್ವಾಮಿಗೌಡ ಉಪಸ್ಥಿತರಿದ್ದರು.