Advertisement
ಬಾಲ್ಯ ವಿವಾಹಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಇದರ ತಡೆಗೆ ಅನೇಕ ರೀತಿಯ ಪ್ರಯತ್ನಗಳನ್ನು ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿವೆ. ಆದರೂ, ಅರಿವಿನ ಕೊರತೆ, ಹೆಣ್ಣು ಮನೆಯಲ್ಲಿದ್ದರೆ ಭವಿಷ್ಯದ ಆತಂಕ, ಮುಂದೆ ಹುಡುಗನನ್ನು ಹುಡುಕುವುದು ಕಷ್ಟ, ಆರ್ಥಿಕ ಪರಿಸ್ಥಿತಿ.. ಹೀಗೆ ಹಲವು ಕಾರಣಕ್ಕಾಗಿ ಇಂದಿಗೂ ಬಾಲ್ಯ ವಿವಾಹ ನಡೆಯುತ್ತಲೇ ಇವೆ. ಹಾಗೆಯೇ ಬಾಲ್ಯ ವಿವಾಹ ತಡೆದು, ಬಾಲಕ ಅಥವಾ ಬಾಲಕಿಯನ್ನು ರಕ್ಷಿಸುತ್ತಿರುವ ಅನೇಕ ಪ್ರಕರಣಗಳು ನಡೆಯುತ್ತಿದೆ. ಆದರೂ ಪಾಲಕ, ಪೋಷಕರು ಅಧಿಕಾರಿಗಳ ಕಣ್ಣು ತಪ್ಪಿಸಿ ಬಾಲ್ಯವಿವಾಹ ಮಾಡುತ್ತಿದ್ದಾರೆಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮೂಲಗಳು ತಿಳಿಸಿವೆ.
Related Articles
Advertisement
ತುರ್ತು ಸಭೆ: ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮ ಜಾರಿ ಮಾಡಿದೆ. ಮನೆಯಲ್ಲೇ ಮದುವೆಗೆ ಅವಕಾಶ ನೀಡಿದೆ. ಇಂತಹ ಸಂದರ್ಭಗಳಲ್ಲಿ ಬಾಲ್ಯ ವಿವಾಹ ಹೆಚ್ಚು ನಡೆಯುವ ಸಾಧ್ಯತೆ ಇರುತ್ತದೆ. ಅಧಿಕಾರಿಗಳಿಗೂ ಮಾಹಿತಿ ಇರುವುದಿಲ್ಲ. ಹೀಗಾಗಿ ಮುಂದೆ ನಡೆಯಬಹುದಾದ ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ತುರ್ತು ಸಭೆ ಕರೆದಿದ್ದೇವೆ. ಅಗತ್ಯ ಚರ್ಚೆ ನಡೆಸಿ, ಸರ್ಕಾರ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾಹಿತಿ ಒದಗಿಸಲಿದ್ದೇವೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಡಾ. ಆಂಥೋಣಿ ಸಬಾಸ್ಟಿನ್ ವಿವರ ನೀಡಿದರು.
ಆತಂಕ ಹೆಚ್ಚಿದೆ, ಅರಿವೂ ಅಗತ್ಯಲಾಕ್ಡೌನ್ ಸಂದರ್ಭದಲ್ಲಿ ಊರು, ಕೇರಿಗಳಲ್ಲಿ 16ರಿಂದ 18ಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತದೆ. ಇದರಿಂದ ಹೆಣ್ಣುಮಗುವಿನ ಶೈಕ್ಷಣಿಕ ಭವಿಷ್ಯವೂ ಹಾಳಾಗುತ್ತದೆ. ಹೀಗಾಗಿ ಪಾಲಕ, ಪೋಷಕರಿಗೆ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆ. ಚೈಲ್ಡ್ ಹೆಲ್ಪ್ ಲೈನ್ ಬಾಲ್ಯ ವಿವಾಹದ ಕರೆಗಳು ಬರಲು ಆರಂಭವಾಗಿದೆ. ಆತಂಕವಂತೂ ಇದ್ದೇ ಇದೆ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ನಿರ್ದೇಶಕ ನಾಗಸಿಂಹ ಜಿ.ರಾವ್ ಕಳವಳ ವ್ಯಕ್ತಪಡಿಸಿದ್ದಾರೆ. ಮಾರ್ಗಸೂಚಿ ಪರಿಷ್ಕರಿಸಲು ಮನವಿ
ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಮನೆಯಲ್ಲೇ ಮದುವೆ ಮಾಡಿ ಎಂಬ ಸರ್ಕಾರದ ಮಾರ್ಗಸೂಚಿಯಿಂದ ಬಾಲ್ಯ ವಿವಾಹ ಹೆಚ್ಚಾಗುವ ಸಾಧ್ಯತೆಯಿದ್ದು, ಅದನ್ನು ಪರಿಷ್ಕರಿಸಬೇಕೆಂದು ಚೈಲ್ಡ್ ರೈಟ್ಸ್ ಟ್ರಸ್ಟ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನವಿ ಮಾಡಿದೆ. ಮದುವೆಗೆ ಹಾಜರಾಗುವವರಿಗೆ ನೀಡಲಾಗುವ ಪಾಸ್‌ಗಳ ಮೇಲೆ ಬಾಲ್ಯ ವಿವಾಹ ಕಾನೂನು ಬಾಹಿರ-ಮಕ್ಕಳ ರಕ್ಷಣೆಗೆ ಕರೆ ಮಾಡಿ ಚೈಲ್ಡ್ ಲೈನ್ 1098ಗೆ ಈ ಮಾಹಿತಿಗಳನ್ನು ಪ್ರಕಟಿಸಬೇಕೆಂದು ಟ್ರಸ್ಟ್ ಕೋರಿದೆ.